ವಿದ್ಯಾರ್ಥಿಗೊಂದು ಗುರಿ, ಮಾರ್ಗದರ್ಶನಕ್ಕೆ ಗುರು ಮತ್ತು ಗುರಿಯ ಆಯ್ಕೆಗೆ ಕಾರಣಗಳು ಸ್ಪಷ್ಟವಾಗಿದ್ದರೆ ಯಶಸ್ಸು ಸುಲಭವಾಗುತ್ತದೆ
ಸಾಧನಾ-೨೦೨೫ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಭಟ್ಕಳವಿದ್ಯಾರ್ಥಿಗೊಂದು ಗುರಿ, ಮಾರ್ಗದರ್ಶನಕ್ಕೆ ಗುರು ಮತ್ತು ಗುರಿಯ ಆಯ್ಕೆಗೆ ಕಾರಣಗಳು ಸ್ಪಷ್ಟವಾಗಿದ್ದರೆ ಯಶಸ್ಸು ಸುಲಭವಾಗುತ್ತದೆ ಎಂದು ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಹಳೆಯ ವಿದ್ಯಾರ್ಥಿ ಸಿಎ ಶಿಯಾಬುದ್ದೀನ ಖಾನ್ ಹೇಳಿದರು.
ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸಾಧನಾ-೨೦೨೫ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಯಾವ ಗುರಿಯನ್ನಾದರೂ ಇಟ್ಟುಕೊಳ್ಳಬಹುದು, ಅದನ್ನು ಸಾಧಿಸುವ ಕುರಿತು ಶಿಕ್ಷಕರು ಮಾರ್ಗದರ್ಶನ ಮಾಡುತ್ತಾರೆ. ಆದರೆ, ವಿದ್ಯಾರ್ಥಿಯಾದವನಿಗೆ ತಾನು ಆಯ್ಕೆ ಮಾಡಿಕೊಂಡ ಗುರಿ ಯಾಕೆ? ಎನ್ನುವ ಸ್ಪಷ್ಟತೆ ಅವನನ್ನು ಗುರಿಯೆಡೆಗೆ ಸುಲಭವಾಗಿ ಕರೆದುಕೊಂಡು ಹೋಗುತ್ತದೆ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಟ್ಕಳ ಅರ್ಬನ್ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್ ಸುಭಾಷ ಶೆಟ್ಟಿ ಮಾತನಾಡಿ, ಸಂಸ್ಥೆ ಶೈಕ್ಷಣಿಕವಾಗಿ ಅಷ್ಟೇ ಅಲ್ಲದೇ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ವಿದ್ಯಾರ್ಥಿಗಳಿಗೆ ನೀಡುವ ಅವಕಾಶವನ್ನು ಶ್ಲಾಘಿಸಿದರು ಅತಿಥಿ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ಮಾತನಾಡಿ, ಪಿಯು ಕಾಲೇಜಿನಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ದಾಖಲಾತಿಯನ್ನು ಮನಗಂಡು ಉತ್ತಮ ಸೌಕರ್ಯವನ್ನು ಒದಗಿಸಬೇಕೆನ್ನುವ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಬಂದರ್ ರಸ್ತೆಯಲ್ಲಿ ಅತ್ಯಂತ ಸುಸಜ್ಜಿತವಾದ ಕಟ್ಟಡವನ್ನು ಪಿಯು ಕಾಲೇಜಿಗಾಗಿ ನಿರ್ಮಿಸಲಾಗುತ್ತದೆ ಎಂದು ಹೇಳಿದರು.
ಟ್ರಸ್ಟಿ ಸುಮಿತ್ರಾ ಕೌಶಿಕ ಮತ್ತು ಚೇರಮನ್ ಡಾ. ಸುರೇಶ ನಾಯಕ ಶುಭ ಹಾರೈಸಿದರು. ಮಹಾವಿದ್ಯಾಲಯದ ವಿಭಾಗವಾರು ಉತ್ತಮ ವಿದ್ಯಾರ್ಥಿಗಳಾಗಿ ಕಲಾ ವಿಭಾಗದಲ್ಲಿ ಭಾವನಾ ನಾಯ್ಕ, ವಾಣಿಜ್ಯ ಸಂಖ್ಯಾ ಶಾಸ್ತ್ರ ವಿಭಾಗದಲ್ಲಿ ಸಂಜನಾ ನಾಯ್ಕ, ವಾಣಿಜ್ಯ ಗಣಕಯಂತ್ರ ವಿಭಾಗದಲ್ಲಿ ಅನನ್ಯ ನಾಯ್ಕ, ವಿಜ್ಞಾನ ವಿಭಾಗದಲ್ಲಿ ಹರ್ಷಿತಾ ನಾಯ್ಕ ಮತ್ತು ಮಹಾವಿದ್ಯಾಲಯ ಉತ್ತಮ ವಿದ್ಯಾರ್ಥಿಯಾಗಿ ಅಂಕಿತಾ ಕಾಮತ ಆಯ್ಕೆಯಾದರು. ಕ್ರೀಡೆ ಮತ್ತು ಪಠ್ಯೇತರ ಚಡುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶೈಕ್ಷಣಿಕ ವರ್ಷದಲ್ಲಿ ಒಂದೂ ದಿನ ರಜೆ ತೆಗೆದುಕೊಳ್ಳದ ಕನ್ನಡ ಉಪನ್ಯಾಸಕ ರಾಮ ನಾಯ್ಕ ಮತ್ತು ಅರ್ಥಶಾಸ್ತ್ರ ಉಪನ್ಯಾಸಕರಾಗಿ ವಿದ್ಯಾರ್ಥಿಗಳೊಂದಿಗೆ ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ವಿಶ್ವನಾಥ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ವಿರೇಂದ್ರ ಶಾನಭಾಗ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ವಸುಧಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಚರಣ ನಾಯ್ಕ ಸ್ವಾಗತಿಸಿದರು. ಶ್ರೀಧರ ಕಾಮತ ವಂದಿಸಿದರು. ಅದಿತಿ ಶೆಟ್ಟಿ, ತನುಜಾ ಭಟ್ ಮತ್ತು ಉಪನ್ಯಾಸಕರಾದ ವಿಶ್ವನಾಥ ಆಚಾರ್ಯ, ದೀಕ್ಷಾ ಭಂಡಾರಿ, ವಿಧಿ ಶಾನಭಾಗ ಮತ್ತು ಕೃಷ್ಣಪ್ಪಾ ನಾಯ್ಕ ನಿರೂಪಿಸಿದರು.