ಸಾರಾಂಶ
ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿಮಹದಾಯಿ ನದಿ ನೀರಿನ ಹಂಚಿಕೆ ಸಂಬಂಧ ಗೋವಾ ಸರ್ಕಾರದ ಒತ್ತಡದ ಮೇರೆಗೆ ಕೇಂದ್ರ ಪ್ರವಾಹ (ನೀರು ಮತ್ತು ಸಾಮರಸ್ಯಕ್ಕಾಗಿ ಪ್ರಗತಿಪರ ನದಿ ಪ್ರಾಧಿಕಾರ) ಸಂಸ್ಥೆಯ ನಿಯೋಗ ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ಈ ಮೂರು ರಾಜ್ಯಗಳಲ್ಲಿನ ಮಹದಾಯಿ ನದಿ ಜಲಾನಯನ ಪ್ರದೇಶ ಪರಿಶೀಲನೆಗೆ ಮುಂದಾಗಿದೆ. ಈಗಾಗಲೇ ಗೋವಾದಲ್ಲಿ ಜಲಾನಯನ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿರುವ ಈ ನಿಯೋಗ ಜು.7 ರಂದು ಕಳಸಾ- ಬಂಡೂರಿ ನಾಲಾ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಲಿದೆ.
ಸದಾ ಒಂದಿಲ್ಲೊಂದು ನೆಪ ಮಾಡಿಕೊಂಡು ಮಹದಾಯಿ ಯೋಜನೆಗೆ ಅಡ್ಡಗಾಲು ಹಾಕುತ್ತ ಬಂದಿರುವ ಗೋವಾ ಸರ್ಕಾರ ಈಗ ಹತಾಶೆಯಿಂದ ಮತ್ತೊಂದು ಕುತಂತ್ರ ಮಾಡಿ, ಕೇಂದ್ರ ಪ್ರವಾಹ ಸಂಸ್ಥೆಯ ಮೇಲೆ ಒತ್ತಡ ಹೇರಿ, ಆ ತಂಡವನ್ನು ಪರೀಕ್ಷೆ ನಡೆಸಲು ಕರೆಸಿಕೊಂಡಿದೆ. ಕರ್ನಾಟಕದ ಮಹಾದಾಯಿ ಯೋಜನೆ ಪರೋಕ್ಷವಾಗಿ ತಡೆಯೊಡ್ಡಬೇಕೆನ್ನುವ ಮುಂದಾಲೋಚನೆ ಇದರಿಂದ ಹಿಂದೆ ಅಡಗಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.ಮಹದಾಯಿ ಯೋಜನೆಯಡಿ ಅರಣ್ಯ ಪ್ರದೇಶದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಕರ್ನಾಟಕ ಮಹದಾಯಿ ನೀರನ್ನು ತಿರುಗಿಸಿದರೆ ಕರ್ನಾಟಕ- ಗೋವಾ ಗಡಿಯಲ್ಲಿರುವ ದಟ್ಟಾರಣ್ಯ ಪ್ರದೇಶದಲ್ಲಿರುವ ಸಸ್ಯ ಮತ್ತು ವನ್ಯಜೀವಿಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಗೋವಾ ಸರ್ಕಾರವು ಪ್ರವಾಹ ಸಂಸ್ಥೆಗೆ ಮನವಿ ಮಾಡಿದೆ. ಆದರೆ, ಗೋವಾ ಸರ್ಕಾರದ ಈ ನಡೆ ಕರ್ನಾಟಕದ ಕನ್ನಡಪರ ಸಂಘಟನೆಗಳನ್ನು ಕೆರಳಿಸುವಂತೆ ಮಾಡಿದೆ.ಯೋಜನೆಗೆ ಅಡ್ಡಗಾಲು ಹಾಕುತ್ತಿದೆ ಗೋವಾ:ಮಹದಾಯಿ ನದಿ ನೀರು ಹಂಚಿಕೆ ಮಾಡಿ ನ್ಯಾಯಮೂರ್ತಿ ಪಂಚಾಲ ನ್ಯಾಯ ಮಂಡಳಿಯು 2018ರ ಆಗಸ್ಟ್ 14 ರಂದು ತೀರ್ಪು ನೀಡಿದೆ. ಬಳಿಕ ಸುಪ್ರೀಂ ಕೋರ್ಟ್ 2020 ಫೆಬ್ರವರಿ 20 ರಂದು ತೀರ್ಪು ನೀಡಿ ಹಂಚಿಕೆಯಾದ ನೀರನ್ನು ಬಳಸಲು ಹಸಿರು ನಿಶಾನೆ ಕೂಡ ತೋರಿಸಿದೆ. ಆದಾಗ್ಯೂ, ಗೋವಾ ಸರ್ಕಾರ ಕೇಂದ್ರದ ಮೇಲೆ ಸತತವಾಗಿ ಒತ್ತಡ ತರುವ ಮೂಲಕ ಯೋಜನೆಯ ಅನುಷ್ಠಾನಕ್ಕೆ ತಡೆಯೊಡ್ಡುತ್ತಿದೆ. ಈಗ ಕಳಸಾ- ಬಂಡೂರಿ ಪ್ರದೇಶಕ್ಕೆ ಪ್ರವಾಹ ಸಂಸ್ಥೆಯು ಭೇಟಿ ಕೊಡುವಂತೆ ಮಾಡುವಲ್ಲಿ ಗೋವಾದ ಪಾತ್ರವೇ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಹ ಅಧ್ಯಕ್ಷೆ ಪಿಎಂ.ಸ್ಕಾಟ್ ಮತ್ತು ಸದಸ್ಯರು ಮಹದಾಯಿ ಯೋಜನೆಯ ಸ್ಥಳಗಳು, ಜತೆಗೆ ಈ ನದಿ ವ್ಯಾಪ್ತಿಯ ಜಲಪಾತಗಳು, ಹಳ್ಳಗಳು, ಪರಿಸರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.ಪ್ರವಾಹ ಸಂಸ್ಥೆಯು ಮಹದಾಯಿ ಜಲಾನಯನ ಪ್ರದೇಶಗಳನ್ನು ಭೇಟಿ ಮಾಡಿ, ಪರಿಶೀಲಿಸಲಿದೆ. ಕರ್ನಾಟಕ ಸರ್ಕಾರ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸಮಿತಿಯ ಗಮನ ಸೆಳೆಯುತ್ತೇವೆ. ಈ ಭೇಟಿ ಗೋವಾಗೆ ಮಹತ್ವದ ನಿರ್ಣಯವಾಗಲಿದೆ. ನಮ್ಮ ವಾದವನ್ನು ಸಮರ್ಥವಾಗಿ ಮಂಡಿಸುತ್ತೇವೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಈಗಾಗಲೇ ಎಕ್ಸ್‌ನಲ್ಲಿ ಟ್ವಿಟ್ ಮಾಡಿದ್ದಾರೆ.ಜು.7 ರಂದು ಬೆಳಗ್ಗೆ 9.30ಕ್ಕೆ ಗೋವಾ ಗಡಿಯಲ್ಲಿರುವ ಸುರಲ ನಾಲಾ ಬಳಿ ಯಕಳಸಾ ಯೋಜನೆಯ ಉದ್ದೇಶಿತ ಸ್ಥಳಕ್ಕೆ ಹಾಗೂ ಕರ್ನಾಟಕದ ಗಡಿಯಲ್ಲಿರುವ ಕಳಸಾ ಮತ್ತು ಬಂಡೂರಿ ನಾಲಾ ಪ್ರದೇಶಗಳಿಗೆ ಪ್ರವಾಹ ಸಮಿತಿ ಭೇಟಿ ನೀಡಿ ಪರಿಶೀಲಿಸಲಿದೆ ಎಂದು ಅವರು ತಿಳಿಸಿದ್ದಾರೆ.ಗೋವಾ ಸರ್ಕಾರ ಒಂದಿಲ್ಲೊಂದು ನೆಪ ಮಾಡಿಕೊಂಡು ಮಹದಾಯಿ ನೀರಾವರಿ ಯೋಜನೆಗೆ ಅಡ್ಡಿಪಡಿಸುವ ಕುತಂತ್ರ ಮಾಡುತ್ತಲೇ ಬಂದಿದೆ. ಕರ್ನಾಟಕ ಸರ್ಕಾರ ಗೋವಾದ ಕುತಂತ್ರವನ್ನು ಎದುರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಮಾಡದೇ ಹೋದರೆ ಮಹದಾಯಿ ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕವು ಭಾರೀ ಹೊಡೆತ ಎದುರಿಸಬೇಕಾಗುತ್ತದೆ.
- ಅಶೋಕ ಚಂದರಗಿ, ಹಿರಿಯ ಕನ್ನಡ ಹೋರಾಟಗಾರ.----ಮಹದಾಯಿ ನೀರಾವರಿ ಯೋಜನೆಯ ವಿಚಾರದಲ್ಲಿ ಗೋವಾ ಸರ್ಕಾರ ಪದೇ ಪದೆ ಕರ್ನಾಟಕಕ್ಕೆ ಅಡ್ಡಿಪಡಿಸುತ್ತ ಬಂದಿದೆ. ಆದರೆ, ರಾಜ್ಯ ಸರ್ಕಾರ ಈ ವಿಚಾರರವನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯವಹಿಸಿದೆ. ಕೂಡಲೇ ರಾಜ್ಯ ಸರ್ಕಾರ ಗೋವೆಯನ್ನು ಎದುರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.
- ದೀಪಕ ಗುಡಗನಟ್ಟಿ, ಜಿಲ್ಲಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ.