ಹುಬ್ಬಳ್ಳಿ:

ನೂತನ ಸರ್ಕಾರದಲ್ಲಿ ಜಮೀರ್ ಅಹಮದ್‌ ಖಾನ್‌ ಅವರಿಗೆ ಉಪಮುಖ್ಯಮಂತ್ರಿ ಮತ್ತು ಸಚಿವ ಸ್ಥಾನ‌ ನೀಡುವಂತೆ ಒತ್ತಾಯಿಸಿ ಇಲ್ಲಿನ ಇಂಡಿಪಂಪ್‌ ವೃತ್ತದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು, ಬೆಂಬಲಿಗರು ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿ, ಆಗ್ರಹಿಸಿದರು.

ಜಮೀರ್‌ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದು ಖಂಡನಾರ್ಹ. ವಸತಿ ಸೇರಿದಂತೆ ವಿವಿಧ ಖಾತೆಗಳ ಸಚಿವರಾಗಿ ಅವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಮೊದಲ ಹಂತದ ಪಟ್ಟಿಯಲ್ಲೇ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಆದರೆ, ಹಲವರ ಹುನ್ನಾರದಿಂದ ಸಚಿವ ಸ್ಥಾನ ಕೈತಪ್ಪಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ಸಿಗೆ ಮುಸ್ಲಿಂ ಸಮುದಾಯ ಪ್ರಬಲ ವೋಟ್ ಬ್ಯಾಂಕ್. ಜಮೀರ್‌ ಅವರ ಮುಖ ನೋಡಿ ಮುಸ್ಲಿಮರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ. ಇಂಥ ನಾಯಕರನ್ನು ಸಚಿವ ಸ್ಥಾನಕ್ಕೆ ಪರಿಗಣಿಸದಿರುವುದು ಸರಿಯಲ್ಲ. ಜಮೀರ್ ಅವರಿಗೆ ಸಚಿವ ಸ್ಥಾನ ನೀಡದಿದ್ದಲ್ಲಿ 2028ರ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮುಸಲ್ಮಾನರು ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ಅಂಜುಮನ್‌ ಏ ಇಸ್ಲಾಂ ಕಮಿಟಿ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಲ್ತಾಫಹುಸೇನ ಹಳ್ಳೂರ, ಇರ್ಷಾದ ಅಹ್ಮದ್ ಬಳ್ಳಾರಿ, ಮೆಹಮೂದ ಕೋಳೂರು, ಮುನ್ನಾ ಕಿತ್ತೂರು, ಬಷೀರ್ ಗೂಡವಾಲೆ, ಹಾಜಿ ಅಲಿ ಹಿಂಡಸಗೇರಿ, ಮಹಮ್ಮದ್ ಹಾಶಿಮ್ ಹಿಂಡಸಗೇರಿ, ಸಿರಾಜಅಹ್ಮದ್ ಕುಡಚಿವಾಲೆ ಸೇರಿದಂತೆ ಅನೇಕ ಮುಖಂಡರು, ಮುತವಲ್ಲಿಗಳು, ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಸದಸ್ಯರು ಪಾಲ್ಗೊಂಡಿದ್ದರು.