ಮೇಕೆದಾಟು ಯೋಜನೆ ಪ್ರಕೃತಿಗೆ ವಿರುದ್ಧ: ಐಐಸ್ಸಿ ವಿಜ್ಞಾನಿ ರಾಮಚಂದ್ರರಾವ್‌ ಅಭಿಪ್ರಾಯ

| Published : Mar 24 2024, 01:33 AM IST / Updated: Mar 24 2024, 08:54 AM IST

ಸಾರಾಂಶ

ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನಗೊಂಡರೆ 100 ಟಿಎಂಸಿ ನೀರು ಇಂಗಿಸುವ 5 ಸಾವಿರ ಹೆಕ್ಟೆರ್ ಕಾಡು ನಾಶವಾಗಲಿದೆ ಎಂದು ಭಾರತೀಯ ವಿಜ್ಞಾನ ಮಂದಿರದ ಪರಿಸರ ವಿಜ್ಞಾನಿ ಡಾ। ಟಿ.ವಿ.ರಾಮಚಂದ್ರರಾವ್ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನಗೊಂಡರೆ 100 ಟಿಎಂಸಿ ನೀರು ಇಂಗಿಸುವ 5 ಸಾವಿರ ಹೆಕ್ಟೆರ್ ಕಾಡು ನಾಶವಾಗಲಿದೆ ಎಂದು ಭಾರತೀಯ ವಿಜ್ಞಾನ ಮಂದಿರದ ಪರಿಸರ ವಿಜ್ಞಾನಿ ಡಾ। ಟಿ.ವಿ.ರಾಮಚಂದ್ರರಾವ್ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ನೆಲ-ಜಲ-ಸಂರಕ್ಷಣಾ ಸಮಿತಿಯು ಗಾಂಧಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ‘ಕುಡಿಯುವ ನೀರಿನ ಸಮಸ್ಯೆ’ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಕ್ರಿಟ್ ಅಣೆಕಟ್ಟು ನಿರ್ಮಿಸಿ 60 ಟಿಎಂಸಿ ನೀರು ನಿಲ್ಲಿಸುವ ಮೇಕೆದಾಟು ಯೋಜನೆ ಜಾರಿಗೆ ತರುವುದು ಪ್ರಕೃತಿಗೆ ವಿರುದ್ಧವಾಗಿದೆ. 

ಈ ಯೋಜನೆಗೆ ಪರ್ಯಾಯವಾಗಿ ಬೆಂಗಳೂರಿನಲ್ಲಿ ಮಳೆ ನೀರಿನಿಂದ ಸಿಗುವ 15 ಟಿಎಂಸಿ ನೀರನ್ನು ಪುನರ್ ಬಳಕೆ ಮಾಡುವುದು ಉತ್ತಮ ಎಂದರು.

ಕೆಂಪೇಗೌಡರು ಬೆಂಗಳೂರು ನಗರ ನಿರ್ಮಿಸಿದಾಗ 1,562 ಕೆರೆ ಕುಂಟೆಗಳಿದ್ದವು. ಭೂ ಮಾಫಿಯಾ ಒತ್ತುವರಿಯಿಂದ 193 ಕೆರೆಗಳು ಮಾತ್ರ ಉಳಿದಿವೆ. ಆಡಳಿತ ಮಾಡುವ ಅಧಿಕಾರಸ್ಥರು ನೀರು, ಪರಿಸರದ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿಲ್ಲ. 

ಕಣ್ಣೊರೆಸುವ ಕೆಲಸ ಮಾಡುತ್ತಿದ್ದಾರೆ. ತ್ಯಾಜ್ಯ ತುಂಬಿರುವ ವರ್ತೂರು, ಬೆಳ್ಳಂದೂರು ಕೆರೆಗಳನ್ನು ನಿರ್ವಹಣೆ ಮಾಡುವ ಬದಲು ಪುನರ್ ಬಳಕೆ ಮಾಡಿದ ತ್ಯಾಜ್ಯ ನೀರನ್ನು ತುಂಬಿಸಿ ಹಾಳು ಮಾಡಲಾಗುತ್ತಿದೆ. ಜಕ್ಕೂರು ಕೆರೆ ಅಭಿವೃದ್ಧಿಪಡಿಸಿದ ಪರಿಣಾಮ ಸುತ್ತ-ಮುತ್ತಲಿನ 300 ಕೊಳವೆ ಬಾವಿಗಳಲ್ಲಿ ಈಗಲೂ ನೀರಿದೆ ಎಂದು ಹೇಳಿದರು.

ರೈತ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, ಬೆಂಗಳೂರಿನಲ್ಲಿ ಕುಡಿಯುವ ನೀರಿಗಾಗಿ ಜನ ಹಾಹಾಕಾರ ಪಡುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಮೇಕೆದಾಟು ಕುಡಿಯುವ ನೀರಿನ ಯೋಜನೆಯನ್ನು ಸ್ಥಗಿತಗೊಳಿಸುವ ಡಿಎಂಕೆ ಚುನಾವಣಾ ಪ್ರಣಾಳಿಕೆ ಏಕೆ ಬೇಕು. 

ಕುಡಿಯುವ ನೀರಿನ ವಿವಾದ ಕೆಣಕಿ ಜನರನ್ನು ರೂಚ್ಚಿಗೆಳಿಸುವ ರಾಜಕೀಯ ಪಕ್ಷದ ವಿರುದ್ಧ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಬೇಕು. 

ನೀರಿನ ಸಂಕಷ್ಟ ಕಾಲದಲ್ಲಿ ರೈತರು ಕೂಡ ಬೆಳೆ ಪದ್ಧತಿ ಬದಲಾಯಿಸಿಕೊಳ್ಳಬೇಕು. ಕಾವೇರಿ ನೀರು ತಮಿಳುನಾಡಿಗೆ ಹರಿಸದಂತೆ ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗಲಿಲ್ಲ. ರಾಜ್ಯ ಸರ್ಕಾರದ ವೈಫಲ್ಯದಿಂದ ಸಂಕಷ್ಟ ಪಡುವಂತಾಗಿದೆ ಎಂದು ಹೇಳಿದರು.

ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ.ಕೃಷ್ಣ, ಪ್ರತೀಕ್ಷ್ ಎನ್ವಿರೋ ಸೊಲ್ಯೂಷನ್ಸ್ ಮತ್ತು ಕಾಲ್‌ಸೆಂಟರ್‌ 4 ವಾಟರ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ದಾಕ್ಷಾಯಿಣಿ ಎಸ್.ದಳವಾಯಿ, ಶಿಕ್ಷಣ ತಜ್ಞ ನಿರಂಜನಾರಾಧ್ಯ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಉಪಸ್ಥಿತರಿದ್ದರು.

ಇಂದು ಅತ್ತಿಬೆಲೆ ಬಂದ್‌

ಕನ್ನಡಪ್ರಭ ವಾರ್ತೆ ಬೆಂಗಳೂರುಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಅಡ್ಡಿಪಡಿಸಬಾರದು ಎಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್‌ ಪಕ್ಷ ಸೇರಿದಂತೆ ವಿವಿಧ ಸಂಘಟನೆಗಳು ಮಾ.24ರಂದು ಅತ್ತಿಬೆಲೆ ಬಂದ್‌ಗೆ ಕರೆ ನೀಡಿದೆ.

ಕೆಆರ್‌ಎಸ್‌ ಸಂಪೂರ್ಣ ಬರಿದಾಗಿದೆ. ಬೆಂಗಳೂರಿನ ಜನರು ನೀರಿಲ್ಲದೆ ಪರದಾಡುತ್ತಿದ್ದಾರೆ. ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಹರಿಸದಿದ್ದರೆ ನಮಗೆ ಜಲಸಂಕಷ್ಟ ಉಂಟಾಗುತ್ತಿರಲಿಲ್ಲ. 

ರಾಜ್ಯದ ನೀರನ್ನು ಉಳಿಸಿಕೊಳ್ಳುವಲ್ಲಿ ಜಲಸಂಪನ್ಮೂಲ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಆರೋಪಿಸಿದ್ದಾರೆ.

ಕರ್ನಾಟಕದ ಮೇಲೆ ಒತ್ತಡ ಹೇರಿ ತಮಿಳುನಾಡಿಗೆ ನೀರು ಹರಿಸಿಕೊಳ್ಳುತ್ತಿರುವುದನ್ನು ಖಂಡಿಸಿ ಬಂದ್‌ಗೆ ಕರೆ ನೀಡಲಾಗಿದೆ. ಡಾ। ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್‌.ಕುಮಾರ್‌, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್‌ಕುಮಾರ್‌ ಶೆಟ್ಟಿ ಬಣ, ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್‌ ದೇವ್‌ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.