ಉಪ ಚುನಾವಣೆ ಸ್ಪರ್ಧೆಗೆ ಎಚ್‌ಡಿಕೆ ಗ್ರೀನ್‌ ಸಿಗ್ನಲ್‌: ಯೋಗಿ

| Published : Jul 06 2024, 12:52 AM IST / Updated: Jul 06 2024, 11:22 AM IST

CP Yogeshwar

ಸಾರಾಂಶ

ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನನಗೆ ಸೂಚ್ಯವಾಗಿ ತಿಳಿಸಿದ್ದಾರೆ.

 ಚನ್ನಪಟ್ಟಣ :  ‘ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನನಗೆ ಸೂಚ್ಯವಾಗಿ ತಿಳಿಸಿದ್ದಾರೆ. ಆ ಕುರಿತು ಅಧಿಕೃತ ಘೋಷಣೆಯನ್ನು ನೀವೇ ಬಂದು ಮಾಡಿ ಎಂದು ಅವರನ್ನು ಕೇಳಿಕೊಂಡಿದ್ದೇನೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಘೋಷಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಉಪಚುನಾವಣೆ ಕುರಿತು ಚರ್ಚಿಸಿದ್ದೇನೆ. ನನ್ನ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನೀಡಿದ ಅವರು, ಚನ್ನಪಟ್ಟಣದಲ್ಲಿ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸುವಂತೆ ಸೂಚಿಸಿದ್ದಾರೆ. ಅಭ್ಯರ್ಥಿ ಕುರಿತು ನೀವೇ ಅಧಿಕೃತವಾಗಿ ಘೋಷಣೆ ಮಾಡಿ ಎಂದು ಅವರನ್ನು ಕೇಳಿಕೊಂಡಿದ್ದು, ಒಂದೆರಡು ದಿನಗಳಲ್ಲಿ ಅವರೇ ಈ ಕುರಿತು ಸ್ಪಷ್ಟನೆ ನೀಡಲಿದ್ದಾರೆ’ ಎಂದು ತಿಳಿಸಿದರು.

ಚುನಾವಣೆ ಕುರಿತು ನಮಗೆ ಯಾವುದೇ ಆತುರವಿಲ್ಲ. ಆದರೆ ಕಾಂಗ್ರೆಸ್‌ನವರು ಈಗಾಗಲೇ ಕ್ಷೇತ್ರದಲ್ಲಿ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಮೈತ್ರಿ ಅಭ್ಯರ್ಥಿ ಕುರಿತಂತೆ ನಮ್ಮ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿ ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಆದ್ದರಿಂದ ಮೈತ್ರಿ ಅಭ್ಯರ್ಥಿಯನ್ನು ಬೇಗ ಘೋಷಣೆ ಮಾಡಿದಲ್ಲಿ ಚುನಾವಣೆ ತಯಾರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಸೋಲನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣ ಉಪಚುನಾವಣೆ ಡಿ.ಕೆ.ಶಿವಕುಮಾರ್ ಪಾಲಿಗೆ ಪ್ರತಿಷ್ಠೆಯಾಗಿದೆ. ಇನ್ನು ಕುಮಾರಸ್ವಾಮಿ ಹಾಗೂ ನಮಗೂ ಇದು ಪ್ರತಿಷ್ಠೆಯ ಚುನಾವಣೆ. ಹಾಗಾಗಿ ಇಲ್ಲಿ ಮೈತ್ರಿ ಪಕ್ಷ ಗೆಲ್ಲಲೇ ಬೇಕಿದ್ದು, ಸವಾಲಾಗಿ ಸ್ವೀಕರಿಸಿ ಹೋರಾಟ ಮಾಡಬೇಕು ಎಂದು ತಿಳಿಸಿದರು.

ನಮ್ಮಲ್ಲಿ ಗೊಂದಲವಿಲ್ಲ:

ಎನ್‌ಡಿಎ ಅಭ್ಯರ್ಥಿ ಅಥವಾ ಬಿಜೆಪಿ, ಜೆಡಿಎಸ್ ಚಿಹ್ನೆ ಕುರಿತಂತೆ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಮೈತ್ರಿ ಅಭ್ಯರ್ಥಿಯಾಗಿ ಡಾ.ಅನಸೂಯ ಮಂಜುನಾಥ್ ಸ್ಪರ್ಧಿಸುವ ಸಾಧ್ಯತೆ ಇಲ್ಲ. ಇದು ಕೇವಲ ಮಾಧ್ಯಮ ಚರ್ಚೆಗೆ ಸೀಮಿತವಾದ ವಿಚಾರ. ಯಾರೇ ಎನ್‌ಡಿಎ ಅಭ್ಯರ್ಥಿಯಾದರೂ ನಾನು ಅವರ ಪರ ಕೆಲಸ ಮಾಡುತ್ತೇನೆ. ಕುಮಾರಸ್ವಾಮಿ ಅವರು ನಮ್ಮ ನಾಯಕರು ಅವರೇ ಈ ಸಂಬಂಧ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದರು.

ಸೋಮವಾರದಿಂದ ತಯಾರಿ:

ಕುಮಾರಸ್ವಾಮಿ ಅವರ ಸೂಚನೆ ಹಿನ್ನೆಲೆಯಲ್ಲಿ ಸೋಮವಾರದಿಂದಲೇ ನಾನು ಚುನಾವಣೆ ತಯಾರಿ ಆರಂಭಿಸಲಿದ್ದೇನೆ. ಎನ್‌ಡಿಎ ಮುಖಂಡರನ್ನು ಒಗ್ಗೂಡಿಸಿಕೊಂಡು ಚುನಾವಣೆ ಸಿದ್ಧತೆ ನಡೆಸಲಿದ್ದೇನೆ. ಪಕ್ಷ ಸಂಘಟನೆ ಕಾರ್ಯವನ್ನು ಚುರುಕುಗೊಳಿಸಲಿದ್ದೇನೆ ಎಂದು ತಿಳಿಸಿದರು.