ಉತ್ತರ ವಾಹಿನಿ ತೀರದಲ್ಲಿ ವೈಭವದ ಕೃಷ್ಣಾರತಿ

| Published : Aug 17 2025, 04:03 AM IST

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಉತ್ತರ ವಾಹಿನಿ ಕೃಷ್ಣಾ ನದಿ ತೀರದ ಸಂಗಮೇಶ್ವರ ಮಹಾರಾಜರ ಸನ್ನಿಧಾನ ಸ್ನಾನ ಘಟ್ಟದಲ್ಲಿ ಎಂಆರ್‌ಎನ್‌ ಫೌಂಡೇಶನ್‌ ಹಾಗೂ ರೈತರ ಆಶ್ರಯದಲ್ಲಿ ಆಯೋಜಿಸಿದ್ದ ಕೃಷ್ಣಾ ಆರತಿ ಕಾರ್ಯಕ್ರಮ ಶನಿವಾರ ಸಂಜೆ ವೈಭವದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಜಮಖಂಡಿ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಉತ್ತರ ವಾಹಿನಿ ಕೃಷ್ಣಾ ನದಿ ತೀರದ ಸಂಗಮೇಶ್ವರ ಮಹಾರಾಜರ ಸನ್ನಿಧಾನ ಸ್ನಾನ ಘಟ್ಟದಲ್ಲಿ ಎಂಆರ್‌ಎನ್‌ ಫೌಂಡೇಶನ್‌ ಹಾಗೂ ರೈತರ ಆಶ್ರಯದಲ್ಲಿ ಆಯೋಜಿಸಿದ್ದ ಕೃಷ್ಣಾ ಆರತಿ ಕಾರ್ಯಕ್ರಮ ಶನಿವಾರ ಸಂಜೆ ವೈಭವದಿಂದ ಜರುಗಿತು. 11 ಜನ ಅರ್ಚಕರ ತಂಡ, ಜೊತೆಗೆ ಭರತನಾಟ್ಯ ತಂಡದವರು ಆರತಿ ಕಾರ್ಯಕ್ರಮ ನಡೆಸಿಕೊಟ್ಟರು. ದೇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮೊದಲಿಗೆ ಧೂಪಾರತಿ, ಪುಷ್ಪಾರತಿ, ಶಂಖದಾರತಿ, ನಂತರ ದೀಪಗಳಿಂದ ಕೃಷ್ಣಾ ಆರತಿ ಅರ್ಚಕರ ತಂಡ ನಡೆಸಿಕೊಟ್ಟಿತು. ಆರತಿಯ ಜೊತೆಗೆ ವೇದ ಮಂತ್ರಗಳು, ಭರತ ನಾಟ್ಯ ಪ್ರದರ್ಶನ, ಮಂಗಳಾರತಿಯ ಪದಗಳನ್ನು ಪಠಿಸುತ್ತ ಆರತಿ ಮಾಡುತ್ತಿದ್ದುದು ನೆರದ ಜನಸ್ತೋಮವನ್ನು ಮಂತ್ರ ಮುಗ್ಧಗೊಳಿಸಿತು. ಆರತಿ ಮಾಡುವ ಅರ್ಚಕರು ನಿಂತುಕೊಳ್ಳಲು ಎತ್ತರದಲ್ಲಿ ವೇದಿಕೆ ನಿರ್ಮಿಸಲಾಗಿತ್ತು. ಕೃಷ್ಣಾ ನದಿಗೆ ಅಭಿಮುಖವಾಗಿ ನಿಂತುಕೊಂಡು ಅರ್ಚಕರು ವಾದ್ಯಮೇಳ ಸಂಗೀತದೊಂದಿಗೆ ಆರತಿ ಮಾಡುತ್ತಿರುವುದನ್ನು ಭಕ್ತ ಸಮೂಹ ಕಣ್ತುಂಬಿಕೊಂಡರು.

ಕೃಷ್ಣಾ ಮಾತಾಕಿ ಜೈ, ಗಂಗಾ ಮಾತಾ ಕೀ ಜೈ ಎಂಬ ಜಯಘೋಷಗಳು ಮೊಳಗಿದವು. ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಕೃಷ್ಣೆಗೆ ಗೌರವ ಸಲ್ಲಿಸುವುದು ಹಾಗೂ ಕೃಷ್ಣೆಯ ಕಾರುಣ್ಯವನ್ನು ಸ್ಮರಿಸುವ ಉದ್ದೇಶದಿಂದ ಕೃಷ್ಣಾ ಆರತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವ್ಯವಸ್ಥಾಪಕರು ಅಭಿಪ್ರಾಯಪಟ್ಟರು.