ಧಾರವಾಹಿಯಲ್ಲಿ ದೈವಾರಾಧನೆ, ಕರಾವಳಿಗರ ವ್ಯಾಪಕ ಆಕ್ರೋಶ, ಪೊಲೀಸ್‌ ದೂರು

| Published : Feb 11 2024, 01:47 AM IST

ಧಾರವಾಹಿಯಲ್ಲಿ ದೈವಾರಾಧನೆ, ಕರಾವಳಿಗರ ವ್ಯಾಪಕ ಆಕ್ರೋಶ, ಪೊಲೀಸ್‌ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ದೈವಾರಾಧನೆ ಪ್ರದರ್ಶನ ಧಾರವಾಹಿಗೂ ವ್ಯಾಪಿಸಿದ್ದು ಕರಾವಳಿಯಲ್ಲಿ ದೈವಾರಾಧಕರ ಆಕ್ರೋಶ ಭುಗಿಲೆದ್ದಿದೆ. ದಿನೇ ದಿನೇ ತುಳುನಾಡು ವಿಶಿಷ್ಟ, ಧಾರ್ಮಿಕ ಆಚರಣೆಗೆ ಧಕ್ಕೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ದೈವಾರಾಧಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು ದೇಶಾದ್ಯಂತ ಅಬ್ಬರಿಸಿದ ಕಾಂತಾರ ಚಿತ್ರದ ಬಳಿಕ ಕರಾವಳಿಯ ಜನತೆ ಪೂಜಿಸುವ ದೈವಾರಾಧನೆ ಮನೋರಂಜನೆಯ ಸರಕಾದ ಆರೋಪಕ್ಕೆ ಒಳಗಾಗುತ್ತಿದೆ. ಚಲನಚಿತ್ರ ಮಾತ್ರವಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ದೈವಾರಾಧನೆಯನ್ನು ಮನೋರಂಜನೆಗಾಗಿ ಪ್ರದರ್ಶಿಸಲಾಗುತ್ತಿದೆ. ಈ ಬಗ್ಗೆ ಕರಾವಳಿಗರ ವಿರೋಧ ಇರುವಂತೆಯೇ ಇದೀಗ ಕನ್ನಡ ಖಾಸಗಿ ವಾಹಿನಿಯೊಂದರ ಧಾರವಾಹಿಯಲ್ಲಿ ದೈವಾರಾಧನೆಗೆ ಸಂಬಂಧಿಸಿದಂತೆ ದೃಶ್ಯಗಳನ್ನು ಚಿತ್ರೀಕರಿಸಿದ್ದು ಮಾತ್ರವಲ್ಲ ಕರಾವಳಿಯ ನಟರೊಬ್ಬರು ಅದರಲ್ಲಿ ನಟಿಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡದ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ ಕಾವೇರಿ ಕನ್ನಡ ಮಿಡಿಯಂ ಧಾರವಾಹಿಯ ಪ್ರೋಮೋ ಬಿಡುಗಡೆಯಾಗಿದ್ದು, ಅದರಲ್ಲಿ ದೈವಾರಾಧನೆಯ ಕುರಿತ ವಿಡಿಯೋ ಶೂಟಿಂಗ್ ಆಗಿದ್ದು, ಇದೀಗ ವೈರಲ್ ಆಗಿದೆ. ಈ ಪ್ರೋಮೋ ಕರಾವಳಿಗಳ ಸಿಟ್ಟಿಗೆ ಕಾರಣವಾಗಿದ್ದು, ಇತ್ತೀಚೆಗಷ್ಟೇ ದೈವಗಳ ಹೆಸರಲ್ಲಿ ದಂಧೆಗೆ ಇಳಿದವರ ವಿರುದ್ಧ ದೈವಾರಾಧಕರು ಕೊರಗಜ್ಜನ ಮೊರೆ ಹೋಗಿದ್ದ ಘಟನೆ ನಡೆದಿತ್ತು. ಈಗ ದೈವಾರಾಧನೆ ಪ್ರದರ್ಶನ ಧಾರವಾಹಿಗೂ ವ್ಯಾಪಿಸಿದ್ದು ಕರಾವಳಿಯಲ್ಲಿ ದೈವಾರಾಧಕರ ಆಕ್ರೋಶ ಭುಗಿಲೆದ್ದಿದೆ. ದಿನೇ ದಿನೇ ತುಳುನಾಡು ವಿಶಿಷ್ಟ, ಧಾರ್ಮಿಕ ಆಚರಣೆಗೆ ಧಕ್ಕೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ದೈವಾರಾಧಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ದೈವದ ಪಾತ್ರ ನಿರ್ವಹಿಸಿದ ಕಲಾವಿದ ಮಂಗಳೂರಿನ ಪ್ರಶಾಂತ್ ಹಾಗೂ ಧಾರವಾಹಿ ನಿರ್ದೇಶಕನ ವಿರುದ್ಧ ಪ್ರಕರಣ ದಾಖಲಿಸಲು ದೈವಾರಾಧಕರು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಧಾರವಾಹಿ ತೆರೆ ಮೇಲೆ ಬರಬಾರದು ಎಂದು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಮಂಗಳೂರಿನ ತುಳುನಾಡ ದೈವಾರಾಧನೆ ಸಂರಕ್ಷಣಾ ಯುವ ವೇದಿಕೆ ಮಂಗಳೂರು ನಗರ ಪೊಲೀಸ್ ಕಮಿಷನರ್‌ ಹಾಗೂ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದೆ.

ಚಿತ್ರೀಕರಣಕ್ಕೆ ಸುಳ್ಳು ಹೇಳಿ ಬ್ಯಾಂಡ್ ವಾದ್ಯದವರನ್ನು ಕರೆಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ದೈವಸ್ಥಾನದಲ್ಲಿ ಕೋಲ ಇದೆ ಎಂದು ಹೇಳಿ ದೈವಸ್ಥಾನದ ಬ್ಯಾಂಡ್ ವಾದ್ಯದವರನ್ನು ಕರೆಸಿದ್ದಾರೆ ಎಂದು ದೈವಾರಾಧಕರ ವೇದಿಕೆ ಧಾರವಾಹಿ ತಂಡದ ಮೇಲೆ ಆರೋಪಿಸಿದೆ.

ಧಾರವಾಹಿಯಲ್ಲಿ ದೈವದ ಪಾತ್ರ ನಿರ್ವಹಿಸಿದ ಕಲಾವಿದ ಪ್ರಶಾಂತ್ ಅವರು ಕರಾವಳಿಗರ ಕ್ಷಮೆ ಕೇಳಿದ್ದು, ಕಲಾವಿದನಾಗಿ ನಾನು ಅದರಲ್ಲಿ ನಟಿಸಿದ್ದೆ, ಇನ್ನು ಮುಂದೆ ಈ ರೀತಿಯ ಯಾವುದೇ ದೈವಾರಾಧನೆಗೆ ಸಂಬಂಧಿಸಿದ ಪಾತ್ರಗಳನ್ನು ನಾನು ಮಾಡುವುದಿಲ್ಲ ಎಂದಿದ್ದಾರೆ.