ತಾಯಿಯ ಗರ್ಭದಿಂದ ಜನಿಸುವುದು ನಿಜವಾದ ಜನನವಲ್ಲ.ದೇವರು ನನ್ನ ಈ ಭೂಮಿಗೆ ಏಕೆ ಕಳಿಸಿದ ಎನ್ನುವ ಪ್ರಶ್ನೆ ಮನುಷ್ಯನ ತಲೆಗೆ ಬರುವುದೋ ಅದೇ ಆತನ ಅದೇ ನಿಜವಾದ ಜನನ

ಕೊಪ್ಪಳ: ಒಂದು ಸಂಸ್ಥೆ ಕಟ್ಟಿ ಬೆಳೆಸುವುದು ಸುಲಭವಲ್ಲ. ಅದರ ಹಿಂದೆ ದೊಡ್ಡ ಶ್ರಮವಿರುತ್ತದೆ. ನೂರಾರು ಜನರ ಶ್ರಮದ ಫಲವೇ ಒಂದು ಸಂಸ್ಥೆ ನಿರ್ಮಾಣವಾಗುತ್ತದೆ. ಸಂಸ್ಥೆ ಕಟ್ಟಿ ಬೆಳೆಸುವಾಗ ಎಲ್ಲೆಡೆ ಟೀಕೆ ಮಾಡುವ ಜನರು ಇರುತ್ತಾರೆ. ಅವುಗಳ ಮಧ್ಯೆ ಸಂಸ್ಥೆ ಬೆಳವಣಿಗೆ ಕಾಣುವುದೇ ಸಾಧನೆಯಾಗಿದೆ ಎಂದು ಸಂಸ್ಥಾನ ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದ್ದಾರೆ.

ನಗರದ ಲಯನ್ಸ್‌ ಕ್ಲಬ್‌ ಹಾಗೂ ಲಯನ್ಸ್‌ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ೫೦ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಅಮೇರಿಕ ಅಧ್ಯಕ್ಷ ಬರಾಕ ಓಬಾಮಾ ಭಾರತದ ನೆಲದಲ್ಲಿ ನಿಂತು ಮಾತನಾಡುವಾಗ ಸ್ವಾಮಿ ವಿವೇಕಾನಂದರು ಯಾವ ನೆಲದಲ್ಲಿ ಬಂದು ಸರ್ವ ಧರ್ಮಗಳ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದವರು. ಅಂತಹ ನೆಲದಲ್ಲಿ ನಾನು ನಿಂತು ಮಾತನಾಡಿರುವುದು ಸಂತಸ ತಂದಿದೆ ಎಂದು ಹೇಳಿದ್ದರು. ಕೊಪ್ಪಳದಲ್ಲಿ ಸ್ವಾಮಿ ವಿವೇಕಾನಂದ ಶಾಲೆ ಆರಂಭವಾಗಿ 50 ವರ್ಷವಾಗಿದೆ. ಲಯನ್ಸ್ ಕ್ಲಬ್ ಸೇವೆ ಎಂದೂ ಮರೆಯುವಂತಿಲ್ಲ. ಕೊಪ್ಪಳದ ಬೆಳವಣಿಗೆಗೆ ಲಯನ್ಸ್ ಪಾತ್ರ ದೊಡ್ಡದಿದೆ. ನಮ್ಮೂರಿನ ಮಕ್ಕಳಿಗೆ ಮೊದಲ ಇಂಗ್ಲಿಷ್ ಕಲಿಸಿದ ಶಾಲೆ ಇದಾಗಿದೆ. ಶಾಲೆಯ ಜನ್ಮದಿನಕ್ಮೂ ನಮ್ಮ ಜನ್ಮ ದಿನಕ್ಮೂ ತುಂಬ ವ್ಯತ್ಯಾಸವಿದೆ. ಅಕ್ಷರವೇ ಇಲ್ಲದ ಮಕ್ಕಳಿಗೆ ಅಕ್ಷರದ ದೀಪ ಹಚ್ಚಿ ಶಾಲೆ ತನ್ನ ಜನ್ಮ‌ದಿನ ಆಚರಿಸಿದರೆ ನಾವು ಹಚ್ಚಿದ ದೀಪ ಆರಿಸಿ ಜನ್ಮ ದಿನ ಆಚರಿಸುತ್ತೇವೆ. ಇದೇ ವ್ಯತ್ಯಾಸ. ಈ ಶಾಲೆ ಮಕ್ಕಳಿಗೆ ಜ್ಞಾನದ ದೀಪ ಹಚ್ಚಿದೆ. ದೇವರ ಮುಂದೆ ಆರುವ ದೀಪ ಹಚ್ಚಿದರೆ ಕಾರ್ತಿಕ ಮಾಸದ ಕಾರ್ತಿಕೋತ್ಸವ ಆಗುವುದಿಲ್ಲ. ಕತ್ತಲೆಯ ಮನುಷ್ಯನಿಗೆ ಕಣ್ಣಿನ ಬೆಳಕು ಕೊಡುವುದೇ ನಿಜವಾದ ಕಾರ್ತಿಕೋತ್ಸವವಾಗಿದೆ ಎಂದರು.

ತಾಯಿಯ ಗರ್ಭದಿಂದ ಜನಿಸುವುದು ನಿಜವಾದ ಜನನವಲ್ಲ.ದೇವರು ನನ್ನ ಈ ಭೂಮಿಗೆ ಏಕೆ ಕಳಿಸಿದ ಎನ್ನುವ ಪ್ರಶ್ನೆ ಮನುಷ್ಯನ ತಲೆಗೆ ಬರುವುದೋ ಅದೇ ಆತನ ಅದೇ ನಿಜವಾದ ಜನನ. ಮನುಷ್ಯ ನೂರು ವರ್ಷ ಬದುಕಲು ದೇವರು ಆಯಸ್ಸು ನೀಡಿದ್ದಾನೆ.ಆ ದೇವರಿಗೆ ಸಂತೋಷವಾಗುವಂತೆ ಮನುಷ್ಯ ಬದುಕಬೇಕು. ನೂರು ವರ್ಷ ಬದುಕದಿದ್ದರೂ ಕನಿಷ್ಟ ಆ ಇಚ್ಛೆಯಿಂದಲಾದರೂ ಬದುಕಬೇಕು. ದೇವರು ಕೊಟ್ಟ ಆಯಸ್ಸಿನಲ್ಲಿ ಚನ್ನಾಗಿ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಲಯನ್ಸ್ ಇಂಟರ್‌ ನ್ಯಾಷನಲ್‌ ನಿರ್ದೇಶಕ ಪಂಕಜ್ ಮೆಹತಾ ಮಾತನಾಡಿ, ಕೊಪ್ಪಳದ ಲಯನ್ಸ್ ಕ್ಲಬ್ 50 ವರ್ಷದಲ್ಲಿ ಎರಡು ಸೇವೆ ಕೊಟ್ಡಿದೆ. ಒಂದು ಶಿಕ್ಷಣ ಸಂಸ್ಥೆ ಹಾಗೂ ಆರೋಗ್ಯ ಸೇವೆ ಈ ನಾಡಿಗೆ ಕೊಟ್ಟಿದೆ. ಕೊಪ್ಪಳದಲ್ಲಿ ಡೇ ಕೇರ್ ಸೆಂಟರ್ ಹಾಗೂ ಡಯಾಲಿಸಸ್ ಕೇಂದ್ರ‌ ಆರಂಭಿಸಿದೆ. ಮೊಬೈಲ್ ಪೋನ್ 5 ತಿಂಗಳಿಗೆ ವ್ಯಾಲಿಡಿಟಿ ಕಳೆದುಕೊಳ್ಳುತ್ತದೆ. ಸರ್ಕಾರದ ಯೋಜನೆ 15 ವರ್ಷ ಹಿಡಿಯುತ್ತೆ, ಆದರೆ ನಮ್ಮ ಸಂಸ್ಥೆಯು 50 ವರ್ಷದಿಂದ ಎರಡು ಸೇವೆ ನಿರಂತರ ಕೊಡುತ್ತಾ ಬಂದಿದೆ. ಆರ್ಥಿಕ ಬಿಕ್ಕಟ್ಟು ಏರಿಳಿತಗಳ ಮಧ್ಯೆ ಈ ಸಂಸ್ಥೆ ಬೆಳೆದು ಬಂದು ಸುವರ್ಣ ಸಂಭ್ರಮ ಆಚರಿಸಿ ಬಂಗಾರದಂತೆ ಹೊಳೆಯುತ್ತಿದೆ.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನ 50 ವರ್ಷದ ಲೋಗೋ ಅನಾವರಣ ಮಾಡಿ ಮಾತನಾಡಿದ ವಿಶ್ರಾಂತ ಉಪಕುಲಪತಿ ಡಾ.ಎಸ್ ಚಂದ್ರಶೇಖರ್ ಶೆಟ್ಟಿ, ಪ್ರಾಥಮಿಕ ಶಿಕ್ಷಣ ಹಾಗೂ ಪ್ರಾಥಮಿಕ ಚಿಕಿತ್ಸೆ ಮಾನವನ ಹಕ್ಕುಗಳಾಗಿವೆ.ಸರ್ಕಾರ ಎಲ್ಲ ಕೆಲಸ ಮಾಡಲು ಆಗುವುದಿಲ್ಲ. ಸಮಾಜವೂ ಸರ್ಕಾರದ ಜತೆ ಕೈ ಜೋಡಿಸಬೇಕು. ಸಮಾಜ ಉತ್ತಮವಾಗಲು ಸಮಾಜದ ಪಾತ್ರವೂ ಮುಖ್ಯವಾಗಿದೆ ಎಂದರು.

ಲಯನ್ಸ್ ಕ್ಲಬ್ ಸುವರ್ಣ ಸಂಭ್ರಮ ಸಮಿತಿ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ ಮಾತನಾಡಿ, ಲಯನ್ಸ್ ಕ್ಲಬ್ 50 ವರ್ಷ ಪೂರೈಸಿದೆ. ನಮ್ಮ ಸಂಸ್ಥೆ 50 ವರ್ಷಗಳ ಹಾದಿ ಸಾಗಿ ಬಂದಿದೆ. ನಮ್ಮಲ್ಲಿ ಸಮಾನ ಬದ್ಧತೆಯ ತಂಡವಾಗಿದೆ. ಆರು ಶಾಶ್ವತ ಅಂಗ ಸಂಸ್ಥೆಗಳ ಸ್ಥಾಪನೆ ಮಾಡಿದೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದೆ ಎಂದರು.

ಲಯನ್ಸ್ ಕ್ಲಬ್ ಸದಸ್ಯ ಗವಿಸಿದ್ದಪ್ಪ ಮುದಗಲ್ ಇದೇ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಕಾರ್ಯಚಟುವಟಿಕೆಯ ಕುರಿತು ವರದಿ ವಾಚಿಸಿದರು. ಸಂಸದ ಕೆ. ರಾಜಶೇಖರ ಹಿಟ್ನಾಳ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಲಯನ್ಸ್ ಫಾಸ್ಟ್ ಇಂಟರ್‌ ನ್ಯಾಷನಲ್‌ ಡೈರೆಕ್ಟರ್ ವಂಶೀಧರ ಬಾಬು, ವಿಧಾನ ಪರಿಷತ್‌ ಸದಸ್ಯೆ ಹೇಮಲತಾ ನಾಯಕ್, ಲಯನ್ಸ್ ಕ್ಲಬ್ ಅಧ್ಯಕ್ಷ ಪರಮೇಶ್ವರಪ್ಪ ಕೊಪ್ಪಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಶ್ರೀನಿವಾಸ ಗುಪ್ತಾ, ಜೈಅಮೋಲ್ ನಾಯ್ಕ್ ಸೇರಿದಂತೆ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.