ಬುದ್ಧನ ತತ್ವ, ಸಿದ್ಧಾಂತಗಳಿಗೆ ಜಗತ್ತಿನಾದ್ಯಂತ ಮನ್ನಣೆ: ನಿಧಿಕುಮಾರ್

| Published : May 24 2024, 12:47 AM IST

ಬುದ್ಧನ ತತ್ವ, ಸಿದ್ಧಾಂತಗಳಿಗೆ ಜಗತ್ತಿನಾದ್ಯಂತ ಮನ್ನಣೆ: ನಿಧಿಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯ ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯ, ಕೋಶ, ಹೆಂಡತಿ, ಮಕ್ಕಳು ಎಲ್ಲವನ್ನೂ ತೊರೆದು ದೇವರ ಹುಡುಕಾಟದಲ್ಲಿ ತೊಡಗಿದ ಬುದ್ಧನಿಗೆ, ಹಲವಾರು ವರ್ಷಗಳ ತಿರುಗಾಟದ ನಂತರ ಮನುಷ್ಯನ ಸಮಸ್ಯೆಗಳಿಗೆ ಮನುಷ್ಯನೇ ಕಾರಣ ಎಂಬುದು ತಿಳಿಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ, ತುಮಕೂರು ಜಿಲ್ಲಾ ಶಾಖೆ ವತಿಯಿಂದ ಭಗವಾನ್ ಬುದ್ಧನ 2568ನೇ ಜನ್ಮ ಜಯಂತಿಯನ್ನು ಅಮಾನಿಕೆರೆಯ ಅರಳಿ ವೃಕ್ಷದ ಬಳಿ ಸರಳವಾಗಿ ಆಚರಿಸಲಾಯಿತು.

ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಅವರ ನೇತೃತ್ವದಲ್ಲಿ ಬುದ್ಧನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು.

ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ, ಮನುಷ್ಯ ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯ, ಕೋಶ, ಹೆಂಡತಿ, ಮಕ್ಕಳು ಎಲ್ಲವನ್ನೂ ತೊರೆದು ದೇವರ ಹುಡುಕಾಟದಲ್ಲಿ ತೊಡಗಿದ ಬುದ್ಧನಿಗೆ, ಹಲವಾರು ವರ್ಷಗಳ ತಿರುಗಾಟದ ನಂತರ ಮನುಷ್ಯನ ಸಮಸ್ಯೆಗಳಿಗೆ ಮನುಷ್ಯನೇ ಕಾರಣ ಎಂಬುದು ತಿಳಿಯಿತು. ತಾನು ಕಂಡುಕೊಂಡ ಸತ್ಯವನ್ನು ಇತರರಿಗೆ ಭೋದಿಸುತ್ತಾ ಅಪಾರ ಶಿಷ್ಯ ಬಳಗವನ್ನು ಹೊಂದಿದ ವ್ಯಕ್ತಿ ಬುದ್ಧ. ಆತನ ಪಂಚಶೀಲ ತತ್ವಗಳಿಗೆ ಇಡೀ ಜಗತ್ತಿನಾದ್ಯಂತ ಒಳ್ಳೆಯ ಮೌಲ್ಯವಿದೆ. ಆನಂದ, ನಾಗಾರ್ಜುನನಂತಹ ಪ್ರಬುದ್ಧ ಶಿಷ್ಯರ ಬಳಗದ ಮೂಲಕ ಜಗತ್ತಿಗೆ ಬುದ್ಧ ಧರ್ಮವನ್ನು ಪ್ರಸರಿಸಿದರು. ಬೌದ್ಧ ಧರ್ಮದ ತತ್ವಗಳಿಗೆ ಮಾರು ಹೋದ ಮೌರ್ಯ ಚಕ್ರವರ್ತಿ ಆಶೋಕ, ಕಳಿಂಗ ಯುದ್ಧದಲ್ಲಾದ ಸಾವು, ನೋವಿನಿಂದ ನೊಂದು ಬೌದ್ಧ ಧರ್ಮ ಸ್ವೀಕರಿಸಿ, ತಮ್ಮ ಮಕ್ಕಳನ್ನು ಸಹ ಬೌದ್ಧಧರ್ಮದ ಅನುಯಾಯಿಗಳನ್ನಾಗಿಸಿದರು ಎಂದು ಬುದ್ಧನ ಚರಿತೆಯನ್ನು ತಿಳಿಸಿದರು.

ಸಮಾಜ ಸೇವಕ ಕೊಪ್ಪಲ್ ನಾಗರಾಜು ಮಾತನಾಡಿ, ಆಸೆಯೇ ದುಖಃಕ್ಕೆ ಮೂಲ, ಅತೀಯಾಸೆ ಒಳ್ಳೆಯದಲ್ಲ ಎಂಬ ತತ್ವಗಳನ್ನು ತನ್ನ ಅನುಯಾಯಿಗಳಿಗೆ ಭೋದಿಸುವ ಮೂಲಕ ಜನರು ಭೋಗ ಜೀವನಕ್ಕೆ ಮೊರೆ ಹೋಗದಂತೆ ಪ್ರೇರೆಪಿಸಿದರು. ದೇಶದಲ್ಲಿ ಚಾಲ್ತಿಯಲ್ಲಿರುವ ಹಿಂದೂ, ಬೌದ್ಧ, ಕ್ರಿಸ್ತ, ಮುಸ್ಲಿಂ ಇವುಗಳು ಧರ್ಮಗಳಲ್ಲ,ಪ್ರತಿಯೊಬ್ಬ ಮನುಷ್ಯನ ಜೀವನ ಶೈಲಿಯಾಗಿವೆ ಎಂದು ಹೇಳಿದರು.

ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾ ಉಪಾಧ್ಯಕ್ಷ ಡಿ.ಕೆ.ಇಂದ್ರಕುಮಾರ್ ಮಾತನಾಡಿ, ಧರ್ಮ, ಧರ್ಮಗಳ ನಡುವೆ, ಜಾತಿ, ಜಾತಿಗಳ ನಡುವೆ ಕ್ಷುಲ್ಲಕ ಕಾರಣಗಳಿಗೆ ದ್ವೇಷ, ಅಸೂಯೆಗಳು ತಾಂಡವವಾಡುತ್ತಿರುವಾಗ ಬುದ್ಧನ ಕರುಣೆ, ಪ್ರೀತಿ ಎಲ್ಲರಲ್ಲೂ ಮೂಡಿ, ಪ್ರೀತಿಯ ವಾತಾವರಣ ಉದಯಿಸಲಿ ಎಂದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ರಾಮಚಂದ್ರರಾವ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ನಾರಾಯಣ್. ಎಸ್, ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ವೀರೇಶ ಪ್ರಸಾದ್, ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷ ಟೈಲರ್ ಜಗದೀಶ್, ತುಮಕೂರು ತಾಲೂಕು ಗೌರವಾಧ್ಯಕ್ಷ ಗಂಗಾಧರ್.ಜಿ.ಆರ್, ಪದಾಧಿಕಾರಿಗಳಾದ ದರ್ಶನ್, ಭರತ್, ಗೋವಿಂದಮೂರ್ತಿ ದಿಬ್ಬೂರು, ಕಿರಣ್‌ಕುಮಾರ್, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.