ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಿ: ಶಾಸಕ ದೊಡ್ಡನಗೌಡ ಪಾಟೀಲ

| Published : Oct 18 2024, 12:09 AM IST / Updated: Oct 18 2024, 12:10 AM IST

ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಿ: ಶಾಸಕ ದೊಡ್ಡನಗೌಡ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ವಾಲ್ಮೀಕಿ ಮಹರ್ಷಿ ಬರೆದ ರಾಮಾಯಣ ಗ್ರಂಥವು ಸಮಾಜದಲ್ಲಿ ಮನುಕುಲವು ಹೇಗೆ ಬದುಕಬೇಕು ಎಂಬುದನ್ನು ತಿಳಿಸುವಂತಹ ಅದ್ಭುತ ಗ್ರಂಥವಾಗಿದೆ.

ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕುಷ್ಟಗಿ

ವಾಲ್ಮೀಕಿ ಮಹರ್ಷಿ ಬರೆದ ರಾಮಾಯಣ ಗ್ರಂಥವು ಸಮಾಜದಲ್ಲಿ ಮನುಕುಲವು ಹೇಗೆ ಬದುಕಬೇಕು ಎಂಬುದನ್ನು ತಿಳಿಸುವಂತಹ ಅದ್ಭುತ ಗ್ರಂಥವಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತ ಹಾಗೂ ವಾಲ್ಮೀಕಿ ಸಮಾಜದ ವತಿಯಿಂದ ನಡೆದ ವಾಲ್ಮೀಕಿ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಾಲ್ಮೀಕಿ ಸಮಾಜವು ತುಳಿತಕ್ಕೆ ಒಳಗಾಗಿರುವ ಸಮಾಜವಾಗಿದ್ದು, ಹಿಂದುಳಿದ ಸಮಾಜವಾಗಿದೆ. ವಾಲ್ಮೀಕಿ ಸಮಾಜದವರು ಶಿಕ್ಷಣವಂತರಾಗುವ ಮೂಲಕ ಉತ್ತಮ, ಸದೃಢ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಈ ಹಿಂದೆ ರಾಜಮನೆತನಗಳು ಶಸ್ತ್ರಾಸ್ತ್ರಗಳ ಮೂಲಕ ಯುದ್ಧದ ಮೂಲಕ ಸಮಾಜ ಕಟ್ಟಿದ್ದರು. ಈಗ ಅಕ್ಷರದ ಮೂಲಕ ಸಂಸ್ಕೃತಿಯ ಮೂಲಕ ಮಾತ್ರ ದೃಢವಾದ ಸಮಾಜ ಕಟ್ಟಬೇಕಿದೆ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ. ಎಸ್.ವಿ. ಡಾಣಿ ಉಪನ್ಯಾಸ ನೀಡಿ, ವಾಲ್ಮೀಕಿ ಮಹರ್ಷಿ ರಾಮಾಯಣ ಮಹಾಕಾವ್ಯ ರಚನೆ ಮೂಲಕ ಗತವೈಭವ ಸಾರಿದ್ದಾರೆ. ಇಂದಿನ ದಿನಮಾನಗಳಲ್ಲಿ ರಾಮಾಯಣ ಅಧ್ಯಯನ ಮಾಡುವ ಅಗತ್ಯ ಇದೆ. ವಾಲ್ಮೀಕಿ ಪ್ರಪ್ರಥಮವಾಗಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದ್ದಾರೆ. ಇಂತಹ ಮಹಾನ್ ದಾರ್ಶನಿಕರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಜಿಪಂ ಮಾಜಿ ಅಧ್ಯಕ್ಷೆ ಮಾಲತಿ ನಾಯಕ ಮಾತನಾಡಿ, ವಾಲ್ಮೀಕಿ ಸಮಾಜವು ಶಿಕ್ಷಣದಿಂದ ಹಿಂದುಳಿದಿದ್ದು, ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಹಾಗೂ ಉನ್ನತ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಮಾತ್ರ ಸಮಾಜ ಕಟ್ಟಲು ಸಾಧ್ಯವಿದೆ ಎಂದರು.

ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಮಾನಪ್ಪ ತಳವಾರ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ ಅಶೋಕ ಶಿಗ್ಗಾಂವಿ, ಬಿಇಒ ಸುರೇಂದ್ರ ಕಾಂಬಳೆ, ವಸಂತ ಮೇಲಿನಮನಿ, ತಾಪಂ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ, ಗ್ರೇಡ್ 2 ತಹಸೀಲ್ದಾರ ಮುರುಳೀಧರ, ಸಿಡಿಪಿಒ ಯಲ್ಲಮ್ಮ ಹಂಡಿ, ದೇವಪ್ಪ ಮೇಣಸಗಿ, ನಾಗಪ್ಪ ಬಿಳಿಯಪ್ಪನವರು, ಎಂ. ಸರಸ್ವತಿ, ಬಾಲಚಂದ್ರ ಸಂಗನಾಳ, ಮೈನುದ್ದಿನ ಮುಲ್ಲಾ, ವೀರಪ್ಪ ನಾಯಕ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ತಾಲೂಕಿನ ವಾಲ್ಮೀಕಿ ಸಮಾಜದ ಮುಖಂಡರು, ಸಾರ್ವಜನಿಕರು ಇದ್ದರು. ಗ್ಯಾನಪ್ಪ ತಳವಾರ ಸಂಗಡಿಗರು ಪ್ರಾರ್ಥಿಸಿದರು. ನಾಡಗೀತೆ ಹಾಗೂ ರೈತಗೀತೆಗಳನ್ನು ಸ್ಪಂದನಾ ಸಂಗಡಿಗರು ನಡೆಸಿಕೊಟ್ಟರು.