ಸಮಾಜ ಸೇವೆಯಲ್ಲಿ ದೈವ ಕಾಣಬೇಕು: ಶಾಸಕ ಶ್ರೀನಿವಾಸ್‌

| Published : Feb 05 2025, 12:32 AM IST

ಸಾರಾಂಶ

ಬಡವರ ಪರ ಕೆಲಸ, ದಾನ-ಧರ್ಮದಲ್ಲಿಯೇ ದೈವ ಕಾಣುವುದು ಸೂಕ್ತವೆನಿಸಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಬಡವರ ಪರ ಕೆಲಸ, ದಾನ-ಧರ್ಮದಲ್ಲಿಯೇ ದೈವ ಕಾಣುವುದು ಸೂಕ್ತವೆನಿಸಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ಅಭಿಪ್ರಾಯಪಟ್ಟರು.ಪಟ್ಟಣದ ಸುಭಾಷ್ ನಗರ ಬಡಾವಣೆಯ ಶ್ರೀ ಕೊಲ್ಲಾಪುರದಮ್ಮ ದೇವಿ ನೂತನ ದೇವಾಲಯ ಪ್ರಾರಂಭೋತ್ಸವ, ಸಂಪ್ರೋಕ್ಷಣೆ ಮತ್ತು ಚರಮೂರ್ತಿ ಪ್ರತಿಷ್ಠಾಪನಾ, ಪುನರ್ ಪ್ರಾಣ ಪ್ರತಿಷ್ಠಾಪನೆ, ವಿಮಾನ ಗೋಪುರ ಕಳಸ ಸ್ಥಾಪನೆ ಹಾಗೂ ಮಹಾಕುಂಭಾಭಿಷೇಕ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ತಂದೆ ತಾಯಿ ಸಾಕದೆ ಬೀದಿಗೆ ಬಿಟ್ಟು ದೇವಾಲಯದಲ್ಲಿ ಪೂಜೆ ಪುನಸ್ಕಾರ ಮಾಡಿದರೆ ಏನು ಪ್ರಯೋಜನ. ಈ ಬಗ್ಗೆ ಇಂದಿನ ಮಕ್ಕಳು ಚಿಂತನೆ ಮಾಡಬೇಕು ಎಂದರು.

ರಾಜಕೀಯದಲ್ಲಿ ಗುರುತಿಸಿಕೊಂಡು ಅಧಿಕಾರಕ್ಕೆ ಬಂದ ಮೇಲೆ ದೇವಾಲಯಗಳ ಅಭಿವೃದ್ಧಿಗೆ ಅನುದಾನ ನೀಡುತ್ತಿದ್ದೇನೆ. ಜೊತೆಗೆ ಶಾಲೆಗಳನ್ನು ಅಭಿವೃದ್ಧಿ ಮಾಡಿ ಶಾಲೆಯನ್ನು ದೇವಾಲಯವಾಗಿಸುವ ಕೆಲಸ ನಿರಂತರ ಮಾಡಿದ್ದೇನೆ. ಆತ್ಮವಿಮರ್ಶೆ ಮಾಡಿಕೊಂಡು ಜನರ ಸೇವೆಯಲ್ಲಿ ದೈವ ಕಾಣುವ ಕೆಲಸ ಮಾಡಿ. ಕೃಷಿ ಆಧಾರಿತ ತಿಗಳ ಜನಾಂಗದವರು ಸಾಮಾಜಿಕವಾಗಿ ಆರ್ಥಿಕವಾಗಿ ಬೆಳೆದು ಶೈಕ್ಷಣಿಕ ಹಾಗೂ ರಾಜಕೀಯ ಶಕ್ತಿ ಪಡೆಯಬೇಕಿದೆ ಎಂದರು.ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಅಲ್ಪಸ್ವಲ್ಪ ಜಮೀನು ಮೂಲಕ ಕಷ್ಟ ಜೀವಿಗಳಾದ ತಿಗಳ ಜನಾಂಗ ಮುಖ್ಯವಾಹಿನಿಗೆ ಬರಬೇಕಿದೆ. ಶಿಕ್ಷಣ ಮೂಲಕ ಸಮಾಜವನ್ನು ಸಂಘಟಿತರಾಗಿ ಬೆಳೆಸಿ ರಾಜಕೀಯ ಶಕ್ತಿ ಪಡೆಯುವ ಕೆಲಸ ಮಾಡಿ ಎಂದು ಆಶಿಸಿದರು.ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಮಾತನಾಡಿ ರಾಜ್ಯದ 40 ವಿಧಾನಸಭಾ ಕ್ಷೇತ್ರದಲ್ಲಿ ಪ್ರಮುಖ ನಿರ್ಣಾಯಕ ಪಾತ್ರ ವಹಿಸುವ ತಿಗಳ ಜನಾಂಗದವರಿಗೆ ರಾಜಕೀಯ ಶಕ್ತಿ ಬೆಳೆದಿಲ್ಲ. ಈ ನಿಟ್ಟಿನಲ್ಲಿ ಸಂಘಟನೆ ಮೊದಲು ಬೆಳೆಸಿದರೆ ಶಕ್ತಿ ತಾನಾಗಿಯೇ ಬರುತ್ತದೆ. ಈ ಜೊತೆಗೆ ಸ್ಪರ್ಧೆ ಇಲ್ಲದ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದಿನ ಪೀಳಿಗೆ ಬೆಳೆಸಿದರೆ ಸಮಾಜ ಎಲ್ಲಾ ರಂಗದಲ್ಲೂ ಗುರುತಿಸಿಕೊಳ್ಳುತ್ತದೆ ಎಂದರು.ಶಿವಗಂಗೆ ಶ್ರೀ ಮಹಾಲಕ್ಷ್ಮಿ ಮಹಾಸಂಸ್ಥಾನ ಪೀಠಾಧ್ಯಕ್ಷ ಶ್ರೀ ಜ್ಞಾನಾನಂದ ಪುರಿ ಸ್ವಾಮೀಜಿ ಮಾತನಾಡಿ ಕೃಷಿ ಕ್ಷೇತ್ರ ನಂಬಿ ಗ್ರಾಮೀಣ ಭಾಗದಲ್ಲಿ ಬದುಕು ಕಟ್ಟಿಕೊಂಡ ನಮ್ಮ ತಿಗಳ ಸಮಾಜ ಒಗ್ಗೂಡಿ ಸಾಗುವ ಸಂಘಟನಾ ಶಕ್ತಿಯಾಗಿ ಬೆಳೆಯಬೇಕಿದೆ. ಧಾರ್ಮಿಕ ಕಾರ್ಯಕ್ರಮ ನಡೆಸಿದಾಗ ಅಲ್ಲಿನ ವಿಚಾರಧಾರೆ ಆಲಿಸಿ ಸಮಾಜ ಕಟ್ಟುವ ಕೆಲಸ ಮಾಡಬೇಕು. ಹಿಂದುಳಿದ ವರ್ಗಗಳ ಮಧ್ಯದಲ್ಲಿ ನಾವುಗಳು ಎಲ್ಲಾ ಕ್ಷೇತ್ರದಲ್ಲಿ ಬೆಳೆಯುವ ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ಮೊದಲು ನಮ್ಮ ಶಕ್ತಿ ಪ್ರದರ್ಶನ ಆಗಬೇಕು. ಧಾರ್ಮಿಕ ಕಾರ್ಯಕ್ರಮ ಮೂಲಕ ಸಂಘಟಿತರಾಗಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶ್ರೀ ಅಣಪನಹಳ್ಳಿ ಶ್ರೀ ಸೋಮೇಶ್ವರ ಸ್ವಾಮೀಜಿ, ತೊರೆಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಶಾಸಕ ಜ್ಯೋತಿಗಣೇಶ್, ತಿಗಳ ಕ್ಷತ್ರಿಯ ಮಹಾಸಭಾ ರಾಜ್ಯಾಧ್ಯಕ್ಷ ಎಚ್.ಸುಬ್ಬಣ್ಣ, ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು, ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್, ಮಾಜಿ ಜಿಪಂ ಸದಸ್ಯರಾದ ಗಾಯತ್ರಿ ನಾಗರಾಜ್, ಟಿ.ಎಚ್.ಕೃಷ್ಣಪ್ಪ, ಕೆಟಿಎಸ್ ವಿ ಸಂಘ ಉಪಾಧ್ಯಕ್ಷ ಶ್ರೀಕಾಂತ್, ಎಸ್.ಕೆ ಸಿದ್ದಯ್ಯ, ಪಪಂ ಅಧ್ಯಕ್ಷೆ ಮಂಗಳಮ್ಮ ರಾಜಣ್ಣ, ಕಳ್ಳಿಪಾಳ್ಯ ಲೋಕೇಶ್, ಜಿ.ಡಿ.ಸುರೇಶ್ ಗೌಡ, ಯಜಮಾನ್ ಸಣ್ಣಹನುಮಂತಯ್ಯ, ಭಕ್ತಕುಮಾರ, ಬಲರಾಮಯ್ಯ, ಯೋಗಾನಂದಕುಮಾರ್, ಜಿ.ಬಿ.ಮಲ್ಲಪ್ಪ, ಜಿ.ಸಿ.ಲೋಕೇಶ್ ಬಾಬು, ಜಿ.ಎಸ್.ಮಂಜುನಾಥ್, ಜಿ.ಬಿ.ನಾಗರಾಜ್, ಬಾಲಕೃಷ್ಣ ಹಾಗೂಅಕ್ಕಪಕ್ಕದ ಗ್ರಾಮಸ್ಥರು ಹಾಜರಿದ್ದರು.