ಮೌಲ್ಯಯುತ ಶಿಕ್ಷಣ ನೀಡಿ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಿ-ಶಾಂತಲಿಂಗ ಶ್ರೀ

| Published : Mar 25 2025, 12:47 AM IST

ಮೌಲ್ಯಯುತ ಶಿಕ್ಷಣ ನೀಡಿ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಿ-ಶಾಂತಲಿಂಗ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಶೈಕ್ಷಣಿಕ ಹಂತದಲ್ಲಿ ಮಕ್ಕಳಿಗೆ ನೈತಿಕತೆ, ಮೌಲ್ಯಯುತ ಶಿಕ್ಷಣ ನೀಡಿ ಮಕ್ಕಳನ್ನು ಸಂಸ್ಕಾರಯುತ ಜೀವನದತ್ತ ಕರೆತರುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಬೈರನಟ್ಟಿ-ಶಿರೋಳ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮಿಗಳು ಹೇಳಿದರು.

ನರೇಗಲ್ಲ: ಶೈಕ್ಷಣಿಕ ಹಂತದಲ್ಲಿ ಮಕ್ಕಳಿಗೆ ನೈತಿಕತೆ, ಮೌಲ್ಯಯುತ ಶಿಕ್ಷಣ ನೀಡಿ ಮಕ್ಕಳನ್ನು ಸಂಸ್ಕಾರಯುತ ಜೀವನದತ್ತ ಕರೆತರುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಬೈರನಟ್ಟಿ-ಶಿರೋಳ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮಿಗಳು ಹೇಳಿದರು.

ಸಮೀಪದ ಕೋಟುಮಚಗಿ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಗಂಡುಮಕ್ಕಳ ಶಾಲೆಯ 1985-86ನೇ ಸಾಲಿನ ವಿದ್ಯಾರ್ಥಿಗಳ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಗುರು ಪರಂಪರೆಯಲ್ಲಿ ಶ್ರದ್ಧೆಯಿಂದ ಕಲಿತು ಇಂದಿಗೂ ಕಲಿಸಿದ ಗುರುಗಳು, ಗುರುಮಾತೆಯರನ್ನು ಸ್ಮರಿಸುವ ಕಾರ್ಯ ಶ್ಲಾಘನೀಯ. ಇಲ್ಲಿನ ಹಳೆಯ ವಿದ್ಯಾರ್ಥಿಗಳು ಸಂಸ್ಕಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ ಎಂಬುದಕ್ಕೆ ಇಂದಿನ ಸಮಾರಂಭವೇ ಸಾಕ್ಷಿ. ಈ ನೆಪದಲ್ಲಿ ಈ ಹಿಂದಿನ ಎಲ್ಲ ಗುರುಗಳನ್ನು ಒಂದೇ ವೇದಿಕೆಯ ಮೇಲೆ ಕಾಣುವ ಸೌಭಾಗ್ಯ ಎಲ್ಲರಿಗೂ ದೊರಕಿತು ಎಂದು ಹೇಳಿದ ಶ್ರೀಗಳು, ಶಿಕ್ಷಕರ ಕೈಯಲ್ಲಿ ಶಾಲೆ ಕಲಿತು ಬದುಕು ರೂಪಿಸಿಕೊಂಡವರೆಲ್ಲರೂ ಇಂತಹ ಸಮಾರಂಭಗಳನ್ನು ಏರ್ಪಡಿಸಿ ಗುರುವಿನ ಋಣವನ್ನು ಕಿಂಚಿತ್ತಾದರೂ ತೀರಿಸಲು ಮುಂದಾಗಬೇಕು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ವಿ.ಜಿ. ಕುಲಕರ್ಣಿ ಮಾತನಾಡಿ, ಗುರುವಂದನಾ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣ. ಕಲಿತ ವಿದ್ಯಾಮಂದಿರ, ಕಲಿಸಿದ ಗುರುಗಳನ್ನು ಮರೆಯದೆ ಅವರು ಇಂತಹ ಕಾರ್ಯಕ್ರಮ ಮಾಡಿದ್ದಕ್ಕಾಗಿ ಅವರೆಲ್ಲರನ್ನೂ ಅಭಿನಂದಿಸುತ್ತೇನೆ ಎಂದು ಹೇಳಿದರು.

ಹಳೆಯ ವಿದ್ಯಾರ್ಥಿ ಡಾ. ವಿ.ಯು. ನಾಗಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿ, ನಮಗೆ ಶಿಕ್ಷಣ ನೀಡಿ, ತಮ್ಮ ಮಕ್ಕಳಂತೆ ನಮ್ಮನ್ನು ಕಂಡು, ನಮಗೆ ಬದುಕಿನ ಪಾಠ ಹೇಳಿಕೊಡುವ ಪ್ರತಿ ಗುರುವೂ ನಮಗೆ ಎರಡನೇ ತಂದೆ-ತಾಯಿ ಇದ್ದಂತೆ. ಅವರ ಪೂಜೆಯನ್ನು ಗುರುವಂದನೆಯ ಮೂಲಕ ಮಾಡುತ್ತಿರುವ ನೀವು ಧನ್ಯರು ಎಂದು ತಿಳಿಸಿದರು.

ಗಂಗಾಧರಯ್ಯ ಹಿರೇಮಠ, ಫಕೀರಯ್ಯ ಹಿರೇಮಠ, ಸರಸ್ವತಿಭಾಯಿ ದೊಡ್ಡಮನಿ, ನಿವೃತ್ತ ಶಿಕ್ಷಕಿ ಎ.ಐ. ರಾಂಪುರ ಉಪಸ್ಥಿತರಿದ್ದರು. ಶ್ರೀಧರ ಕುಲಕರ್ಣಿ, ಸುರೇಶ ಪತ್ತಾರ, ಪ್ರಕಾಶ ಕುಲಕರ್ಣಿ, ಜಿ.ಬಿ. ಪಾಟೀಲ್ ಹಾಗೂ ಹಳೆಯ ವಿದ್ಯಾರ್ಥಿಗಳು ಇದ್ದರು. ಇದಕ್ಕೂ ಮೊದಲು ನಿವೃತ್ತ ಶಿಕ್ಷಕರನ್ನು ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಗ್ರಾಮದೇವತೆಗೆ ಪೂಜೆ ಸಲ್ಲಿಸಿ, ಪುಷ್ಪ ಅರ್ಪಣೆ ಮಾಡಿ ಬರಮಾಡಿಕೊಂಡು, ಪಾದಪೂಜೆ ನೆರವೇರಿಸಿದರು. ಆರ್. ಎನ್. ಸಿಂಗಟಾಲಕೇರಿ ಸ್ವಾಗತಿಸಿದರು. ಸಿ.ಎಂ. ಕೊಂಗವಾಡ ಕಾರ್ಯಕ್ರಮ ನಿರೂಪಿಸಿದರು. ಯಲ್ಲಪ್ಪ ಲಕ್ಕುಂಡಿ ವಂದಿಸಿದರು.