ರಾಜ್ಯ ಸಚಿವ ಸಂಪುಟದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ನೀಡದಿರುವುದು ಅಲ್ಪಸಂಖ್ಯಾತ ಸಮುದಾಯಕ್ಕೆ ಬೇಸರ ಉಂಟುಮಾಡಿದೆ ಎಂದು ಮಾಜಿ ಶಾಸಕ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ ಹೇಳಿದರು.
ಹಾವೇರಿ: ರಾಜ್ಯ ಸಚಿವ ಸಂಪುಟದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ನೀಡದಿರುವುದು ಅಲ್ಪಸಂಖ್ಯಾತ ಸಮುದಾಯಕ್ಕೆ ಬೇಸರ ಉಂಟುಮಾಡಿದೆ ಎಂದು ಮಾಜಿ ಶಾಸಕ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಅಹ್ಮದ್ ಅಲ್ಪಸಂಖ್ಯಾತರ ಬಲಿಷ್ಠ ನಾಯಕರಾಗಿದ್ದು, ಪಕ್ಷ ಸಂಘಟನೆ ಹಾಗೂ ಚುನಾವಣಾ ಕಾರ್ಯಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಅಲ್ಪಸಂಖ್ಯಾತರನ್ನು ಒಗ್ಗೂಡಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಿದ ನಾಯಕ ಜಮೀರ್ ಅಹ್ಮದ್. ರಾಜ್ಯದ ಮುಸ್ಲಿಮರನ್ನು ಒಂದೇ ವೇದಿಕೆಯಲ್ಲಿ ತರುವಲ್ಲಿ ಅವರ ಪಾತ್ರ ಅತ್ಯಂತ ದೊಡ್ಡದು. ಇಂತಹ ನಾಯಕರಿಗೆ ಸಚಿವ ಸ್ಥಾನ ಸಿಗದಿರುವುದು ಎಲ್ಲರಿಗೂ ನೋವು ತಂದಿದೆ ಎಂದರು.ಜಮೀರ್ ಅಹ್ಮದ್ ಅವರ ಕೊಡುಗೆ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲದೆ ರಾಜ್ಯದ ಅಭಿವೃದ್ಧಿಗೂ ಮಹತ್ವದ್ದಾಗಿದೆ. ಅವರಿಗೆ ಸಚಿವ ಸ್ಥಾನ ಕೈತಪ್ಪಿರುವುದು ಬೇಸರದ ಸಂಗತಿಯಾಗಿದ್ದು, ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶ ದೊರೆಯುವ ವಿಶ್ವಾಸವಿದೆ ಎಂದರು.
ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣೆಯ ವೇಳೆ ಜಮೀರ್ ಅಹ್ಮದ್ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ವೈರಲ್ ಆಗಿರುವ ಬಗ್ಗೆ ಈಗಾಗಲೇ ಸತೀಶ್ ಜಾರಕಿಹೋಳಿ, ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವು ಹಿರಿಯ ನಾಯಕರು ಮಾತನಾಡಿದ್ದಾರೆ. ಈ ವಿಚಾರದಲ್ಲಿ ಕೆಲವು ಮೀರ್ ಸಾದಿಕರು ಕೆಲಸ ಮಾಡಿದ್ದಾರೆ. ಯಾರು ಇದಕ್ಕೆ ಕಾರಣ ಎಂಬುದು ನಮಗೆ ಗೊತ್ತಿದೆ. ಸೂಕ್ತ ಸಮಯದಲ್ಲಿ ಸತ್ಯ ಹೊರಬರಲಿದೆ ಎಂದರು.ಹೈಕಮಾಂಡ್ ಈ ಕುರಿತು ಮಾಹಿತಿ ಕಲೆ ಹಾಕುತ್ತಿದ್ದು, ಯಾರು ಏನು ಮಾಡಿದ್ದಾರೆ ಎಂಬ ಸಂಪೂರ್ಣ ವಿವರಗಳನ್ನು ಪರಿಶೀಲಿಸುತ್ತಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಜಮೀರ್ ಅಹ್ಮದ್ ಸಕ್ರಿಯವಾಗಿ ಕೆಲಸ ಮಾಡಿದ್ದರಿಂದ ಕಾಂಗ್ರೆಸ್ ಗೆಲುವು ಸಾಧಿಸಲು ಸಾಧ್ಯವಾಯಿತು. ಜಮೀರ್ ಅಹ್ಮದ್ ಅವರ ಸೇವೆ ಮತ್ತು ಕೊಡುಗೆಯನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಮಾಡಿದರು.