ಸಮಾಜದ ಅಭಿವೃದ್ಧಿ ಮಠದ ಗುರಿ: ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

| Published : Feb 23 2024, 01:47 AM IST

ಸಾರಾಂಶ

ಧರ್ಮ ಕಟ್ಟಿ, ಸಮಾಜದ ಸಮೃದ್ಧಿ ಮಾಡುವುದು ಮಠದ ಗುರಿಯಾಗಿದ್ದು, ಆಧ್ಯಾತ್ಮಿಕತೆಗೆ ಹೆಚ್ಚು ಮಹತ್ವ ನೀಡುವ ಮೂಲ ಮಠದ ಪರಂಪರೆ ಮುಂದುವರಿಯಬೇಕೆಂಬುದು ಎಲ್ಲರ ಆಶಯ.

ಶಿರಸಿ:

ಧರ್ಮ ಕಟ್ಟಿ, ಸಮಾಜದ ಸಮೃದ್ಧಿ ಮಾಡುವುದು ಮಠದ ಗುರಿಯಾಗಿದ್ದು, ಆಧ್ಯಾತ್ಮಿಕತೆಗೆ ಹೆಚ್ಚು ಮಹತ್ವ ನೀಡುವ ಮೂಲ ಮಠದ ಪರಂಪರೆ ಮುಂದುವರಿಯಬೇಕೆಂಬುದು ಎಲ್ಲರ ಆಶಯ ಎಂದು ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ಅವರು ಸೋಂದಾ ಸ್ವರ್ಣವಲ್ಲೀಯ ಶ್ರೀ ಸರ್ವಜ್ಞೇಂದ್ರ ಸರಸ್ವತೀ ವೇದಿಕೆಯಲ್ಲಿ ಹಮ್ಮಿಕೊಂಡ ಶಿಷ್ಯ ಸ್ವೀಕಾರ ಮಹೋತ್ಸವದ ಧರ್ಮಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಮನೆಯಲ್ಲಿ ಪುತ್ರೋತ್ಸವದಂತೆ ಮಠದ ಶಿಷ್ಯೋತ್ಸವ. ಈ ಆನಂದಮಯ ಉತ್ಸವದಲ್ಲಿ ನಾವೆಲ್ಲರೂ ಪಾಲ್ಗೊಂಡಿದ್ದೇವೆ. ಯತಿಗಳ ಸಮ್ಮುಖದಲ್ಲಿ ಶಿಷ್ಯ ಸ್ವೀಕಾರ ಮಾಡಲಾಗಿದ್ದು, ನನ್ನ ಜೀವನದಲ್ಲಿ ಹುಟ್ಟಿದ ನಂತರ ಹಿಂದೆಂದು ಕಾಣದ ಆನಂದವಾಗಿದೆ. ಬೃಹತ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಶಿಷ್ಯರು ಆನಂದ ಬೋಧೇಂದ್ರ ಸ್ವಾಮೀಜಿಯಾಗಿದ್ದರು. ಆ ಕಾರಣಕ್ಕಾಗಿ ನೂತನ ಯತಿಗಳಿಗೆ ಆನಂದ ಬೋಧೇಂದ್ರ ಸ್ವಾಮೀಜಿ ಎಂದು ನಾಮಕರಣ ಮಾಡಿದ್ದೇವೆ. ಆಧ್ಯಾತ್ಮಿಕ ಜೀವನದ ಜತೆ ಲೌಖಿಕ ಜೀವನ ಕಲಿಸಿಕೊಡಬೇಕು. ಅನೇಕರಿಗೆ ಲೌಖಿಕತೆಯೇ ಹೆಚ್ಚು ಮುಖ್ಯವಾಗಿರುತ್ತದೆ. ಆಧಾತ್ಮಕತೆ ಪ್ರಧಾನವಾಗಿರುವ ವರ್ಗದ ಜನರು ಕಡಿಮೆ ಇರುತ್ತಾರೆ. ನಮ್ಮದು ಧರ್ಮ ಆಚರಣೆಯು ಪ್ರಧಾನವಾಗಿದ್ದು, ಮಠದ ಪರಂಪರೆ ಮುಂದುವರಿಸಿಕೊಂಡು ಧರ್ಮ ಜಾಗೃತಿ ಉಂಟು ಮಾಡಬೇಕಿದೆ ಎಂದರು.

ತತ್ವಜ್ಞಾನ ಮತ್ತು ಶಿಷ್ಯರ ಹಿತ ಬಯಸುವವನು ಗುರು. ಕೇವಲ ಶಿಷ್ಯ ತತ್ವ ಉಳಿಸಿಕೊಂಡರೆ ಪ್ರವಚನಕಾರರಾಗುತ್ತಾರೆ. ವ್ಯವಸ್ಥಿತ ಸಮ್ಮಿನವಾಗುವುದು ಸುಲಭವಲ್ಲ. ಮಠದ ಒಳಗೆ ಅನುಷ್ಠಾನ, ಜಪ-ತಪ, ಹೊರಗಡೆ ಬಂದರೆ ಸಾಮಾಜಿಕ ಕಳಕಳಿಯನ್ನು ಭಕ್ತರು ಭಯಸುತ್ತಾರೆ. ನೂತನ ಯತಿಗಳಿಗೆ ದೀರ್ಘಕಾಲ ಮಾರ್ಗದರ್ಶನ ಲಭಿಸಲಿ ಎಂದು ಬೇಗ ಶಿಷ್ಯರನ್ನು ಸ್ವೀಕರಿಸಿದ್ದೇವೆ ಎಂದರು.

ಯೋಗವಾಸಿಷ್ಠ ಪ್ರಕಾಶ ಗ್ರಂಥ ಲೋಕಾರ್ಪಣೆಗೊಳಿಸಿದ ಯಡತೊರೆ ಶ್ರೀ ಶಂಕರ ಭಾರತೀ ಸ್ವಾಮೀಜಿ, ಶಂಕರರು ಹಾಕಿಕೊಟ್ಟ ಅದ್ವೈತ ಪರಂಪರೆ ನಮ್ಮದು. ಅದ್ವೈತ ಎಂದರೆ ಆನಂದ ಅರ್ಥ. ಆನಂದವನ್ನು ಪಡೆಯುವುದು ಮನುಷ್ಯನ ಜೀವನದ ಲಕ್ಷಣ ಎಂದು ಹೇಳಿದರು.

ಹರಿಹರಪುರದ ಶಾರದಾ ಲಕ್ಷ್ಮೀನರಸಿಂಹ ಪೀಠದ ಶ್ರೀ ಸ್ವಯಂಪ್ರಕಾಶಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ಜಗತ್ತಿನಲ್ಲಿ ವ್ಯವಹಾರಿಕವಾಗಿ ನೋಡಿದರೆ ೨೦೦ ಧರ್ಮಗಳಿವೆ ಎಂದು ಹೇಳುತ್ತಾರೆ. ೨ ಸಾವಿರ ವರ್ಷಗಳ ಗುಲಾಮಿಗಿರಿಯಿಂದ ಈಗ ಕೆಲವರು ಧರ್ಮವನ್ನು ಮತ ಎಂದು, ಮತವನ್ನು ಧರ್ಮ ಎಂದು ಹೇಳುತ್ತಾರೆ. ಸನಾತನ ಹಿಂದೂ ಧರ್ಮವು ಮಾತ್ರ ಧರ್ಮವಾಗಿದ್ದು, ಮತಗಳು ಧರ್ಮವಲ್ಲ ಎಂದರು.ಅವಿಚ್ಛಿನ್ನಪರಂಪರಾ ಕೂಡ್ಲಿ ಶೃಂಗೇರಿ ಮಠದ ಶ್ರೀ ವಿದ್ಯಾವಿಶ್ವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಗುರುಗಳಿಗೆ ಅನುಷ್ಠಾನ ಅವಶ್ಯಕ. ಆಧ್ಯಾತ್ಮಿಕ ಸಾಧನೆಗೆ ಶಿಸ್ತಿನಿಂದ ಮತ್ತು ಸಾವಧಾನದಿಂದ ಇರಬೇಕು. ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಬೆಳೆದ ಯೋಗ್ಯ ವ್ಯಕ್ತಿ ಗುರುಗಳಾಗಿ ಲಭಿಸಿದ್ದಾರೆ. ಮಠವು ಸಿಮೆಂಟ್ ಮತ್ತು ಕಟ್ಟಿಗೆಯಿಂದ ಕಟ್ಟಿರುವುದಲ್ಲ. ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯ ತಪಸ್ ಶಕ್ತಿಯಿಂದ ಅಭಿವೃದ್ಧಿ ಕಂಡಿದೆ. ಶ್ರೀಗಳ ಆಶಯದಂತೆ ಮನೆ-ಮನಗಳಿಗೆ ಗೀತೆಯ ಸಂದೇಶ ಮುಟ್ಟಿದೆ. ಜೀವನ ಬಂಗಾರವಾಗಬೇಕಾದರೆ ಸ್ವರ್ಣವಲ್ಲೀ ಮಠಕ್ಕೆ ಬರಬೇಕು ಎಂದು ನುಡಿದರು.

ಹೊಳೆನರಸೀಪುರ ಅಧ್ಯಾತ್ಮ ಪ್ರಕಾಶದ ಶ್ರೀ ಪ್ರಕಾಶಾನಂದೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ವಿದೇಶಿ ಶಿಕ್ಷಣದ ಪರಿಪಾಲನೆಯಲ್ಲಿ ನಮ್ಮ ವಿದ್ಯೆ ಹಾಳು ಮಾಡಿ ಧರ್ಮವನ್ನು ಅಧರ್ಮ ಎಂದು ಹೇಳುತ್ತಿದ್ದೇವೆ. ಕೆಲ ಶಾಲೆ-ಕಾಲೇಜುಗಳಲ್ಲಿಯೂ ಇಂದಿಗೂ ಈ ಬೋಧನೆ ನಡೆಯುತ್ತಿದ್ದು, ವಿದ್ಯೆಯಲ್ಲಿ ವಿವೇಕ ಬರಬೇಕಿದೆ ಎಂದರು.ಶ್ರೀಮನ್ನೆಲೆಮಾವಿನಮಠದ ಮಾಧವಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ದಾನ ಮತ್ತು ಸಮುದ್ರ ಸ್ನಾನದಿಂದ ಮೋಕ್ಷ ಪಡೆಯಲು ಸಾಧ್ಯವಿಲ್ಲ. ಜ್ಞಾನ ಮಾರ್ಗದಿಂದ ಮಾತ್ರ ಮೋಕ್ಷ. ಗುರು-ಶಿಷ್ಯರ ಅನ್ಯೋನ್ಯತೆಯಿಂದ ಸಮಾಜವನ್ನು ಒಳ್ಳೆಯ ಮಾರ್ಗದಿಂದ ತೆಗೆದುಕೊಂಡು ಹೋಗಲು ಸಾಧ್ಯ. ಗುರುಗಳ ಜತೆ ಹೆಜ್ಜೆ ಹಾಕಬೇಕಿದೆ ಎಂದರು.

ನೂತನ ಯತಿಗಳಾಗಿ ಸನ್ಯಾಸ ದೀಕ್ಷೆ ಸ್ವೀಕರಿಸಿ, ಸ್ವರ್ಣವಲ್ಲೀಯ ಶ್ರೀಮದ್ ಶ್ರೀ ಆನಂದ ಬೋಧೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ಲೋಕಕಲ್ಯಾಣಕ್ಕಾಗಿ ಗುರುಗಳ ಮಾರ್ಗದರ್ಶನದಲ್ಲಿ ಶ್ರೀಮಠದ ಪರಂಪರೆ ಮುಂದುವರಿಸಿಕೊಂಡು ಹೋಗುತ್ತೇನೆ. ಭಕ್ತರು ಗುರುಗಳಿಂದ ಸಮಾಜಮುಖಿ ಕೆಲಸ ಮಾಡುವ ಅಭಿಲಾಷೆ ಬಯಸುತ್ತಾರೆ. ಮೊದಲ ಆಧ್ಯಾತ್ಮಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಮಠದ ಪರಂಪರೆ ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.

ಕಂಚಿ ಕಾಮಕೋಟಿಯ ಶ್ರೀ ವಿಜಯೇಂದ್ರ ಸರಸ್ವತೀ ಸ್ವಾಮೀಜಿ ಮತ್ತು ಶೃಂಗೇರಿಯ ಶ್ರೀ ವಿಧುಶೇಖರ ಸ್ವಾಮೀಜಿ ಆನ್‌ಲೈನ್ ಮೂಲಕ ಅನುಗ್ರಹ ನುಡಿಯನ್ನಾಡಿದರು. ಶ್ರೀಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ ಸ್ವಾಗತಿಸಿದರು. ಯೋಗವಾಸಿಷ್ಠಪ್ರಕಾಶ ಗ್ರಂಥವನ್ನು ಡಾ. ಮಹಾಬಲೇಶ್ವರ ಭಟ್ಟ ಪರಿಚಯಿಸಿದರು. ಡಾ. ನಾಗರಾಜ ಭಟ್ಟ ಹಾಗೂ ಪ್ರಸಾದ ಜೋಶಿ ವೇದ ಘೋಷ ಹಾಡಿದರು. ಡಾ. ಮಹಾಬಲೇಶ್ವರ ಭಟ್ಟ ಕಿರಕುಂಭತ್ತಿ ನಿರೂಪಿಸಿದರು. ಕೇಂದ್ರ ಮಾತೃಮಂಡಲದ ಮಾತೆಯರು ಪ್ರಾರ್ಥಿಸಿದರು. ಆರ್.ಎಸ್. ಹೆಗಡೆ ಭೈರುಂಬೆ ವಂದಿಸಿದರು.

ನೂತನ ಯತಿಗಳ ಪೂರ್ವಾಶ್ರಮದ ತಂದೆ-ತಾಯಿ ಮನೆಯ ಅಪರಂಜಿಯನ್ನು ನೀಡಿದ್ದಾರೆ. ಅದನ್ನು ಗಟ್ಟಿಗೊಳಿಸಿ, ಹೊಳಪು ಮಾಡುವುದು ನಮ್ಮ ಕೆಲಸ ಎಂದು ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.ಗುರುಗಳ ಆಶೀರ್ವಾದ ಪೂರ್ವಕ ಸನ್ಯಾಸ ನೀಡಿದ್ದರಿಂದ ನನ್ನ ಜನ್ಮ ಸಾರ್ಥಕವಾಗಿದೆ. ಸ್ವರ್ಣವಲ್ಲೀ ಮಠದಲ್ಲಿ ಸ್ವರ್ಣ ಪುಷ್ಪವಿದೆ. ಧರ್ಮದ ಪರಿಮಳ ಬೀರುತ್ತದೆ. ಶ್ರೀಮಠಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದರು.