ಸಾರಾಂಶ
ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಇಲ್ಲಿಯ ಸರ್ಕೀಟ್ ಹೌಸ್ ಆವರಣದಲ್ಲಿ ಮಂಗಳವಾರ ಕಟ್ಟಡ ಕಾರ್ಮಿಕರಿಗಾಗಿ ಸಂಚಾರಿ ಆರೋಗ್ಯ ಕ್ಲಿನಿಕ್ ಯೋಜನೆಯ ಮೂರು ವಾಹನಗಳಿಗೆ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಧಾರವಾಡ
ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಇಲ್ಲಿಯ ಸರ್ಕೀಟ್ ಹೌಸ್ ಆವರಣದಲ್ಲಿ ಮಂಗಳವಾರ ಕಟ್ಟಡ ಕಾರ್ಮಿಕರಿಗಾಗಿ ಸಂಚಾರಿ ಆರೋಗ್ಯ ಕ್ಲಿನಿಕ್ ಯೋಜನೆಯ ಮೂರು ವಾಹನಗಳಿಗೆ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಅವರು, ಕಟ್ಟಡ ಕಾರ್ಮಿಕರ ಆರೋಗ್ಯ, ಸುರಕ್ಷತೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದ ಪ್ರತಿ ಜಿಲ್ಲೆಯಲ್ಲಿ ಆರೋಗ್ಯ ಕ್ಲಿನಿಕ್ ಸಂಚಾರಿ ವಾಹನಗಳನ್ನು ರೂಪಿಸಲಾಗಿದೆ. ಕಾರ್ಮಿಕರು ಮತ್ತು ಅವರ ಮಕ್ಕಳು ಆರೋಗ್ಯವಾಗಿ ಇರಬೇಕೆಂಬ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣವಾಗುವ ಪ್ರದೇಶಕ್ಕೆ ಹೋಗಿ, ಸಂಚಾರಿ ಆರೋಗ್ಯ ಕ್ಲಿನಿಕ್ ಯೋಜನೆಯಡಿ ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದರು.
ಕಟ್ಟಡ ನಿರ್ಮಾಣ ಪ್ರದೇಶಗಳಿಗೆ ಹೋಗಿ, ಜ್ವರ, ಕೆಮ್ಮು, ಮಧುಮೇಹ, ರಕ್ತದೊತ್ತಡ, ರಕ್ತ ಪರೀಕ್ಷೆ ಸೇರಿದಂತೆ ಸುಮಾರು 20 ಅಂಶಗಳ ಅನ್ವಯ ಕಾರ್ಮಿಕರ ಹಾಗೂ ಅವರ ಸಂಬಂಧಿಗಳ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ತಪಾಸಣೆ ಕುರಿತ ಅವರ ದಾಖಲೆಗಳು ಆನ್ ಲೈನ್ ಮೂಲಕ ನೇರವಾಗಿ ಕಾರ್ಮಿಕ ಇಲಾಖೆಯ ಮುಖ್ಯಕಚೇರಿಗೆ ತಲುಪುತ್ತವೆ. ಕಾರ್ಮಿಕರ ಅಧಿಕೃತ ದಾಖಲೆಗಳನ್ನು ಅಂತರ್ಜಾಲದ ಮೂಲಕ ದೃಢಪಡಿಸಿಕೊಳ್ಳಲಾಗುತ್ತದೆ ಎಂದರು.+++ಕಾರ್ಯಾದೇಶ ಪಡೆದಿರುವ ಸಂಸ್ಥೆಗಳು ಪ್ರತಿ ತಿಂಗಳು ಸಂಚಾರಿ ಆರೋಗ್ಯ ಕ್ಲಿನಿಕ್ ಸಂಚರಿಸುವ ಮಾರ್ಗ, ಸ್ಥಳದ ಬಗ್ಗೆ ರೂಟ್ ಮ್ಯಾಪ್ನ್ನು ಸಿದ್ಧಪಡಿಸಿ, ಖಾತರಿಪಡಿಸಿಕೊಳ್ಳಬೇಕು. ಪ್ರತಿ ತಿಂಗಳ ಮಾರ್ಗವನ್ನು ಕನಿಷ್ಠ 15 ದಿನಗಳ ಮುಂಚಿತವಾಗಿ ಸಿದ್ಧಪಡಿಸಿ, ವಾಹನಗಳು ಸಂಚರಿಸುವ ಮಾರ್ಗದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಪ್ರಚಾರ ನಡೆಸಬೇಕು. ಮಾರ್ಗವನ್ನು ತಯಾರಿಸುವಾಗ ಸಂಸ್ಥೆಯು ಎಲ್ಲ ತಾಲೂಕುಗಳು ಮತ್ತು ತಾಲೂಕಿನ ಎಲ್ಲ ಪ್ರದೇಶಗಳು (ಗ್ರಾಮ, ವಾರ್ಡ್, ಹೋಬಳಿ) ಒಳಪಡುವ ರೀತಿ ಕ್ರಮ ವಹಿಸಬೇಕು. ಎಲ್ಲ ವಿಧಾನಸಭಾ ಕ್ಷೇತ್ರಗಳು ಒಳಪಡುವ ರೀತಿಯಲ್ಲಿ ಮಾರ್ಗ ಸಿದ್ದಪಡಿಸಬೇಕು. ಮಾರ್ಗ ಸಿದ್ಧಪಡಿಸುವಾಗ ಪ್ರಯಾಣದ ಸಮಯವು ಅತ್ಯಂತ ಕಡಿಮೆ ಇರುವಂತೆ ಹಾಗೂ ನಿಗದಿತ ಸ್ಥಳದಲ್ಲಿ ಸಂಚಾರಿ ಆರೋಗ್ಯ ಘಟಕಗಳು ಕನಿಷ್ಠ ನಾಲ್ಕು ಗಂಟೆಗಳಾದರೂ ಕಾರ್ಯ ನಿರ್ವಹಿಸುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಹೆಚ್ಚಿನ ಸಂಖ್ಯೆಯ ನೋಂದಾಯಿತ ಕಾರ್ಮಿಕರಿಗೆ ಸೌಲಭ್ಯ ಸಿಗುವಂತಹ ಪ್ರದೇಶಗಳಿಗೆ ಹೋಗುವುದು, ಸಂಚಾರಿ ಆರೋಗ್ಯ ಘಟಕಗಳು ಕಾರ್ಯ ನಿರ್ವಹಿಸುವ ಸ್ಥಳಗಳಲ್ಲಿ ಶೌಚಾಲಯಗಳು ಇರುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು. ಸದರಿ ಸಂಚಾರಿ ಆರೋಗ್ಯ ಘಟಕಗಳಲ್ಲಿ 25 ವೈದ್ಯಕೀಯ ಉಪಕರಣಗಳು, ಐದು ಪ್ರಯೋಗಾಲಯದ ಉಪಕರಣಗಳು ಹಾಗೂ 37 ವಿವಿಧ ವೈದ್ಯಕೀಯ ಬಳಕೆ ವಸ್ತುಗಳಿವೆ. ಈ ಕುರಿತು ಕಾರ್ಮಿಕ ಇಲಾಖೆ ಅಧಿಕಾರಿಗಳು ನಿಗಾ ವಹಿಸುತ್ತಾರೆ ಎಂದು ಅವರು ತಿಳಿಸಿದರು.27ಡಿಡಬ್ಲೂಡಿ6ಕಾರ್ಮಿಕರಿಗಾಗಿ ಸಂಚಾರಿ ಆರೋಗ್ಯ ಕ್ಲಿನಿಕ್ ಯೋಜನೆಯ ಮೂರು ವಾಹನಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ಇತರೆ ಗಣ್ಯರು ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.