ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯಲ್ಲಿರುವ ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರಿಗೆ ಅವಶ್ಯವಿರುವ ಮೂಲಸೌಲಭ್ಯಗಳನ್ನು ಒದಗಿಸಲು ಮುಂದಾಗುವಂತೆ ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಬಿ.ಎಸ್.ಸುರೇಶ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರ ಸಮ್ಮುಖದಲ್ಲಿ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಪ್ರಾಧಿಕಾರ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಕೆ.ಯು.ಐ.ಡಿ.ಎಫ್.ಸಿ ಹಾಗೂ ಕರ್ನಾಟಕ ನಗರ ನೀರು ಮತ್ತು ಒಳಚರಂಡಿ ಮಂಡಳಿಯ ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಪ್ರಗತಿ ಪರಿಶೀಲಿಸಿ ಮಾತನಾಡಿದರು.
ಕುಡಿಯುವ ನೀರು, ರಸ್ತೆ, ಸ್ವಚ್ಛತೆ, ಒಳಚರಂಡಿ ವ್ಯವಸ್ಥೆ, ತೆರಿಗೆ ಸಂಗ್ರಹ ಸೇರಿದಂತೆ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಆದ್ಯತೆ ಮೇರೆಗೆ ಪರಿಹರಿಸುವ ನಿಟ್ಟಿನಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳು ಕಾರ್ಯನಿರ್ವಹಿಸಬೇಕು. ಅಮೃತ್ ನಗರೋತ್ಥಾನ, ಮುಖ್ಯಮಂತ್ರಿಗಳ ವಿಶೇಷ ಅನುದಾನ ಸೇರಿದಂತೆ ವಿವಿಧ ಯೋಜನೆಗಳಡಿ ಬಿಡುಗಡೆಯಾಗಿರುವ ಅನುದಾನಗಳ ಸಮರ್ಪಕ ಬಳಕೆಯಾಗಬೇಕು. ಯಾವುದೇ ಅನುದಾನ ವಾಪಸ್ಸಾಗದಂತೆ ಎಚ್ಚರ ವಹಿಸಿ ಜಿಲ್ಲೆಯ ಅಭಿವೃದ್ಧಿಯ ವೇಗ ಹೆಚ್ಚಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಹೇಳಿದರು.ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಯಳಂದೂರಿನಲ್ಲಿ ತಲಾ ಒಂದೊಂದು ಇಂದಿರಾ ಕ್ಯಾಂಟೀನ್‌ಗಳಿದ್ದು, ಹನೂರಿನಲ್ಲಿ ಕ್ಯಾಂಟೀನ್ ನಿರ್ಮಾಣದ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಬೇಕು. ಅಲ್ಲದೆ ಚಾಮರಾಜನಗರ ಹಾಗೂ ಕೊಳ್ಳೇಗಾಲದಲ್ಲಿ ಹೆಚ್ಚುವರಿಯಾಗಿ ಇಂದಿರಾ ಕ್ಯಾಂಟೀನ್ ಅಗತ್ಯವಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ನಗರದ ಜೋಡಿರಸ್ತೆ ಅಗಲೀಕರಣ ಸಂಬಂಧ ನಗರಸಭೆಗೆ ಅಗತ್ಯ ದಾಖಲಾತಿ ನೀಡಿರುವವರಿಗೆ ಪರಿಹಾರ ನೀಡಬೇಕಾಗಿದೆ. ಈ ಪ್ರಕ್ರಿಯೆಯನ್ನು ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಅದಷ್ಟು ಬೇಗನೆ ಪೂರ್ಣಗೊಳಿಸಲು ನಿರ್ಧರಿಸಬೇಕು. ಅಲ್ಲದೆ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸಲು ಕೊರತೆ ಇರುವ ಸಿಬ್ಬಂದಿ ಪಟ್ಟಿಯನ್ನು ಲಿಖಿತವಾಗಿ ಸಲ್ಲಿಸುವಂತೆ ಸೂಚಿಸಿದರು. ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರಂತರವಾಗಿದ್ದು, ಟಿ.ನರಸೀಪುರದಿಂದ ಚಾಮರಾಜನಗರ ಪಟ್ಟಣಕ್ಕೆ ಸರಬರಾಜಾಗುವ ಕುಡಿಯುವ ನೀರಿನ ಪೈಪ್‌ಲೈನ್ ಹಾಗೂ ಮೋಟಾರ್ ತುಂಬಾ ಹಳೇಯದಾಗಿದ್ದು, ಪದೇ ಪದೇ ದುರಸ್ತಿ ಗೀಡಾಗುತ್ತಿದೆ. ಇದಕ್ಕಾಗಿ ಹೊಸ ಪೈಪ್ ಲೈನ್ ಅಳವಡಿಸಬೇಕು ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ನಗರಾಭಿವೃದ್ಧಿ ಸಚಿವರು, ಪಟ್ಟಣದ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ ಮಾಲಂಗಿಯಿಂದ ಕುಡಿಯುವ ನೀರು ತರಲು ಅಂದಾಜುಪಟ್ಟಿ ಸಿದ್ಧಪಡಿಸಬೇಕು. ಪಟ್ಟಣದ ಒಳಚರಂಡಿ ನಿರ್ಮಾಣಕ್ಕೆ ಹೊಸ ಅಂದಾಜುಪಟ್ಟಿ ತಯಾರಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಕೊಳ್ಳೇಗಾಲ ನಗರಸಭಾ ವ್ಯಾಪ್ತಿ ವಿಸ್ತರಿಸುತ್ತಿದೆ. ನಗರೋತ್ಥಾನದಡಿ ಯೋಜನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಜನರಿಗೆ ಹಕ್ಕುಪತ್ರಗಳ ವಿತರಣೆಯಾಗಬೇಕು. ಯಳಂದೂರು ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆಯಾಗಬೇಕು. ಹೊಸ ಬಸ್ ನಿಲ್ದಾಣ, ವಾಣಿಜ್ಯ ಮಳಿಗೆಗಳು ನಿರ್ಮಾಣವಾಗಬೇಕು. ಸಾರ್ವಜನಿಕ ರಸ್ತೆ ಕೆರೆಗಳ ಒತ್ತುವರಿ ತೆರವುಗೊಳ್ಳಬೇಕು. ಬೀದಿದೀಪಗಳ ಅಳವಡಿಕೆಯಾಗಬೇಕು ಎಂದು ಸಭೆಗೆ ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ಡೆಂಘೀ ತಡೆಯಲು ಮನೆಯ ಸುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಹೋಟೆಲ್‌ಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಈ ನಿಟ್ಟಿನಲ್ಲಿ ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳು ಆರೋಗ್ಯಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪಂಚಾಯಿತಿ ಮಟ್ಟದಲ್ಲಿ ಸ್ವಚ್ಛತೆ ಬಗ್ಗೆ ಸರ್ವೆ ನಡೆಸಿ ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿದರು.
ಪೌರಾಡಳಿತ ಸಚಿವರಾದ ರಹೀಂ ಖಾನ್, ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನ, ನಗರಾಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ದೀಪಾ ಚೋಳನ್, ಪೌರಡಳಿತ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ, ವ್ಯವಸ್ಥಾಪಕ ನಿರ್ದೇಶಕ ಶರತ್, ಮುಖ್ಯ ಅಭಿಯಂತರ ರಾಧಕೃಷ್ಣ, ಮುಖ್ಯ ಯೋಜನಾಧಿಕಾರಿ ಶರೀನ್ ನದಾಫ್, ಜಿಲ್ಲಾಧಿಕಾರಿ ಶಿಲ್ಪಾನಾಗ್ ಮತ್ತಿತರರಿದ್ದರು.