ದೇವರು ವರ,ಶಾಪ ಕೊಡಲ್ಲ, ಅವಕಾಶ ಕೊಡುತ್ತಾನೆ

| Published : Oct 09 2024, 01:33 AM IST

ಸಾರಾಂಶ

ಜೀವನ ಮೌಲ್ಯ ಅಂತ್ಯಗೊಂಡರೆ ಅದರೊಂದಿಗೆ ಮಾನವೀಯತೆ ಅಂತ್ಯ

ಗದಗ: ದೇವರು ವರ, ಶಾಪ ಕೊಡಲ್ಲ, ಅವಕಾಶ ಮಾತ್ರ ಕೊಡುತ್ತಾನೆ, ಅದನ್ನು ನಾವು ಸದುಪಯೋಗಪಡಿಸಿಕೊಂಡು ವೈಯಕ್ತಿಕವಾಗಿ ನಾವು ಬೆಳೆಯುವುದರೊಟ್ಟಿಗೆ ಸಮಾಜದ ಏಳ್ಗೆಗೆ ಶ್ರಮಿಸುತ್ತಿರುವ ರಂಭಾಪುರಿ ಶ್ರೀಗಳ ವಿಚಾರಧಾರೆ ಪಾಲಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು.

ಅವರು ಜಿಲ್ಲೆಯ ಅಬ್ಬಿಗೇರಿಯಲ್ಲಿ ಮಂಗಳವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 6 ನೇ ದಿನದ ಸಮಾರಂಭದಲ್ಲಿ ಕಾವ್ಯ ಕುಸುಮ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಜೀವನ ಮೌಲ್ಯ ಅಂತ್ಯಗೊಂಡರೆ ಅದರೊಂದಿಗೆ ಮಾನವೀಯತೆ ಅಂತ್ಯವಾಗುತ್ತದೆ. ನಮ್ಮ ಬದುಕು ಇನ್ನೊಬ್ಬರಿಗೆ ಮಾದರಿಯಾಗಬೇಕಲ್ಲದೇ ಮಾರಕವಾಗಬಾರದು. ಲಿಂ.ಶ್ರೀರಂಭಾಪುರಿ ವೀರಗಂಗಾಧರ ಜಗದ್ಗುರುಗಳನ್ನು ಕುರಿತು ಬರೆದ ಕಾವ್ಯ ಕುಸುಮ ಕೃತಿಯಲ್ಲಿ ಭಕ್ತ ಸಮುದಾಯದ ಶ್ರೇಯಸ್ಸಿಗೆ ಅವರು ನೀಡಿದ ಜೀವನಾದರ್ಶಗಳನ್ನು ಕಾಣಬಹುದು. ಶ್ರೀರಂಭಾಪುರಿ ಪೀಠದ ಈ ದಸರಾ ಮಹೋತ್ಸವ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಸ್ಫೂರ್ತಿ ಉಂಟು ಮಾಡುತ್ತದೆ. ಶ್ರೀ ರಂಭಾಪುರಿ ಜಗದ್ಗುರುಗಳ ವಿಚಾರಧಾರೆ ಸಕಲ ಭಕ್ತರಿಗೆ ಆಶಾಕಿರಣವಾಗಿವೆ. ಸಮಾಜವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡುವ ದಿಶೆಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಶ್ರಮಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.

ಸಾನ್ನಿಧ್ಯ ವಹಿಸಿದ್ದ ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಮಾತನಾಡಿ, ಧರ್ಮದ ಚಿಂತನ ಭಾರತೀಯರ ಬದುಕಿಗೆ ಸಜ್ಜನಿಕೆಯ ಜೀವ ತುಂಬಿವೆ. ಅಸತ್ಯದಿಂದ ಸತ್ಯದೆಡೆಗೆ ಕತ್ತಲೆಯಿಂದ ಬೆಳಕಿನೆಡೆಗೆ ಸಾವಿನಿಂದ ಸಾವಿಲ್ಲದೆಡೆಗೆ ಮುನ್ನಡೆಯುವ ಗುರಿ ನಮ್ಮದಾಗಬೇಕು. ಮನುಷ್ಯ ಸ್ವಾರ್ಥಕ್ಕಾಗಿ ಆದರ್ಶ ಮೌಲ್ಯ ಬಲಿ ಕೊಡಬಾರದು. ಸಂಸ್ಕಾರಯುಕ್ತ ಸಂಸ್ಕೃತಿಯಿಂದ ಬದುಕಿನ ಉನ್ನತಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.ಉನ್ನತ ಗುರಿ ಮತ್ತು ಧ್ಯೇಯ ವ್ಯಕ್ತಿತ್ವ ವಿಕಾಸಕ್ಕೆ ದಾರಿದೀಪ. ನದಿಯ ನೀರನ್ನು ಎಷ್ಟು ತುಂಬಿದರೂ ಹೇಗೆ ಬಲಿಯಾಗುವುದಿಲ್ಲವೋ ಹಾಗೆಯೇ ಧರ್ಮದ ಅರಿವನ್ನು ಎಷ್ಟು ಅರಿತರೂ ಅದು ಖಾಲಿಯಾಗುವುದಿಲ್ಲ. ಕೆಡಕುಗಳನ್ನು ಮೆಟ್ಟಿ ನಿಂತು ಒಳಿತಿನತ್ತ ಹೆಜ್ಜೆ ಹಾಕುವುದೇ ನಮ್ಮ ಗುರಿಯಾಗಬೇಕು. ಉದಾತ್ತ ಜೀವನ ಮೌಲ್ಯ ಸಂಪಾದಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದೇ ನಿಜವಾದ ಧರ್ಮ. ಸುಂದರ ಶುದ್ಧಗೊಳಿಸುವುದೇ ಧರ್ಮದ ಗುರಿಯಾಗಿದೆ. ವೀರಶೈವ ಧರ್ಮ ಸಂವಿಧಾನದಲ್ಲಿ ಪುರುಷರಷ್ಟೇ ಮಹಿಳೆಯರಿಗೆ ಧರ್ಮಾಚರಣೆಯ ಸಮಾನ ಹಕ್ಕನ್ನು ಬಹಳ ಪ್ರಾಚೀನ ಕಾಲದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಸ್ಪಷ್ಟವಾಗಿ ನಿರೂಪಿಸಿದ್ದಾರೆ.

ಭಾರತೀಯ ಉತ್ಕೃಷ್ಟ ಸಂಸ್ಕೃತಿಗೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ವೀರಶೈವ ಧರ್ಮ ಪೀಠಗಳು ಮಹಿಳೆಯರಿಗೆ ಹಸಿರು ಬಳೆ, ಕುಂಕುಮ, ಕರಿಮಣಿ, ಕಾಲುಂಗುರ ಮುತ್ತು ಹಾಗೂ ಕೊರಳಿನಲ್ಲಿ ಮಾಂಗಲ್ಯ ಕೊಟ್ಟು ಕರುಣಿಸಿದ್ದಾರೆ. ಸಮೃದ್ಧಿ ತ್ಯಾಗ ಔದಾರ್ಯ ಸಮಾನತೆ ಮತ್ತು ಪರಿಪಕ್ವತೆ ಉಂಟು ಮಾಡುವ ಶಕ್ತಿ ಇವುಗಳಲ್ಲಿ ಅಡಗಿದೆ ಎಂದರು.

ಧಾರ್ಮಿಕತೆಯಲ್ಲಿ ಮಹಿಳೆಯ ಪಾತ್ರ ವಿಷಯದಲ್ಲಿ ತುಮಕೂರಿನ ಡಾ. ಮೀನಾಕ್ಷಿ ಖಂಡಿಮಠ ಮಾತನಾಡಿ, ಹೆಣ್ಣು ಸಂಸಾರದ ಕಣ್ಣು. ಮಹಿಳೆಯರಲ್ಲಿ ಇರುವ ಧಾರ್ಮಿಕ ಶ್ರದ್ಧೆ ಪುರುಷರಲ್ಲಿ ಕಾಣುವುದು ಅತಿ ವಿರಳ. ಮಹಿಳೆ ತಾಯಿಯಾಗಿ, ಸಹೋದರಿಯಾಗಿ, ಹೆಂಡತಿಯಾಗಿ, ಪ್ರತಿ ಹಂತದಲ್ಲಿ ಕುಟುಂಬದ ಶ್ರೇಯಸ್ಸಿಗೆ ಶ್ರಮಿಸುತ್ತಾರೆ. ಭಾರತೀಯ ಉತ್ಕೃಷ್ಠ ಧಾರ್ಮಿಕ ಸಂಪ್ರದಾಯ ಆಚರಣೆ ಪರಿಪಾಲಿಸಿ ಇಡೀ ಕುಟುಂಬದವರಿಗೆಲ್ಲ ಸಂಸ್ಕೃತಿ ಕಲಿಸುತ್ತಾರೆ. ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಹೆಚ್ಚುತ್ತಿರುವುದು ಕಳವಳಕಾರಿಯಾದ ವಿಚಾರವಾಗಿದೆ. ಕಿರಿ ವಯಸ್ಸಿನಲ್ಲಿ ಕೊಟ್ಟ ಸಂಸ್ಕಾರಗಳು ಕೊನೆಯ ತನಕ ಕಾಪಾಡಿಕೊಂಡು ಬರುತ್ತವೆ ಎಂದರು.

ಶ್ರೀನಿವಾಸ ಸರಡಗಿ ರೇವಣಸಿದ್ಧೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಹರಪನಹಳ್ಳಿ ವರಸದ್ಯೋಜಾತ ಶಿವಾಚಾರ್ಯರು ಪ್ರಾಸ್ತಾವಿಕ ಮಾತನಾಡಿದರು. ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಇವರಿಗೆ ವೀರಶೈವ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನರೇಗಲ್ಲ ಮಲ್ಲಿಕಾರ್ಜುನ ಶಿವಾಚಾರ್ಯರು ಪ್ರಶಸ್ತಿ ವಾಚನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಜಿ.ಎಸ್. ಪಾಟೀಲ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಮಂಜುನಾಥ ಕುನ್ನೂರು, ಮಾಜಿ ವಿ.ಪ. ಸದಸ್ಯ ಮಹಾಂತೇಶ ಕವಟಗಿಮಠ, ಬಸನಗೌಡ ಪಾಟೀಲ, ಈ.ಎಸ್. ಪಾಟೀಲ, ಲಕ್ಷ್ಮೇಶ್ವರದ ಆನಂದಸ್ವಾಮಿ ಗಡ್ಡದೇವರಮಠ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಗುರುಲಿಂಗ ಶಿವಾಚಾರ್ಯರು ಗುಂಡಕನಾಳ, ಕೈಲಾಸಲಿಂಗ ಶಿವಾಚಾರ್ಯರು ಹಿರೇಮಠ ಪುರ್ತಗೇರಿ, ಅಭಿನವ ಪಂಚಾಕ್ಷರಿ ಶಿವಾಚಾರ್ಯರು ಅಡ್ನೂರು-ರಾಜೂರು, ಮರುಳಾರಾಧ್ಯ ಶಿವಾಚಾರ್ಯರು ಸಂಸ್ಥಾನ ಹಿರೇಮಠ, ಅಳವಂಡಿ, ಸಿದ್ಧಲಿಂಗ ಶಿವಾಚಾರ್ಯರು ಪಂಚಗೃಹ ಹಿರೇಮಠ ನರಗುಂದ, ಅಯ್ಯಪ್ಪಯ್ಯ ಹುಡಾ ರಾಯಚೂರು, ಎಂ.ಎ. ಹಿರೇವಡೆಯರ್, ಡಾ. ಪಾರ್ವತಿಬಾಯಿ ಚವಡಿ, ಮಲ್ಲಿಕಾರ್ಜುನ ಕುಂಬಾರ, ರವಿಕುಮಾರ ಪಟ್ಟಣಶೆಟ್ಟರ್‌, ಮಂಜುನಾಥ ಚನ್ನಪ್ಪನವರ, ಮಲ್ಲಿಕಾರ್ಜುನ ಬೆಲ್ಲದ, ನಾಗಪ್ಪ ಮಳಗಲಿ, ಡಾ.ಎಸ್.ವಿ. ವಾಲಿ, ಎ.ಎಂ. ಕೊಟ್ರೇಶ್ ಗೆ ಗುರುರಕ್ಷೆ ನೀಡಿ ಆಶೀರ್ವದಿಸಿದರು.

ಹುಬ್ಬಳ್ಳಿಯ ಮದ್ವೀರಶೈವ ಸ.ಸಂ. ಹುಬ್ಬಳ್ಳಿ ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ ಸ್ವಾಗತಿಸಿದರು. ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ವೀರೇಶ ಕಿತ್ತೂರ ಮತ್ತು ರಾಜಗುರು ಡಾ. ಗುರುಸ್ವಾಮಿ ಕಲಿಕೇರಿ ಗದಗ ಇವರಿಂದ ಸಂಗೀತ ಜರುಗಿತು.

ರೋಣ ಶಾಸಕ ಜಿ.ಎಸ್.ಪಾಟೀಲ ನನ್ನ ಅತ್ಯಂತ ಪ್ರೀತಿ ಪಾತ್ರರು, ನಿಮ್ಮೆಲ್ಲರ ಆಶೀರ್ವಾದ ಸದಾ ಹೀಗೆಯೇ ಇರಲಿ, ಅವರಿಗೆ ಒಳ್ಳೆಯ ಭವಿಷ್ಯವಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಸೇವೆ ಮಾಡುವಂತಾ ಅವಕಾಶ ಸಿಗಲಿದೆ ಎನ್ನುವ ವಿಶ್ವಾಸ ನನ್ನದಾಗಿದೆ. ಈ ಹಿಂದೆ ನಾನು ಗದಗ ಜಿಲ್ಲೆಗೆ ಭೇಟಿ ನೀಡಿದ ವೇಳೆಯಲ್ಲಿ ಅಂದಿನ ರಾಜಕೀಯ ಸ್ಥಿತ್ಯಂತರ ಕುರಿತು ಮಾತನಾಡಿ ರಂಭಾಪುರಿ ಶ್ರೀಗಳ ಕ್ಷಮಾಪಣೆ ಕೋರಿದ್ದೆ, ಇದಕ್ಕೆ ಸಾಕಷ್ಟು ಟೀಕೆ ಟಿಪ್ಪಣಿಗಳು ಬಂದಿದ್ದರೂ ನಾವು ಜಗ್ಗದೇ ನಾನು ಹೇಳಿಕೆಗೆ ಬದ್ಧನಾಗಿದ್ದೆ. ಈಗಲೂ ನಾನು ರಂಭಾಪುರಿ ಶ್ರೀಗಳು ನಡೆಸುವ ಎಲ್ಲ ಸಮಾಜಮುಖಿ, ಧರ್ಮದ ಕಾರ್ಯಗಳಲ್ಲಿ ಅವರ ಹಿಂದೆ ನಿಲ್ಲುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ.