ದೆಹಲಿ ಬ್ಲಾಸ್ಟ್‌: ಗ್ಲಾಸ್‌ ಹೌಸ್‌, ಹರಿಹರೇಶ್ವರ ಗುಡಿ, ಪುಷ್ಕರಿಣಿ ತಪಾಸಣೆ

| Published : Nov 12 2025, 01:30 AM IST

ದೆಹಲಿ ಬ್ಲಾಸ್ಟ್‌: ಗ್ಲಾಸ್‌ ಹೌಸ್‌, ಹರಿಹರೇಶ್ವರ ಗುಡಿ, ಪುಷ್ಕರಿಣಿ ತಪಾಸಣೆ
Share this Article
  • FB
  • TW
  • Linkdin
  • Email

ಸಾರಾಂಶ

ದೆಹಲಿಯ ಭೀಕರ ಕಾರು ಸ್ಫೋಟ, ಘಟನೆಯಲ್ಲಿ 8ಕ್ಕೂ ಹೆಚ್ಚು ಜನ ಬಲಿಯಾದ ಬೆನ್ನಲ್ಲೇ ನಗರ, ಜಿಲ್ಲಾದ್ಯಂತ ಜಿಲ್ಲಾ ಪೊಲೀಸ್ ಇಲಾಖೆ ಕಟ್ಚೆಚ್ಚರ ವಹಿಸಿದ್ದು, ಸೋಮವಾರ ರಾತ್ರಿಯಿಂದಲೇ ಎಲ್ಲ ಕಡೆ ಮುನ್ನೆಚ್ಚರಿಕೆ ವಹಿಸುತ್ತಿದೆ.

- ಎಸ್‌ಎಸ್‌ಸಿ ತಂಡದಿಂದ ದಾವಣಗೆರೆ ನಗರ, ಜಿಲ್ಲೆಯಲ್ಲಿ ಮುಂದುವರಿದ ಪರಿಶೀಲನೆ । 18 ಕಡೆ ಚೆಕ್‌ಪೋಸ್ಟ್, ಹಗಲಿರುಳು ಗಸ್ತು - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದೆಹಲಿಯ ಭೀಕರ ಕಾರು ಸ್ಫೋಟ, ಘಟನೆಯಲ್ಲಿ 8ಕ್ಕೂ ಹೆಚ್ಚು ಜನ ಬಲಿಯಾದ ಬೆನ್ನಲ್ಲೇ ನಗರ, ಜಿಲ್ಲಾದ್ಯಂತ ಜಿಲ್ಲಾ ಪೊಲೀಸ್ ಇಲಾಖೆ ಕಟ್ಚೆಚ್ಚರ ವಹಿಸಿದ್ದು, ಸೋಮವಾರ ರಾತ್ರಿಯಿಂದಲೇ ಎಲ್ಲ ಕಡೆ ಮುನ್ನೆಚ್ಚರಿಕೆ ವಹಿಸುತ್ತಿದೆ.

ದಾವಣಗೆರೆ, ಹರಿಹರ ರೈಲ್ವೆ ನಿಲ್ದಾಣಗಳು, ಸರ್ಕಾರಿ- ಖಾಸಗಿ ಬಸ್‌ ನಿಲ್ದಾಣಗಳು, ನ್ಯಾಯಾಲಯ, ಸಾರ್ವಜನಿಕ ಸ್ಥಳ, ಜನದಟ್ಟಣೆ, ವಾಹನದಟ್ಟಣೆ ಪ್ರದೇಶ, ಮಾರುಕಟ್ಟೆ, ನಿರ್ಜನ ಪ್ರದೇಶದಲ್ಲಿ ನಿಂತಿರುವ ವಾಹನಗಳು, ಐತಿಹಾಸಿಕ ದೇವಸ್ಥಾನ, ಪ್ರವಾಸಿ ತಾಣಗಳು, ಅಪರೂಪದ ತೂಗು ಕಾಲುವೆ ಹೀಗೆ ಎಲ್ಲಾ ಕಡೆ ಸಾರ್ವಜನಿಕರ ಭದ್ರತೆ ಮತ್ತು ಸುರಕ್ಷತೆಗೆ ಎಎಸ್‌ಸಿ **(anti-sabotage check) ** ತಂಡಗಳು ಹಾಗೂ ಶ್ವಾನದಳ ತಂಡಗಳು ತಪಾಸಣೆಯಲ್ಲಿ ತೊಡಗಿವೆ.

ಎಲ್ಲೆಡೆ ತಪಾಸಣೆ ಕಾರ್ಯ:

ವಿಧ್ವಂಸಕ ವಿರೋಧಿ ತಪಾಸಣೆ ಕಾರ್ಯದಲ್ಲಿ ಶ್ವಾನದಳ, ಬಾಂಬ್ ಪತ್ತೆ ದಳ, ಬಾಂಬ್‌ ನಿಷ್ಕ್ರಿಯ ದಳ, ಆರ್‌ಪಿಎಫ್‌, ನಾಗರೀಕ ಪೊಲೀಸ್‌ ಸೇರಿದಂತೆ ಎಲ್ಲ ಕಡೆ ತಪಾಸಣೆ ಕಾರ್ಯ ಮುಂದುವರಿದಿದೆ. ದಾವಣಗೆರೆ-ಹರಿಹರ ಮಾರ್ಗವಾಗಿ ನಿತ್ಯವೂ ಸುಮಾರು 72ಕ್ಕೂ ಹೆಚ್ಚು ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಸಂಚರಿಸುತ್ತವೆ. ಮುಂಬೈ, ಪುಣೆ, ಗೋವಾ, ಬೆಂಗಳೂರು, ಮೈಸೂರು, ಚೆನ್ನೈ ಮಾರ್ಗವಾಗಿ ಇಲ್ಲಿಂದ ಸಾಗುವ ರೈಲುಗಳ ಸಂಚಾರದ ಹಿನ್ನೆಲೆ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ.

18 ಚೆಕ್‌ ಪೋಸ್ಟ್, ನಾಕಾ ಬಂಧಿ:

ಪ್ರಯಾಣಿಕರ ಬ್ಯಾಗ್‌, ರೈಲ್ವೆ ಟ್ರ್ಯಾಕ್‌, ಕಸದ ಬಾಕ್ಸ್‌ಗಳು, ಶೌಚಾಲಯ ಹೀಗೆ ಎಲ್ಲ ಕಡೆ ದಾವಣಗೆರೆ, ಹರಿಹರದ ರೈಲ್ವೆ ನಿಲ್ದಾಣಗಳಲ್ಲಿ ಪರಿಶೀಲನೆ ನಡೆಯಿತು. ಕಳೆದ ರಾತ್ರಿಯಿಂದಲೇ ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣಗಳಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಸೂಚನೆ ಮೇರೆಗೆ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ ಮೈಯೆಲ್ಲಾ ಕಣ್ಣಾಗಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ನಗರ, ಜಿಲ್ಲೆಯ 18 ಚೆಕ್‌ ಪೋಸ್ಟ್, ನಾಕಾ ಬಂಧಿ ಮಾಡಿ, ತಪಾಸಣೆ ಮಾಡಲಾಗುತ್ತಿದೆ.

ಗಸ್ತು ಹೆಚ್ಚಿಸಿದೆ- ಜಿಲ್ಲಾ ಎಸ್‌ಪಿ:

ಡಿಜಿ ಮತ್ತು ಐಜಿಪಿ ಆದೇಶದಂತೆ ಜಿಲ್ಲಾದ್ಯಂತ ನಮ್ಮೆಲ್ಲಾ ಅಧಿಕಾರಿ, ಸಿಬ್ಬಂದಿಗೆ ಅಲರ್ಟ್ ಮಾಡಿದ್ದೇವೆ. ಚೆಕ್‌ ಪೋಸ್ಟ್ ಗಳಲ್ಲೂ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲಾದ್ಯಂತ ಬಸ್‌, ರೈಲ್ವೆ ನಿಲ್ದಾಣಗಳು, ಜನಸಂದಣಿ ಪ್ರದೇಶಗಳು, ದೇವಸ್ಥಾನ, ಪ್ರವಾಸಿ ತಾಣಗಳು, ಲಾಡ್ಜ್‌ಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ವಿಧ್ವಂಸಕ ವಿರೋಧಿ ತಪಾಸಣೆ ಕಾರ್ಯ ಮಂಗಳವಾರವೂ ಮುಂದುವರಿದಿದೆ. ಜಿಲ್ಲಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಪೊಲೀಸ್ ಗಸ್ತು ಹೆಚ್ಚಿಸಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಹೇಳಿದ್ದಾರೆ.

ಕಳೆದ ರಾತ್ರಿಯಿಂದಲೇ ಎಲ್ಲ ಲಾಡ್ಜ್‌ ಪರಿಶೀಲನೆ ನಡೆಸಲಾಗುತ್ತಿದೆ. ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ಇಲಾಖೆ ಗಮನಕ್ಕೆ ತರಬೇಕು. ದಾವಣಗೆರೆ ನಗರ ಮಾತ್ರವಲ್ಲದೇ, ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಪೊಲೀಸರ ಹದ್ದಿನ ಕಣ್ಣಿಟ್ಟಿದ್ದಾರೆ. ಎಲ್ಲ ಕಡೆಗಳಲ್ಲೂ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ಮುಂದುವರಿಸಲಾಗಿದೆ ಎಂದಿದ್ದಾರೆ.

- - -

(ಬಾಕ್ಸ್‌-1) * ಪರಿಶೀಲನೆ ನಡೆದ ಪ್ರಮುಖ ಸ್ಥಳ, ತಾಣಗಳು ದಾವಣಗೆರೆ ನಗರದ ಪ್ರಮುಖ ಜನಸಂದಣಿ ಸ್ಥಳಗಳಾದ ರೇಲ್ವೆ ಸ್ಟೇಷನ್, ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ, ಖಾಸಗಿ ಬಸ್‌ ನಿಲ್ದಾಣ, ಗಾಜಿನ ಮನೆ, ಹರಿಹರದ ಶ್ರೀ ಹರಿಹರೇಶ್ವರ ದೇವಸ್ಥಾನ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಗುತ್ತೂರು ಪವರ್ ಹೌಸ್, ಹೊನ್ನಾಳಿಯ ತುಂಗಾಭದ್ರಾ ನದಿ ಸೇತುವೆ, ಬಸ್‌ ನಿಲ್ದಾಣ, ಕೋರ್ಟ್, ಚನ್ನಗಿರಿ ತಾ. ಸೂಳೆಕೆರೆ, ತೂಗು ಕಾಲುವೆ, ಬಸ್ ನಿಲ್ದಾಣ, ಕೋರ್ಟ್, ಸಂತೆಬೆನ್ನೂರು ಪುಷ್ಕರಿಣಿ ಇತರೆ ಜಿಲ್ಲಾದ್ಯಂತ ಜನಸಂದಣಿ ಹಾಗೂ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರ ಭದ್ರತೆ ಹಾಗೂ ಸುರಕ್ಷತೆಗಾಗಿ ಪ್ರತ್ಯೇಕ ತಂಡಗಳಾಗಿ ** ASC (anti-sabotage check) ** ತಂಡಗಳು ಹಾಗೂ ಶ್ವಾನದಳ ತಂಡಗಳು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತರ ಸೂಚನೆಯಂತೆ ತಪಾಸಣೆ ನಡೆಸಿ, ಪರಿಶೀಲಿಸಿದ್ದಾರೆ.

- - -

-11ಕೆಡಿವಿಜಿ8, 9, 10: ದಾವಣಗೆರೆ ಜಿಲ್ಲೆಯ ಸಂತೇಬೆನ್ನೂರು ಪುಷ್ಕರಣಿಯಲ್ಲಿ ಶ್ವಾನದಳ, ಬಾಂಬ್ ಪತ್ತೆ ದಳದ ಸಿಬ್ಬಂದಿ ತೀವ್ರ ತಪಾಸಣೆ ನಡೆಸಿದರು. -11ಕೆಡಿವಿಜಿ11: ದಾವಣಗೆರೆ ಜಿಲ್ಲೆಯ ಸಂತೇಬೆನ್ನೂರು ಪುಷ್ಕರಣಿಯ ಮುಸಾಫಿರ್ ಖಾನಾ ಹಿಂಭಾಗದ ರಸ್ತೆಯಲ್ಲಿ ಶ್ವಾನದಳ, ಬಾಂಬ್ ಪತ್ತೆ ದಳದ ಸಿಬ್ಬಂದಿ ವಾಹನ ತಪಾಸಣೆಯಲ್ಲಿ ತೊಡಗಿರುವುದು. -11ಕೆಡಿವಿಜಿ12, 13, 14, 15: ದಾವಣಗೆರೆ ಜಿಲ್ಲೆ ಹರಿಹರ ನಗರದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಪೊಲೀಸ್ ಶ್ವಾನದಳ, ಬಾಂಬ್ ಪತ್ತೆ ದಳದ ಸಿಬ್ಬಂದಿ ತೀವ್ರ ತಪಾಸಣೆ ನಡೆಯಿತು. -11ಕೆಡಿವಿಜಿ15: ದಾವಣಗೆರೆ ಜಿಲ್ಲೆ ಸೂಳೆಕೆರೆಯ ಗುಡ್ಡಗಳ ಮೇಲ್ಪಟ್ಟಕ್ಕೆ ಹಾದುಹೋಗಿರುವ ಭದ್ರಾ ತೂಗು ಸೇತುವೆ ಮೇಲೆ ಪೊಲೀಸ್ ಶ್ವಾನದಳ, ಬಾಂಬ್ ಪತ್ತೆ ದಳದ ಸಿಬ್ಬಂದಿ ತೀವ್ರ ತಪಾಸಣೆ ನಡೆಸಿತು.-11ಕೆಡಿವಿಜಿ16: ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಜಿಲ್ಲಾ ಪೊಲೀಸ್ ಶ್ವಾನದಳ, ಬಾಂಬ್ ಪತ್ತೆ ದಳದ ಸಿಬ್ಬಂದಿ ತೀವ್ರ ತಪಾಸಣೆ ನಡೆಸುತ್ತಿರುವುದು. -11ಕೆಡಿವಿಜಿ17: ಉಮಾ ಪ್ರಶಾಂತ, ಜಿಲ್ಲಾ ಎಸ್‌ಪಿ.