ನಾವು ಕಣ್ಣಿನಿಂದ ದೇವರನ್ನು ನೋಡದೇ ಇದ್ದರೂ, ಕಷ್ಟಕಾಲದಲ್ಲಿ ನಮಗೆ ಸಹಾಯ ಹಸ್ತ ಚಾಚುವ ಮನುಷ್ಯರ ರೂಪದಲ್ಲಿಯೇ ದೇವರು ಬರುತ್ತಾನೆ. ಇತರರಿಗೆ ಒಳಿತನ್ನು ಬಯಸುವ ಮತ್ತು ಸಹಾಯ ಮಾಡುವ ಪ್ರತಿಯೊಬ್ಬ ವ್ಯಕ್ತಿಯಲ್ಲೂ ನಾವು ದೇವರನ್ನು ಕಾಣಬಹುದು ಎಂದು ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಹೇಳಿದರು.
ಉಡುಪಿ: ನಾವು ಕಣ್ಣಿನಿಂದ ದೇವರನ್ನು ನೋಡದೇ ಇದ್ದರೂ, ಕಷ್ಟಕಾಲದಲ್ಲಿ ನಮಗೆ ಸಹಾಯ ಹಸ್ತ ಚಾಚುವ ಮನುಷ್ಯರ ರೂಪದಲ್ಲಿಯೇ ದೇವರು ಬರುತ್ತಾನೆ. ಇತರರಿಗೆ ಒಳಿತನ್ನು ಬಯಸುವ ಮತ್ತು ಸಹಾಯ ಮಾಡುವ ಪ್ರತಿಯೊಬ್ಬ ವ್ಯಕ್ತಿಯಲ್ಲೂ ನಾವು ದೇವರನ್ನು ಕಾಣಬಹುದು ಎಂದು ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಹೇಳಿದರು.ಅವರು ಇಲ್ಲಿನ ಶೋಕಮಾತಾ ಚರ್ಚಿನ ಆವೆಮರಿಯಾ ಸಭಾಂಗಣದಲ್ಲಿ ಎಂಡಿಎಸ್ ಚಾರೀಟಿಸ್ ವತಿಯಿಂದ ಸಮುದಾಯದ ಆಸಕ್ತ, ಅಗತ್ಯವಿರುವ ಹಾಗೂ ಅರ್ಹ ಯುವಜನರು ವೃತ್ತಿಪರ ಮತ್ತು ಉನ್ನತ ಶಿಕ್ಷಣವನ್ನು ಮುಂದುವರಿಸಲು ಅವರಿಗೆ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ಆಯೋಜಿಸಿದ್ದ ಮಾರ್ಗದರ್ಶನ ಕಾರ್ಯಾಗಾರ ‘ಉಮೆದ್ - 2026’ ನ್ನು ಉದ್ಘಾಟಿಸಿ ಮಾತನಾಡಿದರು.ಪ್ರತಿಭೆ ಎನ್ನುವುದು ಕೇವಲ ಹುಟ್ಟಿನಿಂದ ಬರುವುದಷ್ಟೇ ಅಲ್ಲ, ಅದನ್ನು ನಿರಂತರ ಅಭ್ಯಾಸದಿಂದ ಮಾತ್ರ ಉತ್ತಮಗೊಳಿಸಲು ಸಾಧ್ಯ. ಅದಕ್ಕೆ ಪೋಷಕರ ತಾಳ್ಮೆ ಮತ್ತು ಬೆಂಬಲ ಅತ್ಯಗತ್ಯ. ಬಾಲ್ಯದಲ್ಲೇ ಮಕ್ಕಳ ಪ್ರತಿಭೆಯನ್ನು ಗುರುತಿಸಿ ನೀರೆರೆದು ಪೋಷಿಸಿದರೆ, ಅವರು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ದೇಶಕ್ಕೆ ಕೊಡುಗೆ ನೀಡಬಲ್ಲರು.ಮುಖ್ಯ ಅತಿಥಿಗಳಾಗಿ ಶೋಕ ಮಾತಾ ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ, ಎಂಡಿಎಸ್ ಚಾರಿಟೀಸ್‌ನ ಸಲಹೆಗಾರ ಸಿಎ ಲಯನಲ್ ಆರಾನ್ಹಾ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂದರ್ಭದಲ್ಲಿ, ಹಲವು ವಿದ್ಯಾರ್ಥಿ ಫಲಾನುಭವಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಎಂಡಿಎಸ್ ಚಾರಿಟೀಸ್ ವತಿಯಿಂದ ಒದಗಿಸಲಾದ ಮಹತ್ವದ ಆರ್ಥಿಕ ನೆರವಿಗೆ ಅವರು ಕೃತಜ್ಞತೆ ಸಲ್ಲಿಸಿದರು.ಸಭಾ ಕಾರ್ಯಕ್ರಮಕ್ಕೂ ಮುನ್ನ ಕಥೊಲಿಕ ಶಿಕ್ಷಣ ಮಂಡಳಿ ಮಂಗಳೂರು ಧರ್ಮಪ್ರಾಂತ್ಯದ ಕಾರ್ಯದರ್ಶಿ ವಂ|ಪ್ರವೀಣ್ ಲಿಯೋ ಲಸ್ರಾದೊ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಭಾಷಣ ಮಾಡಿದರು.
ಉಡುಪಿ ಚರ್ಚಿನ ಪಾಲನಾ ಪರಿಷತ್ ಉಪಾಧ್ಯಕ್ಷ ಮ್ಯಾಕ್ಷಿಮ್ ಡಿಸೋಜಾ, ಸಹಾಯಕ ಧರ್ಮಗುರು ವಂ|ಪ್ರವೀಣ್ ಲಿಯೋ ಡಿಸೋಜಾ, ಟ್ರಸ್ಟಿನ ಸದಸ್ಯರಾದ ಓಸ್ವಲ್ಡ್ ರೊಡ್ರಿಗಸ್, ಶುಭಾ ರೊಡ್ರಿಗಸ್, ಸ್ಟೀಫನ್ ಪಿಂಟೊ ಮತ್ತಿತರರು ಉಪಸ್ಥಿತರಿದ್ದರು. ಕವಿ ಹೆಚ್. ಎಮ್. ಪೆರ್ನಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರೀನಾ ಡಿಕೋಸ್ತಾ ವಂದಿಸಿದರು.