ಸಾರಾಂಶ
ರಾಜ್ಯದಲ್ಲಿ ಸೆಪ್ಟೆಂಬರ್‌ನಲ್ಲಿ ದೊಡ್ಡ ಕ್ರಾಂತಿ ಆಗಲಿದೆ. ಸಿಎಂ ಸ್ಥಾನಪಲ್ಲಟವಾಗಲಿದೆ. ಮುಂದೆ ಯಾರು ಸಿಎಂ ಆಗುತ್ತಾರೋ ಕಾದು ನೋಡಬೇಕು
ಹುಬ್ಬಳ್ಳಿ: ಮಹದಾಯಿ, ಕಳಸಾ ಬಂಡೂರಿ ಕುರಿತಂತೆ ಗೋವಾ ಸಿಎಂ ನೀಡಿರುವ ಹೇಳಿಕೆಗೆ ಮಹತ್ವ ನೀಡಬೇಕಿಲ್ಲ. ಯಾರೋ ಒಬ್ಬರು ಹೇಳಿಕೆ ಕೊಟ್ಟ ಮಾತ್ರಕ್ಕೆ ಯೋಜನೆ ನಿಂತು ಹೋಗಲ್ಲ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂ ಕೇಂದ್ರ ಪರಿಸರ ಇಲಾಖೆಗೆ ದಾಖಲೆಗಳನ್ನು ಕೊಟ್ಟು ನಿರ್ಣಯ ನಮ್ಮ ಪರ ಬರುವಂತೆ ಮಾಡಲಿ. ರಾಜಕಾರಣ ಮಾಡುವುದನ್ನು ಬಿಟ್ಟು ದಾಖಲಾತಿ ಸಲ್ಲಿಸಲಿ. ಕಾಂಗ್ರೆಸ್‌ನವರಿಗೆ ಬದ್ಧತೆ ಇಲ್ಲ. ಈ ಸರ್ಕಾರ ಬಂದ ಮೇಲೆ ಯೋಜನೆಯ ವಿಷಯದಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದರು.ರಾಜ್ಯದಲ್ಲಿ ಸಿಎಂ ಹುದ್ದೆ ಬದಲಾವಣೆ ಕುರಿತಂತೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಸೆಪ್ಟೆಂಬರ್‌ನಲ್ಲಿ ದೊಡ್ಡ ಕ್ರಾಂತಿ ಆಗಲಿದೆ. ಸಿಎಂ ಸ್ಥಾನಪಲ್ಲಟವಾಗಲಿದೆ. ಮುಂದೆ ಯಾರು ಸಿಎಂ ಆಗುತ್ತಾರೋ ಕಾದು ನೋಡಬೇಕು ಎಂದರು.
ಧರ್ಮಸ್ಥಳದಲ್ಲಿ ಶವಗಳ ಕುರಿತಂತೆ ಎಸ್‌ಐಟಿ ತನಿಖೆ ಕುರಿತಂತೆ ಪ್ರತಿಕ್ರಿಯಿಸಿ, ಪ್ರಕರಣ ಕುರಿತಂತೆ ನಿಷ್ಪಕ್ಷಪಾತ ತನಿಖೆಯಾಗಲಿ ಎಂದರು.ಇನ್ನು ಸ್ವಾಮೀಜಿ ಅವರಿಗೆ ವಿಷಪ್ರಾಶನ ಹೇಳಿಕೆ ಕುರಿತಂತೆ ಶಾಸಕ ಕಾಶಪ್ಪನವರಗೆ ಕ್ಷಮೆ ಕೇಳಿರುವ ಕುರಿತಂತೆ ಪ್ರತಿಕ್ರಿಯಿಸಿ, ಇದು ನಮ್ಮ ಸಮಾಜದ ಮತ್ತು ಸ್ವಾಮೀಜಿಗೆ ಸಂಬಂಧಿಸಿರುವುದರಿಂದ ಈ ಕುರಿತು ಮಾಧ್ಯಮಗಳ ಮುಂದೆ ಮಾತನಾಡುವುದಿಲ್ಲ. ಯಾವುದೇ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಲ್ಲ ಎಂದರು.
ಮಹಾನಗರ ಅಭಿವೃದ್ಧಿಗೆ ಅಡ್ಡಗಾಲು ಕುರಿತಂತೆ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಆರೋಪದ ಕುರಿತಂತೆ ಪ್ರತಿಕ್ರಿಯಿಸಿ, ನಮ್ಮ ಸರ್ಕಾರದ ಅವಧಿಯಲ್ಲೇ ಟೆಂಡರ್ ಆಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಟೆಂಡರ್ ರದ್ದು ಮಾಡಿದ್ದರು. ಬಳಿಕ ಅದನ್ನು ಮರು ಟೆಂಡರ್ ಮಾಡಿಸಿ ಭೂಮಿ ಪೂಜೆ ಮಾಡಿ ಕಾಮಗಾರಿ ಆರಂಭಿಸಲಾಗಿತ್ತು. ಅದೇ ರಸ್ತೆಗೆ ಮತ್ತೆ ಮತ್ತೊಮ್ಮೆ ಅನುದಾನ ಮಂಜೂರಾಗಿದ್ದು, ಆ ಅನುದಾನದಲ್ಲಿ ಅದೇ ವಾರ್ಡಿನ ಬೇರೆಡೆ ಕಾಮಗಾರಿ ನಡೆಸಲು ಟೆಂಡರ್ ಕರೆಯಲು ಹೇಳಿದ್ದೇನೆ. ಅಭಿವೃದ್ಧಿಗೆ ಅಡ್ಡಗಾಲು ಹಾಕುವ ಯಾವುದೇ ಪ್ರಶ್ನೆಯೇ ಇಲ್ಲ ಎಂದರು.