ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಮಕ್ಕಳು, ಗರ್ಭಿಣಿಯರಿಗೆ ಪೋಷಕಾಂಶಯುಕ್ತ ಆಹಾರ ನೀಡುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸಹಯೋಗದಲ್ಲಿ ನಡೆದ ಪೋಷಣ್ ಅಭಿಯಾನ ಮಾಸಾಚರಣೆ ಸಮಾರೋಪ ಸಮರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪೂರ್ವಿಕರು ಪೋಷಕಾಂಶವುಳ್ಳ ಆಹಾರಗಳನ್ನು ಸೇವನೆ ಮಾಡುತ್ತಿದ್ದರು. ಇದರಿಂದ ಅವರು ಆರೋಗ್ಯವಂತರಾಗಿ ದೀರ್ಘಕಾಲ ಬದುಕುತ್ತಿದ್ದರು. ಆದರೆ, ಪ್ರಸ್ತುತ ದಿನಗಳಲ್ಲಿ ನಾವು ರಾಸಾಯನಿಕ ಅಂಶವುಳ್ಳ ಜಿಂಕ್ ಫುಡ್ ಸೇವನೆ ಮಾಡುತ್ತಾ ಅನಾರೋಗ್ಯಕ್ಕೆ ಸುತ್ತಾಗುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.ಮಕ್ಕಳು ಬಾಯಿ ರುಚಿಗಾಗಿ ರಸ್ತೆ ಬದಿ ತಿಂಡಿಗಳಿಗೆ ಮಾರುಹೋಗುತ್ತಿದ್ದಾರೆ. ಇದರಿಂದ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿವೆ. ಆದ್ದರಿಂದ ನಾವುಗಳು ನಮ್ಮ ಪೂರ್ವಿಕರು ಸೇವನೆ ಮಾಡುತ್ತಿದ್ದ ಪೋಷಕಾಂಶ ಅಂಶವಿರುವ ಆಹಾರ ಸೇವನೆ ಕಡೆಗೆ ಮುಖಮಾಡಬೇಕು ಎಂದರು.
ಹೆಣ್ಣು ಭ್ರೂಣಹತ್ಯೆ ಸಾಮಾಜಿಕ ಪಿಡುಕು. ಇದನ್ನು ತಡೆಯಲು ಅಧಿಕಾರಿಗಳು ಮಾತ್ರವಲ್ಲದ ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿಯಾಗಬೇಕು. ಹೆಣ್ಣು-ಗಂಡು ಎಂಬ ವ್ಯತ್ಯಾಸಗಳು ಇರಬಾರದು. ಇದರಿಂದ ಗಂಡು ಮಕ್ಕಳಿಗೆ ಮದುವೆ ಆಗಲು ಹೆಣ್ಣುಮಕ್ಕಳೇ ಸಿಗದ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ.ಆರ್.ಪೂರ್ಣಿಮಾ ಮಾತನಾಡಿ, ಗರ್ಭಿಣಿ, ಬಾಣಂತಿಯರಿಗೆ ಪೋಷಕಾಂಶ ಆಹಾರಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸರಕಾರ ಇಲಾಖೆಯ ಮೂಲಕ ಪೋಷಣ್ ಅಭಿಮಾನ ಮಾಸಾಚರಣೆ ಹಮ್ಮಿಕೊಂಡಿದೆ ಎಂದರು.
ಗರ್ಭಿಣಿ, ಬಾಣಂತಿಯರು ಹೆಚ್ಚಾಗಿ ಹಣ್ಣು, ತರಕಾರಿ, ಸೋಪ್ಪು ಸೇವನೆ ಮಾಡಬೇಕು. ಹುಟ್ಟಿದ ಮಗುವಿಗೆ ಕನಿಷ್ಠ ಎರಡು ವರ್ಷಗಳ ಕಾಲ ತಾಯಿಯ ಎದೆಹಾಲು ಉಣಿಸಬೇಕು. ಇದರಿಂದ ಮಗು ಆರೋಗ್ಯಕರವಾಗಿರುತ್ತದೆ ಎಂದರು.ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮಿಬಾಬು ಮಾತನಾಡಿ, ಹಳ್ಳಿಗಳ ಬೀದಿಯಲ್ಲಿ ಆಟವಾಡುವ ಮಕ್ಕಳು ನೈಸರ್ಗಿಕವಾಗಿ ಸಿಗುವ ಹಣ್ಣು, ತರಕಾರಿ ಸೇರಿದಂತೆ ಪೌಷ್ಟಿಕಾಂಶಯುಕ್ತ ಆಹಾರ ತಿನ್ನುತ್ತಾರೆ. ಹಾಗಾಗಿ ಅಂತಹ ಮಕ್ಕಳಿಗೆ ಹೆಚ್ಚಾಗಿ ಆರೋಗ್ಯ ಸಮಸ್ಯೆ ಕಂಡುಬರುವುದಿಲ್ಲ ಎಂದರು.
ಇದೇ ವೇಳೆ ಗರ್ಭಿಣಿಯರಿಗೆ ಸೀಮಂತ ಮಾಡಲಾಯಿತು. ಪೌಷ್ಟಿಕ ಆಹಾರಗಳ ಸಪ್ತಾಹ ನಡೆಸಿದರು. ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ಎಲ್.ಆಶೋಕ್, ಮುಖ್ಯಾಧಿಕಾರಿ ಸತೀಶ್, ಆಡಳಿತ ವೈದ್ಯಾಧಿಕಾರಿ ಡಾ.ಸಿ.ಎ.ಅರವಿಂದ್, ಕಸಾಪ ಅಧ್ಯಕ್ಷ ಮೇನಾಗ್ರ ಪ್ರಕಾಶ್, ಮೇಲ್ವಿಚಾರಕಿಯರಾದ ಜಕಿಯ ಬಾನು, ಲಕ್ಷ್ಮೀದೇಶಪಾಂಡೆ, ಪೋಷಣ್ ಅಭಿಯಾನದ ತಾಲೂಕು ಸಂಯೋಜಕಿ ಅನುಷ, ಅಂಗನವಾಡಿ ಕಾರ್ಯಕರ್ತೆಯರಾದ ರುಕ್ಮಿಣಿ, ಮೇರಿ, ಶೋಭ, ಆರೋಗ್ಯ ಇಲಾಖೆ ಶಿವಮ್ಮ ಸೇರಿದಂತೆ ಕಸಬಾ, ಕೆರೆತೊಣ್ಣೂರು, ಬೆಳ್ಳಾಳೆ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.