ದಾವಣಗೆರೆ ನಗರದ ಜಿಎಂ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿರುವ 2 ದಿನಗಳ ಓಪನ್ ಡೇ ಕಾರ್ಯಕ್ರಮಕ್ಕೆ ಪಿಯುಸಿ ವಿದ್ಯಾರ್ಥಿಗಳಿಂದ ಮೊದಲ ದಿನ ಮಂಗಳವಾರ ಅತ್ಯುತ್ತಮ ಸ್ಪಂದನೆ ದೊರೆಯಿತು.

- ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ, ಸ್ವಉದ್ಯೋಗ ಕೋರ್ಸ್‌ಗಳ ಮಾಹಿತಿ ಉದ್ದೇಶ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರದ ಜಿಎಂ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿರುವ 2 ದಿನಗಳ ಓಪನ್ ಡೇ ಕಾರ್ಯಕ್ರಮಕ್ಕೆ ಪಿಯುಸಿ ವಿದ್ಯಾರ್ಥಿಗಳಿಂದ ಮೊದಲ ದಿನ ಮಂಗಳವಾರ ಅತ್ಯುತ್ತಮ ಸ್ಪಂದನೆ ದೊರೆಯಿತು.

ಜಿಎಂ ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಹಾಗೂ ಸ್ವಯಂ ಉದ್ಯೋಗ ಆಧಾರಿತ ಕೋರ್ಸ್‌ಗಳ ಕುರಿತು ಮಾಹಿತಿ ಪಡೆದು ಆಯ್ಕೆ ಮಾಡಿಕೊಂಡು ಪ್ರವೇಶ ಪಡೆಯಲು ಓಪನ್ ಡೇ ಮೂಲಕ ಆಹ್ವಾನ ನೀಡಲಾಗಿತ್ತು.

ಇಂದು ನಡೆದ ಈ ಓಪನ್ ಡೇಗೆ ಕಲೆ, ವಿಜ್ಞಾನ, ಗಣಕ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳ ಪಿಯುಸಿ ವಿದ್ಯಾರ್ಥಿಗಳು ತಮ್ಮ ಅಧ್ಯಾಪಕರೊಂದಿಗೆ ಆಗಮಿಸಿ, ಜಿಎಂ ವಿಶ್ವವಿದ್ಯಾಲಯದಲ್ಲಿನ ಭವಿಷ್ಯವಂತ ವೃತ್ತಿಪರ ಹಾಗೂ ಸ್ವಯಂ ಉದ್ಯೋಗಕ್ಕೆ ನೆರವಾಗುವ ಹೊಸ ಕೋರ್ಸ್‌ಗಳ ಕುರಿತು ಸಮಗ್ರ ಮಾಹಿತಿ ಪಡೆದರು.

ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಸುಂದರ ಪರಿಸರ, ವಿಶಾಲ ತರಗತಿ ಕೊಠಡಿಗಳು, ಸುಸಜ್ಜಿತ ಪ್ರಯೋಗಾಲಯಗಳು, ಡಿಜಿಟಲ್ ಸ್ಮಾರ್ಟ್ ಕ್ಲಾಸ್‌ಗಳು, ಆಧುನಿಕ ಕೇಂದ್ರ ಗ್ರಂಥಾಲಯ, ಇ-ಗ್ರಂಥಾಲಯ, ವಿದ್ಯಾರ್ಥಿ ವಸತಿ ಗೃಹಗಳು, ಕ್ರೀಡಾಂಗಣಗಳು, ಸಭಾಂಗಣಗಳು, ಬಹಿರಂಗ ಸಭಾಂಗಣಗಳು, ವಿವಿಧ ವಿಭಾಗಗಳ ಕೊಠಡಿಗಳು, ಆಡಳಿತಾತ್ಮಕ ಕಚೇರಿಗಳು ಹಾಗೂ ಶೈಕ್ಷಣಿಕ ಮತ್ತು ಕ್ರೀಡಾ ಚಟುವಟಿಕೆಗಳ ವ್ಯವಸ್ಥೆಗಳನ್ನು ಒಳಗೊಂಡಂತೆ ಇಡೀ ಕ್ಯಾಂಪಸ್‌ನ ಸುತ್ತಾಟ ನಡೆಸಿ ಪ್ರತಿಯೊಂದರ ಬಗ್ಗೆ ಮಾಹಿತಿ ತಿಳಿದುಕೊಂಡರು.

ಆಯಾ ವಿಭಾಗಗಳ ಡೀನ್‌ಗಳು, ನಿರ್ದೇಶಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ವಿಭಾಗಗಳಲ್ಲಿ ಲಭ್ಯವಿರುವ ಕೋರ್ಸುಗಳು ಮತ್ತು ಭವಿಷ್ಯದ ಉದ್ಯೋಗ ಅವಕಾಶಗಳ ಕುರಿತು ವಿವರಿಸಿದರು.

ದಾವಣಗೆರೆ ಜಿಲ್ಲೆ, ವಿಜಯನಗರ ಜಿಲ್ಲೆಯ ಹರಪನಹಳ್ಳಿ ಸೇರಿದಂತೆ ವಿವಿಧ ಕಾಲೇಜುಗಳಿಂದ ಸುಮಾರು 2 ಸಾವಿರ ವಿದ್ಯಾರ್ಥಿಗಳು ಮೊದಲ ದಿನ ಆಗಮಿಸಿ ಮಾಹಿತಿ ಪಡೆದರು.

ಜಿಎಂಯು ರೋಬೋಟಿಕ್ಸ್ ಮತ್ತು ಆಟೋಮೇಷನ್ ಹಾಗೂ ಮಾಹಿತಿ ವಿಜ್ಞಾನ ವಿಭಾಗಗಳ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ನವಯುಗಕ್ಕೆ ತಕ್ಕಂತಹ ನಾವೀನ್ಯ ಸಂಶೋಧನೆ ಮತ್ತು ಆವಿಷ್ಕಾರಗಳ ಮಾದರಿಗಳ ಪ್ರದರ್ಶನವನ್ನು ವೀಕ್ಷಿಸಿದ ಪಿಯುಸಿ ವಿದ್ಯಾರ್ಥಿಗಳು, ಜಿಎಂ ವಿಶ್ವವಿದ್ಯಾಲಯದಲ್ಲಿನ ವಿಶೇಷ ಕೋರ್ಸ್‌ಗಳು ಮತ್ತು ಸುಸಜ್ಜಿತ ಕ್ಯಾಂಪಸ್ ಬಗ್ಗೆ ಮೆಚ್ಚುಗೆಯ ನುಡಿಗಳನ್ನು ವ್ಯಕ್ತಪಡಿಸಿದರು.

- - -

-23ಕೆಡಿವಿಜಿ34, 35.ಜೆಪಿಜಿ:

ದಾವಣಗೆರೆ ಜಿಎಂ ವಿ.ವಿ.ಯಲ್ಲಿ ನಡೆದ ಓಪನ್ ಡೇ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಾವೀನ್ಯ ಸಂಶೋಧನೆ, ಆವಿಷ್ಕಾರಗಳ ಮಾದರಿಗಳ ಪ್ರದರ್ಶನ ವೀಕ್ಷಿಸಿದರು.