ನಕ್ಸಲರಿಗೆ ಕೊಡುವ ಪರಿಹಾರವನ್ನು ನಮಗೂ ಕೊಡಿ: ರಾಜ್ಯ ಸರ್ಕಾರಕ್ಕೆ ಸುಗುಣ ಮನವಿ

| Published : Jan 09 2025, 12:48 AM IST

ನಕ್ಸಲರಿಗೆ ಕೊಡುವ ಪರಿಹಾರವನ್ನು ನಮಗೂ ಕೊಡಿ: ರಾಜ್ಯ ಸರ್ಕಾರಕ್ಕೆ ಸುಗುಣ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಶರಣಾಗತಿ ಆಗುವ ನಕ್ಸಲರಿಗೆ ಕೊಡುವ ಪರಿಹಾರವನ್ನು ನಮಗೂ ಕೊಡಿ ಸಾಕು ಎಂದು ನಕ್ಸಲ್‌ ವಿಕ್ರಮ್‌ ಗೌಡ ಸಹೋದರಿ ಸುಗುಣ ಹೇಳಿದರು. ನಕ್ಸಲರ ಶರಣಾಗತಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ನವೆಂಬರ್ ತಿಂಗಳಲ್ಲಿ ಎಎನ್ಎಫ್ ಪೊಲೀಸರ ಎನ್ಕೌಂಟರ್ ನಲ್ಲಿ ಮೃತಪಟ್ಟ ನಕ್ಸಲ್ ನಾಯಕ ವಿಕ್ರಂ ಗೌಡ ಬಳಿಕ ನಕ್ಸಲರು ಭಯಭೀತರಾಗಿ ಶರಣಾಗತಿಯಾಗಿದ್ದರೆ ಇನ್ನೊಂದೆಡೆ, ನಕ್ಸಲ್ ನಾಯಕ ವಿಕ್ರಂ ಗೌಡ ಸಹೋದರಿ ಸುಗುಣ, ಅಣ್ಣನ ಜೀವ ವಾಪಸ್ ಕೊಡೋದಕ್ಕೆ ಸಾಧ್ಯವಿಲ್ಲ, ಪರಿಹಾರ ಆದರೂ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನಕ್ಸಲರ ಶರಣಾಗತಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿರುವ ನಕ್ಸಲ್ ವಿಕ್ರಮ್ ಗೌಡ ಸಹೋದರಿ ಸುಗುಣ, ಶರಣಾಗತಿ ಆಗುವ ನಕ್ಸಲರಿಗೆ ಕೊಡುವ ಪರಿಹಾರವನ್ನು ನಮಗೂ ಕೊಡಿ ಸಾಕು, ಎನ್ಕೌಂಟರ್ ಆಗಿದೆ, ಅಣ್ಣನ ಜೀವ ಹೋಗಿಯಾಗಿದೆ. ಉಳಿದವರಿಗೆ ಕೊಡುವ ಪರಿಹಾರ ನಮಗೆ ಕೊಟ್ಟರೆ ಸಾಕು. ನಾವು ಕಷ್ಟದಲ್ಲಿದ್ದೇವೆ ಸ್ವಂತ ಮನೆಯಾಗಬೇಕಿದೆ. ಒಂದು ದಿನ ಕೆಲಸಕ್ಕೆ ಹೋಗದೆ ಇದ್ದರೆ ನಮ್ಮ ಬದುಕು ಸಾಗೋದಿಲ್ಲ ಎಂದು ಮಾಧ್ಯಮಗಳೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ಸುನಿಲ್ ಕುಮಾರ್ ಟ್ವೀಟ್: ಆರು ಮಂದಿ ನಕ್ಸಲರಿಗೆ ರಾಜ್ಯ ಸರ್ಕಾರ ಶರಣಾಗತಿ ಪ್ಯಾಕೇಜ್ ನೀಡುತ್ತಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ ಸುನೀಲ್ ಕುಮಾರ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಯಾವ ಮಾನದಂಡದ ಮೇಲೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ? ಎಂಬುದನ್ನು ಸ್ಪಷ್ಟಪಡಿಸಬೇಕು. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ನಕ್ಸಲರಿಗೆ - ಉಗ್ರರಿಗೆ ಸುಗ್ಗಿ. ಅವರಿಗೆ ಕ್ಷಮೆ, ಪ್ರಕರಣ ರದ್ದು, ಸುಖ-ಸೌಕರ್ಯ ಎಲ್ಲವೂ!

ಕಾನೂನಿನ ಕೊಲೆಯಾಗಿದೆ: ಭೂಗತ ಚಟುವಟಿಕೆ ನಡೆಸಿ ತಲೆಮರೆಸಿಕೊಂಡಿದ್ದ ನಕ್ಸಲರು ಶರಣಾಗಬೇಕಿರುವುದು ಸಂಬಂಧಪಟ್ಟ ಎಸ್ಪಿ ಕಚೇರಿ ಅಥವಾ ಸಬ್ ಇನ್ಸ್‌ಪೆಕ್ಟರ್ ಎದುರು. ಆದರೆ ಇಲ್ಲೇನಾಗುತ್ತಿದೆ?.

ಆರು ಕೋಟಿ ಕನ್ನಡಿಗರ ಮುಖ್ಯಮಂತ್ರಿ ತಮ್ಮ ಅಧಿಕೃತ ಕಚೇರಿಯಲ್ಲಿ ಆರು ಮಂದಿ ನಕ್ಸಲರನ್ನು ಸ್ವಾಗತಿಸಲು ನಡು ಬಗ್ಗಿಸಿ ನಿಂತಿದ್ದಾರೆ. ಕರ್ನಾಟಕದಲ್ಲಿ ಕಾನೂನಿನ ಕೊಲೆಯಾಗಿದೆ. ಸರ್ಕಾರವೇ ಪ್ರಾಯೋಜಿಸಿದೆ ಎಂದು ಟೀಕಿಸಿದ್ದಾರೆ.

ಶರಣಾಗುತ್ತಿರುವುದು ಒಳ್ಳೆಯ ಬೆಳವಣಿಗೆ: ಮುಖ್ಯವಾಹಿನಿಯಲ್ಲಿದ್ದುಕೊಂಡು ಅಸಮಾನತೆ ಹಾಗೂ ನ್ಯಾಯಕ್ಕಾಗಿ ಹೋರಾಟ ನಡೆಸಬೇಕೇ ಹೊರತು ಶಸ್ತ್ರಾಸ್ತ್ರ ಹಿಡಿದು ರಕ್ತಕ್ರಾಂತಿಯಿಂದ ಏನೂ ಸಾಧಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ 6 ಜನ ನಕ್ಸಲರು ಬಂದೂಕು ಬಿಟ್ಟು ಸರ್ಕಾರಕ್ಕೆ ಶರಣಾಗುತ್ತಿರುವುದು ಸ್ವಾಗತಾರ್ಹ ಎಂದು ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧ‌ರ್ ಗೌಡ ಈದು ಹೇಳಿದ್ದಾರೆ.

ಎರಡು ದಶಕಗಳಿಂದ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಿಂದ ನಕ್ಸಲ್‌ ಚಟುವಟಿಕೆ ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಶರಣಾಗತಿಯಾದ ನಕ್ಸಲರ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸಬೇಕು. ಕಟ್ಟುನಿಟ್ಟಿನ ಅರಣ್ಯ ಕಾಯಿದೆಯನ್ನು ಸಡಿಲಿಸಿ ಆ ಭಾಗದಲ್ಲಿ ನೆನೆಗುದಿಗೆ ಬಿದ್ದಿರುವ ಮೂಲಸೌಕರ್ಯಗಳು ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು, ಮಾತ್ರವಲ್ಲದೇ ಶರಣಾದ ನಕ್ಸಲರ ಕುಟುಂಬಗಳಿಗೆ ಹಾಗೂ ಅರಣ್ಯವಾಸಿಗಳಿಗೆ ಅಧಿಕಾರಿಗಳು ಕಿರುಕುಳ ನೀಡದೇ ಅರಣ್ಯವಾಸಿಗಳ ಆಶೋತ್ತರಗಳಿಗೆ ಸ್ಪಂದಿಸಬೇಕಿದೆ ಎಂದು ಮಲೆಕುಡಿಯ ರಾಜ್ಯಾಧ್ಯಕ್ಷ ಶ್ರೀಧ‌ರ್ ಗೌಡ ಹೇಳಿದ್ದಾರೆ.