ರೈತರ, ಮಹಿಳೆಯರ ಧ್ವನಿಯಾಗಲು ಅವಕಾಶ ನೀಡಿ: ಕಾಂಗ್ರೆಸ್ ಅಭ್ಯರ್ಥಿ ಗೀತಾ

| Published : Mar 27 2024, 01:00 AM IST

ರೈತರ, ಮಹಿಳೆಯರ ಧ್ವನಿಯಾಗಲು ಅವಕಾಶ ನೀಡಿ: ಕಾಂಗ್ರೆಸ್ ಅಭ್ಯರ್ಥಿ ಗೀತಾ
Share this Article
  • FB
  • TW
  • Linkdin
  • Email

ಸಾರಾಂಶ

ಬಂಗಾರಪ್ಪ ಬಡವರ, ರೈತರ ಪರವಾದ ಕಾಳಜಿ ಜತೆಗೆ ಮುಖ್ಯಮಂತ್ರಿಯಾದ ಅವಧಿಯಲ್ಲಿ ಜಾರಿಗೊಳಿಸಿದ ಅಕ್ಷಯ, ಆರಾಧನಾ, ಗ್ರಾಮೀಣ ಕೃಪಾಂಕ, ಪಂಪ್ ಸೆಟ್‌ಗೆ ಉಚಿತ ವಿದ್ಯುತ್ ಯೋಜನೆ ಮೂಲಕ ಅವರ ಹೆಸರು ಶಾಶ್ವತವಾಗಿದ್ದು ಸತತ 30 ವರ್ಷಗಳ ನಂತರದಲ್ಲಿಯೂ ಗ್ರಾಮೀಣ ಕೃಪಾಂಕದಿಂದ ಹಲವರು ಪ್ರಯೋಜನ ಪಡೆದು ಉನ್ನತ ಉದ್ಯೋಗ ಗಳಿಸಿದ್ದಾರೆ.

ಕನ್ನಡಪ್ರಭವಾರ್ತೆ ಶಿಕಾರಿಪುರ

ಬಂಗಾರಪ್ಪ ರೈತರು, ಹಿಂದುಳಿದವರ ಸಹಿತ ಸಮಾಜದ ಸರ್ವರ ಧ್ವನಿಯಾಗಿದ್ದರು. ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಳಿಸಿದ ಯೋಜನೆಗಳ ಪ್ರಯೋಜನ ಹಲವರು ಪಡೆದಿದ್ದಾರೆ. ಅದೇ ರೀತಿ ಸಂಸದರಾಗಿ ಆಯ್ಕೆಗೊಳಿಸಿದರೆ ಮಹಿಳೆಯರ ಸಹಿತ ಅಬಲೆಯರ ಧ್ವನಿಯಾಗಿ ಲೋಕಸಭೆಯಲ್ಲಿ ಪ್ರತಿನಿಧಿಸುವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಭರವಸೆ ನೀಡಿದರು.

ಮಂಗಳವಾರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ನಡೆದ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆ ಅತ್ಯಂತ ವಿಶೇಷವಾದದ್ದಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಿದ ನಂತರ ಇದೇ ಮೊದಲ ಬಾರಿ ಬೃಹತ್ ಬೈಕ್ ಮೆರವಣಿಗೆ ನಡೆಸಿ ಸ್ವಾಗತಿಸಿದ್ದೀರಿ. ಜನತೆ, ಯುವಕರು ಅತಿ ಹೆಚ್ಚು ಉತ್ಸಾಹದಿಂದ ಆಗಮಿಸಿರುವುದು ಕಳೆದ ಬಾರಿ ಸೋಲಿನ ಪ್ರತೀಕಾರ ಎಲ್ಲರಲ್ಲಿ ಕಾಣುತ್ತಿದೆ. ಬಂಗಾರಪ್ಪ ಬಡವರ, ರೈತರ ಪರವಾದ ಕಾಳಜಿ ಜತೆಗೆ ಮುಖ್ಯಮಂತ್ರಿಯಾದ ಅವಧಿಯಲ್ಲಿ ಜಾರಿಗೊಳಿಸಿದ ಅಕ್ಷಯ, ಆರಾಧನಾ, ಗ್ರಾಮೀಣ ಕೃಪಾಂಕ, ಪಂಪ್ ಸೆಟ್‌ಗೆ ಉಚಿತ ವಿದ್ಯುತ್ ಯೋಜನೆ ಮೂಲಕ ಅವರ ಹೆಸರು ಶಾಶ್ವತವಾಗಿದ್ದು ಸತತ 30 ವರ್ಷಗಳ ನಂತರದಲ್ಲಿಯೂ ಗ್ರಾಮೀಣ ಕೃಪಾಂಕದಿಂದ ಹಲವರು ಪ್ರಯೋಜನ ಪಡೆದು ಉನ್ನತ ಉದ್ಯೋಗ ಗಳಿಸಿದ್ದಾರೆ ಎಂದರು.

ಇದೀಗ ರಾಜ್ಯದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಹೆಗ್ಗಳಿಕೆ ಹೊಂದಿದೆ. ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನೀಡಿದ ಎಲ್ಲ 5 ಗ್ಯಾರೆಂಟಿ ಕಡಿಮೆ ಅವಧಿಯಲ್ಲಿ ಜಾರಿಗೊಳಿಸಿದೆ ಎಂದರು. ರೈತ ವರ್ಗ ತೊಂದರೆಯಲ್ಲಿದ್ದು ಬೆಂಬಲ ಬೆಲೆ ದೊರೆಯುತ್ತಿಲ್ಲ. ರೈತರು, ಜನಸಾಮಾನ್ಯರ ಸಹಿತ ಮಹಿಳೆಯರ ಸಮಸ್ಯೆಗೆ ಲೋಕಸಭೆಯಲ್ಲಿ ದ್ವನಿಯಾಗಲು ಜಿಲ್ಲೆಯ ಮಗಳಿಗೆ ಅವಕಾಶ ನೀಡುವಂತೆ ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ, ಶಿಕಾರಿಪುರದಲ್ಲಿ ಇದುವರೆಗೂ ಸೋಲಾಗಿದ್ದು ಇನ್ನು ಮುಂದೆ ಸಾಧ್ಯವಿಲ್ಲ. ಅಧಿಕಾರ, ದಬ್ಬಾಳಿಕೆಗೆ ತಲೆಬಾಗುವುದಿಲ್ಲ ಎಂದು ತೋರಿಸುವ ಅವಕಾಶ ದೊರೆತಿದೆ. ಬರಗಾಲದಲ್ಲಿ ಉಚಿತ ಬಿತ್ತನೆ ಬೀಜವನ್ನು ಸೊರಬ ಸಹಿತ ಆನವಟ್ಟಿ , ಶಿರಾಳಕೊಪ್ಪ, ಶಿಕಾರಿಪುರ, ಆಯನೂರು ಮತ್ತಿತರ ಕಡೆಗಳಲ್ಲಿ ನೀಡಿದ ದಿ.ಬಂಗಾರಪ್ಪನವರು 2009ರ ಚುನಾವಣೆಯಲ್ಲಿ ಸೋಲಬೇಕಾಯಿತು ಒಪ್ಪಿಕೊಳ್ಳಲಾಗದ ಈ ಸೋಲನ್ನು ಇದೀಗ ಪುತ್ರಿ ಗೀತಕ್ಕರನ್ನು ಗೆಲ್ಲಿಸುವ ಮೂಲಕ ಉತ್ತರ ನೀಡುವಂತೆ ತಿಳಿಸಿದರು.

ಅಪ್ಪನ ಮರ್ಯಾದೆ ಕಾಪಾಡದ ಸಂಸದರು:

ಮುಖಂಡ ಆಯನೂರು ಮಂಜುನಾಥ್ ಮಾತನಾಡಿ, ಈಶ್ವರಪ್ಪನವರಿಗೆ ತಮ್ಮ ಪುತ್ರನಿಗೆ ಅನ್ಯಾಯವಾದಾಗ ಮಾತ್ರ ಅರ್ಥವಾಗಿದ್ದು ವೃದ್ಧರಾದ ಯಡಿಯೂರಪ್ಪನವರ ಎದೆಯ ಒಂದು ಕಡೆ ಪುತ್ರರು ಇನ್ನೊಂದು ಕಡೆ ಶೋಭಾ ಇದ್ದಾರೆ ಎಂದು ಅಪಾರ್ಥ ಕಲ್ಪಿಸಿ ಆರೋಪಿಸಿದ ಈಶ್ವರಪ್ಪನವರಿಗೆ ಸಂಸದ ರಾಘವೇಂದ್ರ, ರಾಜ್ಯಾಧ್ಯಕ್ಷ ವಿಜಯೇಂದ್ರ ನಾಲಿಗೆ ಬಿಗಿಹಿಡಿದು ಮಾತನಾಡುವಂತೆ ಪ್ರತ್ಯುತ್ತರ ನೀಡದೆ ಮೌನವಹಿಸಿದ್ದಾರೆ. ಅಪ್ಪನ ಮರ್ಯಾದೆ ಕಾಪಾಡಲಾಗದ ಸಂಸದರು ಇದೀಗ ಜಯಗಳಿಸಿ ಭಾರತ ಮಾತೆಯ ಗೌರವ ಕಾಪಾಡುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.

ಪರಾಜಿತ ಅಭ್ಯರ್ಥಿ ನಾಗರಾಜಗೌಡ ಮಾತನಾಡಿ, ಬಂಗಾರಪ್ಪನವರ ಜನಪರ ಕಾಳಜಿ ಮಕ್ಕಳಲ್ಲಿ ಎದ್ದು ಕಾಣುತ್ತಿದೆ. ಮಧು ಪಾದಯಾತ್ರೆ ಫಲವಾಗಿ ಸೊರಬ, ಶಿಕಾರಿಪುರಕ್ಕೆ ನೀರಾವರಿ ಯೋಜನೆಯಿಂದ ಅಂತರ್ಜಲ ಹೆಚ್ಚಿದೆ ಗೀತಕ್ಕ ಸಂಸದರಾಗಿ ಹೆಸರು ಉಳಿಸುವ ಕಾರ್ಯ ಮಾಡಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನೂರಾರು ಕೋಟಿ ಖರ್ಚು ಮಾಡಿದರೂ ನಾನು 71 ಸಾವಿರ ಮತಗಳಿಸಿದ್ದೇನೆ. ಇದೀಗ ಗೀತಕ್ಕನಿಗೆ 1 ಲಕ್ಷ ಅಧಿಕ ಮತ ದೊರಕಿಸಿಕೊಡುವುದಾಗಿ ತಿಳಿಸಿದರು.

ವೇದಿಕೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸುಂದರೇಶ್, ಎಂಎಡಿಬಿ ಅಧ್ಯಕ್ಷ ಮಂಜುನಾಥಗೌಡ, ಆರ್. ಪ್ರಸನ್ನಕುಮಾರ್, ನಗರದ ಮಹಾದೇವಪ್ಪ, ಬಲ್ಕೀಷ್ ಭಾನು, ಶ್ರೀಕಾಂತ್, ಬಿ.ಕೆ. ಮೋಹನ್, ಕಲಗೋಡು ರತ್ನಾಕರ್, ಅನಿತಕುಮಾರಿ, ಗೋಣಿ ಮಾಲತೇಶ್, ಬ್ಲಾಕ್ ಅಧ್ಯಕ್ಷ ಶಿವರಾಂ ಪಾರಿವಾಳ, ವೀರನಗೌಡ, ವೀಣಾ ಹಿರೇಮಠ್, ರಾಘುನಾಯ್ಕ, ಉಮೇಶ್ ಮಾರವಳ್ಳಿ ಮತ್ತಿತರರು ಉಪಸ್ಥಿತರಿದ್ದರು. ಆರಂಭದಲ್ಲಿ ಬೃಹತ್ ಬೈಕ್ ಮೆರವಣಿಗೆ ಹುಚ್ಚುರಾಯಸ್ವಾಮಿ ದೇವಸ್ಥಾನದಿಂದ ಪ್ರಮುಖ ಬೀದಿಯಲ್ಲಿ ನಡೆಯಿತು.ಹಕ್ಕುಪತ್ರ ನೀಡದೆ ವಂಚನೆ

ರಿಪೋರ್ಟ್‌ ಕಾರ್ಡ್‌ ಎಂಬ ಹಸಿಸುಳ್ಳು ಮುದ್ರಿಸಿ ಸಂಸದರು ವಿತರಿಸುತ್ತಿದ್ದು ಅಭಿವೃದ್ಧಿಯ ನೆಪದಲ್ಲಿ ಬಡವರ ಭೂಮಿ ಕಿತ್ತುಕೊಳ್ಳಲಾಗಿದೆ. ಶರಾವತಿ ಸಂತ್ರಸ್ತರಿಗೆ, ಸಾಗುವಳಿದಾರರಿಗೆ ಹಕ್ಕುಪತ್ರ ನೀಡದೆ ವಂಚಿಸಲಾಗಿದೆ. ಲೋಕಸಭೆಯಲ್ಲಿ ಬಂಗಾರಪ್ಪನವರ ರೀತಿ ಗೀತಕ್ಕ ಗುಡುಗಲಿದ್ದು ಹಕ್ಕುಪತ್ರ ದೊರಕಿಸಲು ಪ್ರಾಮಾಣಿಕವಾಗಿ ಯತ್ನಿಸಲಿದ್ದಾರೆ.

ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ