ಸಾರಾಂಶ
ಅಜೀಜಅಹ್ಮದ ಬಳಗಾನೂರ ಹುಬ್ಬಳ್ಳಿ
ಫಲಪುಷ್ಪ ಪ್ರದರ್ಶನ ಎಂದರೆ ಎಲ್ಲರ ಕಣ್ಣ ಮುಂದೆ ಬರುವುದು ಬೆಂಗಳೂರಿನ ಲಾಲಬಾಗ್. ಅದೇ ರೀತಿ ವಿಶೇಷ, ವೈಶಿಷ್ಟ್ಯತೆಯೊಂದಿಗೆ ಧಾರವಾಡ ಜಿಲ್ಲಾಡಳಿತ ಈ ಬಾರಿ ಜ. 26ರಿಂದ 28ರ ವರೆಗೆ ಇಲ್ಲಿನ ಇಂದಿರಾ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿದೆ.ಜಿಲ್ಲಾಡಳಿತ, ಜಿಪಂ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಹು-ಧಾ ಮಹಾನಗರ ಪಾಲಿಕೆ, ಮೀನುಗಾರಿಕೆ ಇಲಾಖೆ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಹಾಪ್ ಕಾಮ್ಸ್ ಮತ್ತು ಉದ್ಯಾನ ಹಾಗೂ ಫಲಪುಷ್ಪ ಪ್ರದರ್ಶನ ಸಮಿತಿ ಸಂಯುಕ್ತ ಆಶ್ರಯದಲ್ಲಿ ಧಾರವಾಡ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ ಹಾಗೂ ಸಿರಿಧಾನ್ಯ ಹಬ್ಬ ಕಾರ್ಯಕ್ರಮವು ಜ. 26ರಂದು ಸಂಜೆ 4ಗಂಟೆಗೆ ಆರಂಭವಾಗಲಿದೆ. ಈಗಾಗಲೇ ಇದಕ್ಕೆ ಬೇಕಾದ ಸಿದ್ಧತೆ ಪೂರ್ಣಗೊಂಡು ಫಲಪುಷ್ಪ ಪ್ರಿಯರಿಗಾಗಿ ಕಾಯುತ್ತಿದೆ. ಇದರೊಂದಿಗೆ ಕೃಷಿ ಇಲಾಖೆಯ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಅಂಗವಾಗಿ ಸಿರಿಧಾನ್ಯದ ಪ್ರದರ್ಶನ ಮಾಡಲಾಗುತ್ತಿದೆ. ಮೀನುಗಾರಿಕೆ ಇಲಾಖೆಯಿಂದ 20 ಅಕ್ವೇರಿಯಂ ಇರಿಸಿ ನೂರಾರು ಮೀನುಗಳ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ.
ಏನೆಲ್ಲ ಇರಲಿದೆ: ಇಂದಿರಾ ಗಾಜಿನ ಮನೆ ನವ ವಧುವಿನಂತೆ ಶೃಂಗಾರಗೊಂಡಿದೆ. ಎಲ್ಲೆಲ್ಲೂ ಫಲಪುಷ್ಪಗಳ ರಾಶಿ, ಬಗೆಬಗೆಯ ತರಕಾರಿಗಳು, ಸಿರಿಧಾನ್ಯಗಳ ರಾಶಿಯೇ ಕಂಡುಬರುತ್ತಿದೆ. ಈ ವರ್ಷದ ಪ್ರಮುಖ ಆಕರ್ಷಣೆಯೇ ಬಗೆಬಗೆಯ ಪುಷ್ಪಗಳಿಂದ ತಯಾರಿಸಲಾಗಿರುವ 12 ಅಡಿ ಎತ್ತರದ ಚಂದ್ರಯಾನ-3, ಅಂಬಾರಿ ಹೊತ್ತ ಅರ್ಜುನ ಆನೆ, ಸಿರಿಧಾನ್ಯಗಳಲ್ಲಿ ಅರಳಿದ ಬಸವೇಶ್ವರರು, ಶಾವಿಗೆಯಲ್ಲಿ ತಯಾರಿಸಲಾದ ಸಿದ್ದೇಶ್ವರ ಶ್ರೀಗಳ ಮೂರ್ತಿ.ಇದರೊಂದಿಗೆ ರಂಗೋಲಿಯಲ್ಲಿ ಸಿದ್ಧಾರೂಢರು, ಹಾನಗಲ್ಲಿನ ಶಿವಕುಮಾರ ಶ್ರೀಗಳು, ಸಿದ್ದೇಶ್ವರ ಶ್ರೀಗಳು ಕಂಗೊಳಿಸುತ್ತಿದ್ದರೆ, 3 ಸಾವಿರಕ್ಕೂ ಅಧಿಕ ಹೂವಿನ ಕುಂಡಗಳು ಪ್ರದರ್ಶನದ ಆಕರ್ಷಣೆಯಾಗಿವೆ. 15ಕ್ಕೂ ಅಧಿಕ ಬಗೆಯ ಗುಲಾಬಿ ಹೂ, ಸುಗಂಧರಾಜ ಸೇರಿದಂತೆ ಬಗೆಬಗೆಯ ಪುಷ್ಪಗಳು, ಹಲವು ಬಗೆಯ ಬೋನ್ಸಾಯ್ ಗಿಡಗಳ ಪ್ರದರ್ಶನ, ಜಿಲ್ಲೆಯ ಎಂಟು ತಾಲೂಕುಗಳಿಂದ ರೈತರು ತಾವು ಬೆಳೆದ ತರಕಾರಿಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿರುವುದು ಪ್ರದರ್ಶನಕ್ಕೆ ಹೆಚ್ಚಿನ ಕಳೆ ತಂದಿದೆ.
ತರಕಾರಿಯಲ್ಲಿ ಅರಳಿದ ಕಲೆ: ಈ ಬಾರಿ ಪ್ರಮುಖ ಆಕರ್ಷಣೆ ಎಂದರೆ ತರಕಾರಿಯಲ್ಲಿ ಅರಳಿದ ಕಲಾಕೃತಿಗಳು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಸಾಹಿತ್ಯ ದಿಗ್ಗಜರು, ಸಂಗೀತಗಾರರು, ಕವಿಗಳು, ದೇವತೆಗಳು, ಹೋರಾಟಗಾರರು, ಪ್ರಮುಖ ಪ್ರಾಣಿ, ಪಕ್ಷಿಗಳನ್ನು ಕಲ್ಲಂಗಡಿ, ಸೌತೆಕಾಯಿ, ಕುಂಬಳಕಾಯಿ, ಬದನೆಕಾಯಿ, ಗಜ್ಜರಿ ಸೇರಿದಂತೆ ಬಗೆಬಗೆಯ ತರಕಾರಿಯಲ್ಲಿ ಅರಳಿ ನಿಂತಿವೆ.50 ಸಾವಿರಕ್ಕೂ ಅಧಿಕ ಜನರ ವೀಕ್ಷಣೆ ನಿರೀಕ್ಷೆ:
ಇಂದಿರಾ ಗಾಜಿನ ಮನೆಯ ಪಕ್ಕದಲ್ಲಿ 20 ಸಾವಯವ ಸಿರಿಧಾನ್ಯ ಮಳಿಗೆ ಹಾಗೂ ತೋಟಗಾರಿಕೆ ಇಲಾಖೆಯಿಂದ 20 ಮಳಿಗೆ ನಿರ್ಮಿಸಲಾಗಿದೆ. 3 ದಿನಗಳ ಕಾಲ ನಡೆಯುವ ಫಲಪುಷ್ಪ ಪ್ರದರ್ಶನ ಉಚಿತ ಪ್ರವೇಶವಾಗಿದ್ದು, 50 ಸಾವಿರಕ್ಕೂ ಅಧಿಕ ಜನರು ವೀಕ್ಷಿಸುವ ನಿರೀಕ್ಷೆ ಹೊಂದಲಾಗಿದೆ. ಕಳೆದ ಬಾರಿಗಿಂತಲೂ ಈ ಬಾರಿ ಫಲಪುಷ್ಪ ಪ್ರದರ್ಶನ ಅತ್ಯುತ್ತಮವಾಗಿ ಮೂಡಿಬಂದಿದೆ. ಇದಕ್ಕೆ ಇಲಾಖೆಯ ಎಲ್ಲ ಹಿರಿಯ, ಕಿರಿಯ ಅಧಿಕಾರಿಗಳ ಶ್ರಮವಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕ ಯೋಗೀಶ ಕನ್ನಡಪ್ರಭಕ್ಕೆ ತಿಳಿಸಿದರು. ಶುಕ್ರವಾರದಿಂದ 3 ದಿನಗಳ ಕಾಲ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆ ಇದೆ. ಪ್ರತಿ ವರ್ಷಕ್ಕಿಂತಲೂ ಈ ಬಾರಿ ವಿಶೇಷ, ವಿಶಿಷ್ಟ್ಯವಾಗಿ ಫಲಪುಷ್ಪ ಪ್ರದರ್ಶನ ನಡೆಸಲು ಬೇಕಾದ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಕೆ.ಸಿ. ಭದ್ರಣ್ಣವರ ಹೇಳಿದರು.