ಬಿಜೆಪಿ ಗೆದ್ದರೆ ವಿಜಯನಗರದ ವೈಭವ: ಸಿ.ಟಿ. ರವಿ

| Published : Oct 30 2024, 12:34 AM IST

ಸಾರಾಂಶ

ಸ್ವಯಂ ಉದ್ಯೋಗ, ನೇರಸಾಲ, ಗಂಗಾ ಕಲ್ಯಾಣ ಯೋಜನೆಗೆ ಬಳಕೆಯಾಗಬೇಕಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಮಂತ್ರಿ ಮತ್ತು ಹಿಂಬಾಲಕರ ಅಭಿವೃದ್ಧಿಗೆ ಬಳಕೆಯಾಗಿದೆ ಎಂದು ಎಂಎಲ್ಸಿ ಸಿ.ಟಿ. ರವಿ ಹೇಳಿದರು.

ಕುರುಗೋಡು: ಬಿಜಾಪುರದ ಸುಲ್ತಾನ ಆದಿಲ್ ಶಾಹಿ ಪರ ಕಾಂಗ್ರೆಸ್, ವಿಜಯನಗರ ಸಾಮ್ರಾಜ್ಯ ಪರ ಬಿಜೆಪಿ. ಬಿಜೆಪಿ ಗೆದ್ದರೆ ವಿಜಯನಗರದ ವೈಭವ, ಆದಿಲ್ ಶಾಹಿ ಕಾಂಗ್ರೆಸ್‌ ಗೆದ್ದರೆ ಹಾಳು ಹಂಪಿ. ಹಾಳು ಹಂಪಿ ಬೇಡ ಎಂದರೆ ಆದಿಲ್ ಶಾಹಿ ಪಾರ್ಟಿ ಕಾಂಗ್ರೆಸ್ ಸೋಲಬೇಕು ಎಂದು ಬಿಜೆಪಿ ಮುಖಂಡ ಎಂಎಲ್ಸಿ ಸಿ.ಟಿ. ರವಿ ಹೇಳಿದರು.

ಸಮೀಪದ ಕುಡುತಿನಿಯಲ್ಲಿ ಸಂಡೂರು ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು. ವಿಜಯಪುರದಲ್ಲಿ ಹಿಂದೂ ರೈತರಿಗೆ ಸೇರಿದ ಫಲವತ್ತಾದ ಭೂಮಿಯನ್ನು ಮುಸ್ಲಿಂ ನಾಯಕರು ವಕ್ಫ್ ಬೋರ್ಡ್‌ಗೆ ಸೇರಿದ ಭೂಮಿ ಎಂದು ಹೇಳುತ್ತಾರೆ. ಅದನ್ನು ಸಿದ್ದರಾಮಯ್ಯ ಬೆಂಬಲಿಸುತ್ತಿದ್ದಾರೆ. ಇದು ಯಾವ ನ್ಯಾಯ? ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಲೆ ಏರಿಕೆ ಮಾಡಿದ ರಾಜ್ಯ ಸರ್ಕಾರ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸ್ವಯಂ ಉದ್ಯೋಗ, ನೇರಸಾಲ, ಗಂಗಾ ಕಲ್ಯಾಣ ಯೋಜನೆಗೆ ಬಳಕೆಯಾಗಬೇಕಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಮಂತ್ರಿ ಮತ್ತು ಹಿಂಬಾಲಕರ ಅಭಿವೃದ್ಧಿಗೆ ಬಳಕೆಯಾಗಿದೆ ಎಂದು ಆರೋಪಿಸಿದರು.

ಮಾಸಿಕ ೧೦ ಕೆಜಿ ಅಕ್ಕಿ ಕೊಡುವುದಾಗಿಯೂ ಘೋಷಣೆ ಮಾಡಿದ್ದ ಕಾಂಗ್ರೆಸ್‌ ಸುಳ್ಳು ಭರವಸೆಗಳಿಂದ ಜನರನ್ನು ವಂಚಿಸಿದೆ. ವಿಜಯಪುರದಲ್ಲಿ ಪ್ರತಿಭಟನೆ ನಡೆಯುತ್ತಿದೆ. ರೈತರ ಪಿತ್ರಾರ್ಜಿತ ಜಮೀನು, ದಲಿತರ ಮನೆ, ಜಮೀನು ಎಲ್ಲವೂ ವಕ್ಛ್ ಬೋರ್ಡ್‌ದಂತೆ. ಕಾಂಗ್ರೆಸ್ ಇದ್ದರೆ ಮತ್ತೊಂದು ಪಾಕಿಸ್ತಾನ ಇದ್ದಂತೆ. ಇದು ಜಾತಿ ಚುನಾವಣೆಯಲ್ಲ. ಈ ಚುನಾವಣೆ ಆದಿಲ್ ಶಾಹಿ ಬೆಂಬಲಿತ ಪಕ್ಷಕ್ಕೆ ಸಂದೇಶ ಕೊಡುತ್ತದೆ. ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರಿಗೆ ಮತ ನೀಡಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು ಎಂದರು.

ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಜಿಲ್ಲಾಧ್ಯಕ್ಷ ಅನಿಲ್ ನಾಯ್ಡ್, ಹುಂಡೆ ಸುರೇಶ್, ಅರುಣಾ, ಮಲ್ಲನಗೌಡ, ಭಾಸ್ಕರ್, ಗುರುಮೂರ್ತಿ, ಹಾಲಪ್ಪ, ದೊಡ್ಡಬಸಪ್ಪ, ದೇವೇಂದ್ರಪ್ಪ, ದುಗ್ಗೆಪ್ಪ, ಗೀತಾ ನಾಗರಾಜ ಇತರರಿದ್ದರು.

ಸಂಡೂರು ಉಪ ಚುನಾವಣೆ: ಬಿಜೆಪಿ ಗೆಲುವು ಖಚಿತವಾಲ್ಮೀಕಿ ನಿಗಮದ ಹಗರಣ ಹೆಚ್ಚು ಪರಿಣಾಮ ಬೀರಲಿದೆ: ಭೈರತಿ ಬಸವರಾಜ

ಬಳ್ಳಾರಿ:

ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಹುಮತದಿಂದ ಗೆಲುವು ದಾಖಲಿಸಲಿದ್ದಾರೆ ಎಂದು ಮಾಜಿ ಸಚಿವ ಭೈರತಿ ಬಸವರಾಜ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಡೂರು ಈ ವರೆಗೆ ಸಮಗ್ರ ಅಭಿವೃದ್ಧಿಯಾಗಿಲ್ಲ. ಹಾಲಿ ಸಂಸದ ಈ. ತುಕಾರಾಂ ಅವರು ಈಗಾಗಲೇ ನಾಲ್ಕು ಬಾರಿ ಗೆದ್ದಿದ್ದಾರೆ. ಆದರೆ, ಮತ್ತದೇ ಕುಟುಂಬಕ್ಕೆ ಟಿಕೆಟ್ ನೀಡಿರುವುದು ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನವಿದೆ. ಇನ್ನು ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ ಸಹ ಈ ಚುನಾವಣೆಯಲ್ಲಿ ಹೆಚ್ಚು ಪರಿಣಾಮ ಬೀರಲಿದೆ. ಕ್ಷೇತ್ರದಲ್ಲಿ ಬಿಜೆಪಿ ಪರ ಅಲೆ ಸೃಷ್ಟಿಯಾಗಿದ್ದು ಕಾಂಗ್ರೆಸ್‌ ಆಡಳಿತದಿಂದ ರೋಸಿ ಹೋಗಿರುವ ಜನರು ಈ ಬಾರಿ ಬಿಜೆಪಿ ಅಭ್ಯರ್ಥಿ ಚುನಾಯಿಸಲಿದ್ದಾರೆ ಎಂದರು.

ಕುರುಬ ಸಮುದಾಯದ ನನಗೆ ಪಕ್ಷ ಸ್ಥಾನಮಾನ ನೀಡಿದೆ. ಹೀಗಾಗಿ, ಸಂಡೂರು ವಿಧಾನಸಭಾ ಚುನಾವಣೆಯಲ್ಲಿ ಸಮುದಾಯದ ಒಲವು ಪಡೆಯಲಾಗುತ್ತಿದೆ. ಕ್ಷೇತ್ರದಲ್ಲಿ ಪ್ರಚಾರ ನಡೆಸಿ, ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಾಗುವುದು. ಕ್ಷೇತ್ರದ ಎಲ್ಲ ಕಡೆ ಬಿಜೆಪಿ ಅಭ್ಯರ್ಥಿಯ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. ಬಿಜೆಪಿ ಗೆದ್ದರೆ ಸಂಡೂರು ಸಮಗ್ರ ಅಭಿವೃದ್ಧಿಯಾಗಲಿದೆ ಎಂದು ಮತದಾರರೇ ಮಾತನಾಡುತ್ತಿದ್ದಾರೆ. ಹೀಗಾಗಿ, ಜನರ ಆಶೀರ್ವಾದ ಈ ಬಾರಿ ಬಿಜೆಪಿಗೆ ಖಚಿತ ಎಂಬ ಸೂಚನೆ ಕಂಡು ಬರುತ್ತಿದೆ ಎಂದು ಹೇಳಿದರು.

ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ಪಕ್ಷದ ಹಿರಿಯ ಮುಖಂಡರಾದ ಕೆ.ಎ. ರಾಮಲಿಂಗಪ್ಪ, ದಮ್ಮೂರು ಶೇಖರ್, ಜೀವೇಶ್ವರಿ ರಾಮಕೃಷ್ಣ, ಅಯ್ಯಾಳಿ ತಿಮ್ಮಪ್ಪ, ಡಾ. ಬಿ.ಕೆ. ಸುಂದರ್, ಎಸ್. ಮಲ್ಲನಗೌಡ, ಎಚ್‌. ತಿಪ್ಪಣ್ಣ, ಕೆಆರ್. ಮಧು ಕುಮಾರ್, ಕೆ. ರಾಮಕೃಷ್ಣ, ಮಲ್ಲೇಶ್ ಕುಮಾರ್ ಇತರರಿದ್ದರು.