ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಕೃಷಿ ಉತ್ಪನ್ನಗಳು ಸೇರಿದಂತೆ ಭಾರತೀಯ ಕೃಷಿಗೆ ಜಾಗತಿಕ ಮನ್ನಣೆ ಕಲ್ಪಿಸಿಕೊಟ್ಟಿದ್ದಾರೆ. ಪರಿಣಾಮ ರಾಜ್ಯದ ನಂಜನಗೂಡು ಬಾಳೆ, ಮೈಸೂರು ವೀಳ್ಯದೆಲೆ ಮತ್ತು ಇಂಡಿ ನಿಂಬೆಹಣ್ಣು ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿಯ ಕಲಘಟಗಿ ರಸ್ತೆಯಲ್ಲಿನ ಒಡ್ಡಿನ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಧಾನಿ ಮೋದಿ ಅವರ 131ನೇ ''ಮನ್ ಕೀ ಬಾತ್'' ಸಂಚಿಕೆ ವೀಕ್ಷಿಸಿ ಆನಂತರ ಮಾತನಾಡಿ, ಮನ್ ಕೀ ಬಾತ್ ಅಲ್ಲಿ ಪ್ರಧಾನಿ ಮೋದಿ ಅವರು ವಿಶೇಷವಾಗಿ ಕರ್ನಾಟಕದ ರೈತರ ಸಾಧನೆ ಬಗ್ಗೆ ತಿಳಿಸಿ ಶ್ಲಾಘಿಸಿದ್ದಾರೆ. ಮಾಲ್ಡೀವ್ಸ್ ಸೇರಿದಂತೆ ವಿದೇಶಗಳಲ್ಲಿ ಆಹಾರೋತ್ಪನ್ನದ ಸವಿರುಚಿ ಹೆಚ್ಚಿಸಿದ ರಾಜ್ಯದ ಅನ್ನದಾತರನ್ನು ಈ ಮೂಲಕ ಹುರಿದುಂಬಿಸುತ್ತಿದ್ದಾರೆ ಎಂದರು.

ನಮ್ಮ ರಾಜ್ಯದ ಹೆಮ್ಮೆಯ ಜಿಐ ಮಾನ್ಯತೆ ಪಡೆದ ಉತ್ಪನ್ನಗಳಾದ ನಂಜನಗೂಡಿನ ಬಾಳೆಹಣ್ಣು, ಮೈಸೂರು ವೀಳ್ಯದೆಲೆ ಹಾಗೂ ಇಂಡಿಯ ನಿಂಬೆಹಣ್ಣು ವಿಶಿಷ್ಟ ರುಚಿ ಮತ್ತು ಉನ್ನತ ಗುಣಮಟ್ಟದಿಂದ ಕೂಡಿದ್ದು, ಇದೀಗ ವಾಯು ಮಾರ್ಗದ ಮೂಲಕ ಮಾಲ್ಡೀವ್ಸ್ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಿಗೆ ರಫ್ತಾಗುತ್ತಿವೆ ಎಂದರು.

ಮೂಲಕ ಭಾರತೀಯ ಕೃಷಿ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡುವ ಜೆತೆಗೆ ಪ್ರಧಾನಿ ನರೇಂದ್ರ ಮೋದಿ, ಈ ರಾಜ್ಯದ ರೈತರನ್ನು ಸದಾ ಪ್ರೋತ್ಸಾಹಿಸುತ್ತಿದ್ದಾರೆ ಎಂಬುದಕ್ಕೆ ಇಂದಿನ ಮನ್ ಕೀ ಬಾತ್ ನಿದರ್ಶನ ಎಂದರು.

ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ, ಮಾಜಿ ಸಚಿವ ಮುರುಗೇಶ ನಿರಾಣಿ, ಮೇಯರ್ ಜ್ಯೋತಿ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಲ್ಲಿಗವಾಡ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಗರಗ, ವಾರ್ಡ್‌ನ ಪ್ರಮುಖರಾದ ಪರಶುರಾಮ ಸಾಖರೆ ಇದ್ದರು. ಕಾಂಗ್ರೆಸ್‌ ಮುಖಂಡರ ಗಲಾಟೆಯಿಂದ ಭಾರತ ತಲೆ ತಗ್ಗಿಸಿದೆ: ಜೋಶಿ


ಧಾರವಾಡ: ದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಸಮಿಟ್‌ನಲ್ಲಿ ಕಾಂಗ್ರೆಸ್ ಮುಖಂಡರು ಮಾಡಿರುವ ಗಲಾಟೆಯಿಂದ ಇಡೀ ದೇಶ ತಲೆ ತಗ್ಗಿಸುವಂತಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್‌ ಗಾಂಧಿ ಮಾರ್ಗದರ್ಶನದಲ್ಲಿ ಕಾಂಗ್ರೆಸ್‌ ಗೂಂಡಾ ವರ್ತನೆ ಮಾಡುತ್ತಿದೆ. ಈ ಬಗ್ಗೆ ಅಖಿಲೇಶ್ ಯಾದವ್ ಕೂಡ ಖಂಡನೆ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ ಮತ್ತು ನಮ್ಮ ರಾಜ್ಯದವರಾದ ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಕ್ಷಮೆ ಕೇಳಬೇಕು. ಅವರಿಗೆ ದೇಶದ ಬಗ್ಗೆ ಕಳಕಳಿ ಇದ್ದರೆ, ದೇಶದ ಘನತೆ, ಮರ್ಯಾದೆ ಇದ್ದಿದ್ದರೆ ಕಟುವಾಗಿ ವರ್ತನೆ ಮಾಡುತ್ತಿರಲಿಲ್ಲ. ಅವರು ದೇಶಕ್ಕೆ ಅಪಮಾನ ಮಾಡಿದ್ದಾರೆ. ಇದೊಂದು ದೇಶದ್ರೋಹದ ಚಟುವಟಿಕೆ, ಹೀಗಾಗಿ, ಕ್ಷಮೆ ಕೇಳಿ ಪರಿವರ್ತನೆ ಮಾಡಿಕೊಳ್ಳಬೇಕು ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಟ್ವಿಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಜೋಶಿ, ಕಾಂಗ್ರೆಸ್ಸಿನಲ್ಲಿ ಸದ್ಯ ಏನು ನಡೆದಿದೆಯೋ ಆ ಹಿನ್ನೆಲೆಯಲ್ಲಿ ಅವರು ಟ್ವಿಟ್ ಮಾಡಿದ್ದಾರೆ ಎಂದು ಭಾವಿಸುತ್ತೇನೆ. ರಾಹುಲ್ ಗಾಂಧಿ ಇಲ್ಲಿಯವರೆಗೂ ಏನೂ ಆಗಿಲ್ಲ. ಅವರು ಅಮೇಥಿಯಿಂದ ಸೋತು ಕೇರಳಕ್ಕೆ ಬಂದು ಸಂಸದ ಆದರು. ಎಸ್‌ಪಿ ಜೊತೆಗೂಡಿದ್ದರೆ ಮತ್ತೆ ಸೋಲುತ್ತಿದ್ದರು. ಎಲ್ಲಿ ಮುಸ್ಲಿಂ ಮತ ಜಾಸ್ತಿ ಇವೆಯೋ ಅಲ್ಲಿ ಮುಸ್ಲಿಂ ಮತ ಪಡೆಯುವುದನ್ನು ಕಾಂಗ್ರೆಸ್ ಮಾಡುತ್ತಿದೆ. ಇಲ್ಲಿ ಆಯ್ಕೆಯಾದ ಮುಖ್ಯಮಂತ್ರಿಗಳಿಗೆ ರಾಹುಲ್ ಗಾಂಧಿ ಭೇಟಿಯಾಗಲು ಸಮಯ ಕೊಡುವುದಿಲ್ಲ. ಈ ನಕಲಿ ಪರಿವಾರದಲ್ಲಿ ಎಂತಹ ಅಹಂಕಾರ ಇದೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ಜೋಶಿ ಟೀಕಿಸಿದರು.