ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಯಾವುದೇ ಒಳ್ಳೆಯ ಕೆಲಸ ಆಗಬೇಕಾದರೆ ಭಗವಂತ ಯಾವ ರೂಪದಲ್ಲಿಯಾದರೂ ಬಂದು ಸಹಾಯ ಮಾಡುತ್ತಾನೋ ಯಾರಿಗೂ ತಿಳಿಯದು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.ಪಟ್ಟಣ ಪುರಸಭೆಗೆ ಸೇರಿದ ಹೊಸಹೊಳಲು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಕೋಟೆಭೈರವೇಶ್ವರ ಸ್ವಾಮಿ ದೇವಾಲಯದ ರಾಜಗೋಪುರ ಹಾಗು ಸಮುದಾಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಐತಿಹಾಸಿಕ ಇತಿಹಾಸ ಹಿನ್ನೆಲೆಯುಳ್ಳ ಸ್ಥಳ ಇಂದು ಸುಂದರ ಸ್ಥಳವಾಗಿ ನಿರ್ಮಾಣವಾಗಿದೆ. ಶ್ರೀಗಳು 2011ರಲ್ಲಿ ಕೆ.ಆರ್.ಪೇಟೆಯಲ್ಲಿ ತಹಸೀಲ್ದಾರ್ ಆಗಿದ್ದ ವೇಳೆ ಈ ದೇವಾಲಯಕ್ಕೆ ವಿಶೇಷ ಅನುದಾನ ನೀಡಿದ್ದರು. ಅಲ್ಲದೇ, ಅನೇಕರು ಸಹಾಯ ಮಾಡಿದ್ದಾರೆ. ಒಳ್ಳೆಯ ಕೆಲಸ ಆಗಬೇಕಾದರೆ ಭಗವಂತ ಯಾವ ರೂಪದಲ್ಲಿಯಾದರೂ ಬಂದು ಸಹಾಯ ಮಾಡುತ್ತಾನೆ ಎಂಬುದಕ್ಕೆ ಇದೇ ತಾಜಾ ಉದಾಹರಣೆ ಎಂದರು.ಶ್ರೀ ಕಾಲಭೈರವೇಶ್ವರಸ್ವಾಮಿ ಎಲ್ಲರಿಗೂ ಆರೋಗ್ಯ ಆಯಸ್ಸು ನೀಡಲಿ. ವಿಶೇಷವಾಗಿ ರೈತಾಪಿ ವರ್ಗಕ್ಕೆ ಕಾಲಕಾಲಕ್ಕೆ ಮಳೆ, ಬೆಳೆಯಾಗಿ ಸಮೃದ್ಧಿಯಾಗಿ ಜೀವನ ನಡೆಸುವಂತಾಗಲಿ. ನಾಡಿನ ಜನತೆ ಸುಖ ಶಾಂತಿಯಿಂದಿರಲು ಭಗವಂತ ಆಶೀರ್ವಾದ ನೀಡಲಿ. ಗ್ರಾಮಕ್ಕೆ ಬಂದು ನಿಮ್ಮೆಲ್ಲರನ್ನು ಭೇಟಿಯಾಗುವ ಸೌಭಾಗ್ಯ ಸಿಕ್ಕಿರುವುದು ನನ್ನ ಪುಣ್ಯ ಎಂದರು.
ಶಾಸಕ ಎಚ್.ಟಿ.ಮಂಜು ಮಾತನಾಡಿ, 23 ವರ್ಷದ ಹಿಂದೆ ಇಲ್ಲಿ ಚಿಕ್ಕ ಗುಡಿ ಇತ್ತು. ಮಾಜಿ ಮುಖ್ಯಮಂತ್ರಿ ಕುಮಾರಣ್ಣ, ಮಾಜಿ ಸಚಿವ ಸಾ.ರಾ.ಮಹೇಶ್ ಸೇರಿದಂತೆ ಹಲವರು ದೇಗುಲ ನಿರ್ಮಾಣ ಕಾರ್ಯಕ್ಕೆ ಒಂದೂವರೆ ಕೋಟಿ ರು. ಅಧಿಕ ಹಣಕಾಸಿನ ನೆರವು ನೀಡಿದ್ದಾರೆ ಎಂದರು.ಕೋಟೆ ಭೈರವೇಶ್ವರಸ್ವಾಮಿಯ ಒಕ್ಕಲಿನ ಗ್ರಾಮಗಳಾದ ಮಿರ್ಲೆ, ಸಾಲಿಗ್ರಾಮ ಸೇರಿದಂತೆ ಹಲವು ಗ್ರಾಮಗಳ ಭಕ್ತರ ಶ್ರಮದ ಫಲವಾಗಿ ಇಂದು ಸುಂದರ ದೇವಾಲಯ ನಿರ್ಮಾಣಗೊಂಡಿದೆ. ಐತಿಹಾಸಿಕ ಹಿನ್ನೆಲೆ ಇರುವ ಈ ಸ್ಥಳದಲ್ಲಿ ಶ್ರೀಕಾಲಭೈರವೇಶ್ವರ ನೆಲೆಯಾಗಿದೆ. ಈ ಸ್ಥಳ ಪ್ರವಾಸಿತಾಣವಾಗಿ ಮಾರ್ಪಾಡಾಗಬೇಕು ಎಂದರು.
ಧಾರ್ಮಿಕ ಕಾರ್ಯಕ್ರಮ ನಿಮಿತ್ತ ತಾಲೂಕಿಗೆ ಆಗಮಿಸಿದ ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಶಾಸಕ ಎಚ್.ಟಿ.ಮಂಜು ನೇತೃತ್ವದಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ತಾಲೂಕಿನ ಗಡಿಭಾಗ ಅಶೋಕನಗರದ ಬಳಿ ಅದ್ಧೂರಿಯಾಗಿ ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಂ, ಜಿಲ್ಲಾ ಜೆಡಿಎಸ್ ಪ್ರಧಾನ ಕಾಯದರ್ಶಿ ಬಿ.ಎಂ.ಕಿರಣ್, ಪುರಸಭಾ ಮಾಜಿ ಉಪಾದ್ಯಕ್ಷೆ ಗಾಯಿತ್ರಿ, ವಕೀಲ ರವಿಶಂಕರ್ ನಾಟನಹಳ್ಳಿ ಮಹೇಶ್, ದೇವಸ್ಥಾನ ಸಮಿತಿ ಅಧ್ಯಕ್ಷೆ ಮಂಜುಳಾ ಚನ್ನಕೇಶವ, ಎನ್.ಡಿ.ಯೋಗೇಶ್, ಐನೋರಹಳ್ಳಿ ಮಲ್ಲೇಶ್, ಐಕನಹಳ್ಳಿ ಕೃಷ್ಣೇಗೌಡ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಭಾಗವಹಿಸಿದ್ದರು.
ದೇಗುಲಗಳು, ಗುಡಿ ಗೋಪುರಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಬೇಕು: ಡಾ.ನಿಶ್ಚಲಾನಂದನಾಥಸ್ವಾಮೀಜಿಕೆ.ಆರ್.ಪೇಟೆ:
ದೇವಾಲಯಗಳು, ಅಶ್ವಥಕಟ್ಟೆ ಗುಡಿ ಗೋಪುರಗಳನ್ನು ನಿರ್ಮಿಸಿದರೆ ಸಾಲದು ಅವುಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದು ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.ಪಟ್ಟಣ ಪುರಸಭೆಗೆ ಸೇರಿದ ಹೊಸಹೊಳಲು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಕೋಟೆಭೈರವೇಶ್ವರ ಸ್ವಾಮಿ ದೇವಾಲಯದ ರಾಜಗೋಪುರ ಹಾಗೂ ಸಮುದಾಯ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಭಾರತೀಯ ಸನಾತನ ಸಂಸ್ಕೃತಿಯು ಜನರನ್ನು ಧಾರ್ಮಿಕವಾಗಿ ಒಂದುಗೂಡಿಸುತ್ತದೆ. ಇಂದಿನ ಯುವಕರಲ್ಲಿ ದೇವರ ಹಾಗೂ ಭಕ್ತಿಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ದೇವರ ಬಗ್ಗೆ ಒಲವು ಮೂಡುವಂತೆ ಮಾಡಬೇಕು ಎಂದರು.ಎಲ್ಲಿ ಗಂಗೆ ಇರುತ್ತದೆಯೋ ಅಲ್ಲಿ ನಾಗರೀಕತೆ ಬೆಳೆಯುತ್ತದೆ. ಹಾಗೆಯೇ ಈ ಗ್ರಾಮದ ಕೆರೆ ದಂಡೆಯಲ್ಲಿ ಶ್ರೀಕಾಲಭೈರವಸ್ವಾಮಿ ಅದ್ಭುತವಾಗಿ ನೆಲೆಯೂರಿದ್ದಾರೆ. ಈ ಪುಣ್ಯ ಕಾರ್ಯಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸಿದ ಎಲ್ಲರಿಗೂ ಭಗವಂತನ ಅನುಗ್ರಹವಿರಲಿ ಎಂದರು.
ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ ಮುಂತಾದವರಿಂದ ರೂಪುಗೊಂಡು ಬೆಳೆದು ಬಂದಿರುವ ನಮ್ಮ ಸನಾತನ ಸಂಸ್ಕೃತಿ ಇಡೀ ವಿಶ್ವಕ್ಕೇ ಮಾದರಿಯಾಗಿದೆ. ಅದನ್ನು ನಾವುಗಳು ನಮ್ಮ ಮುಂದಿನ ತಲೆಮಾರಿಗೂ ಉಳಿಸಿ, ಬೆಳೆಸಿಕೊಂಡು ಹೋಗುವ ಕೆಲಸ ಮಾಡಬೇಕು ಎಂದರು.