ಧರ್ಮಗಳ ಸಮಾನತೆಯ ಸಿದ್ಧಾಂತವೇ ಭಾರತದ ಏಕೈಕ ಮುಕ್ತಿ ಮಾರ್ಗ ಎಂದು ಮಣಕವಾಡ ಗ್ರಾಮದ ಅಭಿನವ ಮೃತ್ಯುಂಜಯ ಮಹಾಸ್ವಾಮೀಜಿ ನುಡಿದರು.

ನವಲಗುಂದ: ಎಲ್ಲ ಧರ್ಮಗಳ ದೇವರು ಒಬ್ಬನೇ. ಆತನನ್ನು ಖುದಾ, ಭಗವಾನ, ಗಾಡ್‌ ಎಂಬ ವಿಭಿನ್ನ ಹೆಸರುಗಳಿಂದ ಕರೆಯುತ್ತೇವೆ. ದೇವರನ್ನು ಮೆಚ್ಚಿಸಲು ಇರುವ ಧಾರ್ಮಿಕ ವಿಧಾನಗಳು ಬೇರೆಬೇರೆಯಾಗಿವೆ. ಧರ್ಮಗಳ ಸಮಾನತೆಯ ಸಿದ್ಧಾಂತವೇ ಭಾರತದ ಏಕೈಕ ಮುಕ್ತಿ ಮಾರ್ಗ ಎಂದು ಮಣಕವಾಡ ಗ್ರಾಮದ ಅಭಿನವ ಮೃತ್ಯುಂಜಯ ಮಹಾಸ್ವಾಮೀಜಿ ನುಡಿದರು.ದುಂದೂರ ಗ್ರಾಮದಲ್ಲಿ ಶುಕ್ರವಾರ ಮಸೀದಿ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸೂರ್ಯನ ಬೆಳಕಿಗೆ, ಉಸಿರಾಡುವ ಗಾಳಿಗೆ, ಪ್ರಾಣಿ ಪಕ್ಷಿಗಳಿಗಿಲ್ಲದ ಧರ್ಮ ಮನುಷ್ಯನಿಗ್ಯಾಕೆ? ಸಮಾಜದಲ್ಲಿ ಸೌಹಾರ್ದಯುತವಾಗಿ ಬಾಳುವುದೇ ಧರ್ಮ. ಹಣ್ಣು ತಿಂದು ಸಿಪ್ಪೆ ಎಸೆಯುವುದು ಧರ್ಮವಲ್ಲ, ಬದಲಾಗಿ ಎಸೆದಿರುವ ಸಿಪ್ಪೆಯನ್ನು ತೆಗೆದು ಸ್ವಚ್ಛಗಳಿಸುವುದು ಧರ್ಮ, ಇನ್ನೊಬ್ಬರ ಮನಸ್ಸಿಗೆ ನೋವು ಮಾಡಿದಿರುವುದೇ ನಿಜವಾದ ಧರ್ಮ ಎಂದು ಆಶೀರ್ವಚನ ನೀಡಿದರು.

ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಮಾತನಾಡಿ, ನವಲಗುಂದ ವಿಧಾನಸಭಾ ಕ್ಷೇತ್ರ ಸರ್ವ ಧರ್ಮದ ಶಾಂತಿಯ ತೋಟದಂತಿದ್ದು “ಪರಸ್ಪರ ಸೌಹಾರ್ದ, ಸಹಬಾಳ್ವೆ, ಸಹನೆಯಿಂದ ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಬೆಳೆಸಿಕೊಂಡರೆ ಸಮಾಜದ ಹಾಗೂ ದೇಶದ ಅಭಿವೃದ್ಧಿ ಸಾಧ್ಯ. ಹಲವಾರು ಕಡೆ ತಿಳಿವಳಿಕೆಯ ಕೊರತೆಯಿಂದ ಧರ್ಮ-ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಹಿಂದೂ ಮುಸಲ್ಮಾನರ ಸೌಹಾರ್ದತೆಗೆ ಧಕ್ಕೆ ಆಗಬಾರದು” ಎಂದರು.

ಈಶ್ವರಗೌಡ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ನಂತರ ಗ್ರಾಮದ ಶ್ರೀ ಮಾರುತೇಶ್ವರ ದೇವರಿಗೆ ಅಭಿಷೇಕ ಮತ್ತು ಎಲೆಪೂಜೆ ಕಾರ್ಯಕ್ರಮ ಜರುಗಿತು. ಫಕ್ರುಸಾಬ್ ನಾಲಬಂದ, ರೆಹಮಾನಸಾಬ ಕಳ್ಳಿಮನಿ, ಹಾಜಿ ಅಬ್ದುಲ್‌ಖಾದರ ಸಲ್ಲೂಬಾಯಿ, ರಹಮಾನಸಾಬ ಕವಳಿಕಾಯಿ, ಮೇಲಗಿರಿಗೌಡ್ರ ಪಾಟೀಲ, ಶಿವಾನಂದ ಕರಿಗಾರ, ಶ್ರೀನಿವಾಸ ಬೂದಿಹಾಳ, ಶೇಖರಯ್ಯ ಹಿರೇಮಠ, ರಾಜು ಪಾಟೀಲ, ಶಿವಯೋಗಿ ಮಂಟೂರಶೆಟ್ಟರ, ಶಿವರಾಜ ಪಾಟೀಲ ಸೇರಿದಂತೆ ಹಿಂದೂ ಮತ್ತು ಮುಸಲ್ಮಾನ ಧರ್ಮೀಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.