ಸಾರಾಂಶ
ಉಡುಪಿ: ಪ್ರಕೃತಿಯಲ್ಲಿ ಮತ್ತು ಕಲೆಗಳಲ್ಲಿ ನಮ್ಮ ಹಿರಿಯರು ಭಗವಂತನ ಅನುಸಂಧಾನ ಕಂಡುಕೊಂಡರು. ಕಳೆದ 25 ವರ್ಷಗಳಿಂದ ಈ ಪರಂಪರೆಯಲ್ಲಿ ಸರಿಗಮ ಭಾರತಿ ಸಂಸ್ಥೆ ಸಾಗಿ ಬಂದಿದೆ. ಸನಾತನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವ ಈ ಸಂಸ್ಥೆ ವಿಜಯದಶಮಿ ಉತ್ಸವ ನಡೆಸುತ್ತಿರುವುದು ಶ್ಲಾಘನೀಯ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ಪರ್ಕಳ ಸರಿಗಮ ಭಾರತಿ ಏರ್ಪಡಿಸಿದ ವಿಜಯದಶಮಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಒತ್ತಡದ ಬದುಕಿನ ಮಧ್ಯೆ ಎಲ್ಲರದ್ದು ಆನಂದದ ಹುಡುಕಾಟ. ಸಮಾಜ ಇಂದು ಕವಲು ದಾರಿಯಲ್ಲಿದೆ. ಮೊಬೈಲಿನಂತ ಕ್ಷಣಿಕ ಆಕರ್ಷಣೆ ನಮ್ಮ ಮಕ್ಕಳನ್ನು ದಿಕ್ಕು ಕೆಡಿಸುತ್ತಿವೆ. ಮಕ್ಕಳಿಗೆ ಮನೆಯಿಂದ ಬೇಕಾದ ಸಂಸ್ಕಾರ ಸಿಗುತ್ತಿಲ್ಲ. ಸರಿಗಮ ಭಾರತಿ ಈ ನಿಟ್ಟಿನಲ್ಲಿ ನಮಗೊಂದು ದೀಪ ಎಂದವರು ಹೇಳಿದರು.ಮುಖ್ಯ ಅತಿಥಿಯಾಗಿ ಉದ್ಯಮಿ ಮಂಜುನಾಥ ಉಪಾಧ್ಯಾಯ ಉಪಸ್ಥಿತರಿದ್ದರು. ಇದೇ ವೇದಿಕೆಯಲ್ಲಿ ಆಪ್ತ ಸಮಾಲೋಚಕಿ ಶಿಲ್ಪಾ ಜೋಶಿ ಮತ್ತು ಹೆಸರಾಂತ ನೃತ್ಯಗಾತಿ, ನಟಿ ಮಾನಸಿ ಸುಧೀರ್ ಅವರನ್ನು ಸಮ್ಮಾನಿಸಲಾಯಿತು. ಸರಿಗಮ ಭಾರತಿಯ ಉದಯ ಶಂಕರ್ ಸ್ವಾಗತಿಸಿದರು. ಸರಿಗಮ ಭಾರತಿಯ ಗುರು ಉಮಾಶಂಕರಿ ಧನ್ಯವಾದ ಸಲ್ಲಿಸಿದರು. ಡಾ. ರಾಘವೇಂದ್ರ ಹೊಳ್ಳ ಕಾರ್ಯಕ್ರಮ ನಿರ್ವಹಿಸಿದರು.ಬೆಳಗ್ಗೆ ಮಣಿಪಾಲದ ಪಂಡಿತ್ ರವಿಕಿರಣ್ ಅವರ ಹಿಂದುಸ್ತಾನಿ, ನಂತರ ವಿದುಷಿ ಸುರೇಖಾ ಭಟ್ ಅವರಿಂದ ಕರ್ನಾಟಕ ಸಂಗೀತ ಕಛೇರಿ, ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಪಿಳ್ಳಾರಿ ಗೀತೆಗಳ ಪ್ರಸ್ತುತಿ ನಡೆಯಿತು.
ಮಧ್ಯಾಹ್ನ ತನ್ಮಯಿ ಉಪ್ಪಂಗಳ ಅವರ ಸಂಗೀತ ಕಛೇರಿ, ವಿದ್ಯಾಲಯದ ಮಕ್ಕಳಿಂದ ಕೃತಿಗಳ ಪ್ರಸ್ತುತಿ ಹಾಗೂ ಎಲ್ಲ ಕಲಾವಿದರಿಂದ ತ್ಯಾಗರಾಜರ ಘನಪಂಚರತ್ನ ಗೋಷ್ಠಿ ಗಾಯನ ನಡೆಯಿತು. ಸಂಜೆ ಮೈಸೂರಿನ ಎ. ಚಂದನ್ ಕುಮಾರ್ ಅವರ ಕೊಳಲವಾದನ, ಮಂಗಳೂರಿನ ‘ನೃತ್ಯಾಂಗನ್’ನ ಅದಿತಿ ಲಕ್ಷ್ಮಿ ಭಟ್ ಹಾಗೂ ಪುತ್ತೂರಿನ ದೀಪಕ್ ಕುಮಾರ್ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.