ಸಾರಾಂಶ
ಅರ್ಚಕರು ಮತ್ತು ದೇವಾಲಯದ ಸಿಬ್ಬಂದಿಯವರಿಂದ ಹಾಸನಾಂಬ ದೇವಿಯ ಒಡವೆಗಳನ್ನು ಪರಂಪರೆಯಂತೆ ಮೆರವಣಿಗೆಯ ಮೂಲಕ ದೇವಾಲಯಕ್ಕೆ ಕೊಂಡೊಯ್ಯಲಾಯಿತು. ಹಾಸನಾಂಬ ದೇವಾಲಯದ ಪ್ರಧಾನ ಅರ್ಚಕ ನಾಗರಾಜ್ ಅವರ ನೇತೃತ್ವದಲ್ಲಿ ಪೂರ್ಣ ವಿಧಿವಿಧಾನಗಳೊಂದಿಗೆ ದೇವಿಯ ಆಭರಣಗಳನ್ನು ದೇವಾಲಯಕ್ಕೆ ರವಾನೆ ಮಾಡಲಾಯಿತು. ನಗರ ಪೊಲೀಸರು ಮೆರವಣಿಗೆ ಮಾರ್ಗದಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ನೋಡಿಕೊಂಡರು.
ಕನ್ನಡಪ್ರಭ ವಾರ್ತೆ ಹಾಸನ
ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ ಈ ಬಾರಿ ಅಕ್ಟೋಬರ್ 9ರಿಂದ 23ರವರೆಗೆ ಅದ್ಧೂರಿಯಾಗಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಗಳು ಜರುಗಿವೆ. ಸೋಮವಾರ ದೇವಿಯ ಒಡವೆಗಳ ಭದ್ರತೆ ಮೂಲಕ ಮೆರವಣಿಗೆ ನೆರವೇರಿ ದೇವಾಲಯ ಸೇರಿತು.ನಗರದ ಸಾಲಗಾಮೆ ರಸ್ತೆಯ ಬಳಿ ಇರುವ ಜಿಲ್ಲಾ ಖಜಾನೆಯಿಂದ ದೇವಿಯ ಅಮೂಲ್ಯ ಆಭರಣಗಳನ್ನು ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯೊಂದಿಗೆ ದೇವಾಲಯಕ್ಕೆ ಸಾಗಿಸಲಾಯಿತು. ಕಾರ್ಯಕ್ರಮದ ಮೊದಲು ಹಾಸನ ತಹಸೀಲ್ದಾರ್ ಗೀತಾ ಅವರು ಖಜಾನೆಯಲ್ಲಿ ಸಂಗ್ರಹಿಸಲಾಗಿದ್ದ ಒಡವೆಗಳಿದ್ದ ಪೆಟ್ಟಿಗೆಗಳಿಗೆ ಪೂಜೆ ಸಲ್ಲಿಸಿದರು. ನಂತರ ಮಂಗಳವಾದ್ಯಗಳ ನಾದದ ನಡುವೆ ಪೌರಾಣಿಕ ಸಂಪ್ರದಾಯದಂತೆ ಬೆಳ್ಳಿ ರಥದಲ್ಲಿ ಮೆರವಣಿಗೆ ಪ್ರಾರಂಭವಾಯಿತು.
ಅರ್ಚಕರು ಮತ್ತು ದೇವಾಲಯದ ಸಿಬ್ಬಂದಿಯವರಿಂದ ಹಾಸನಾಂಬ ದೇವಿಯ ಒಡವೆಗಳನ್ನು ಪರಂಪರೆಯಂತೆ ಮೆರವಣಿಗೆಯ ಮೂಲಕ ದೇವಾಲಯಕ್ಕೆ ಕೊಂಡೊಯ್ಯಲಾಯಿತು. ಹಾಸನಾಂಬ ದೇವಾಲಯದ ಪ್ರಧಾನ ಅರ್ಚಕ ನಾಗರಾಜ್ ಅವರ ನೇತೃತ್ವದಲ್ಲಿ ಪೂರ್ಣ ವಿಧಿವಿಧಾನಗಳೊಂದಿಗೆ ದೇವಿಯ ಆಭರಣಗಳನ್ನು ದೇವಾಲಯಕ್ಕೆ ರವಾನೆ ಮಾಡಲಾಯಿತು. ನಗರ ಪೊಲೀಸರು ಮೆರವಣಿಗೆ ಮಾರ್ಗದಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ನೋಡಿಕೊಂಡರು.ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಗುರುವಾರ ತೆರೆದುಕೊಳ್ಳಲಿದೆ. ಪ್ರತಿ ವರ್ಷದಂತೆ ಹಾಸನಾಂಬೆ ದರ್ಶನಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಜಾತ್ರಾ ಅವಧಿಯಲ್ಲಿ ಭದ್ರತಾ ಕ್ರಮ, ಸಾರಿಗೆ ವ್ಯವಸ್ಥೆ, ಶುದ್ಧ ಕುಡಿಯುವ ನೀರು ಮತ್ತು ವೈದ್ಯಕೀಯ ಸೌಲಭ್ಯ ಸೇರಿದಂತೆ ಅನೇಕ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ.
ಹಾಸನಾಂಬೆ ಜಾತ್ರೆಯ ಆರಂಭದ ಮುನ್ನ ದೇವಿಯ ಒಡವೆಗಳ ಮೆರವಣಿಗೆ ನೆರವೇರಿದೆ. ಹಾಸನಾಂಬೆ ಬಾಗಿಲು ತೆರೆಯಲು ಇನ್ನರೆಡು ದಿನ ಇರುವಂತೆ ನಗರ ಶೃಂಗಾರಗೊಳ್ಳುತ್ತಿದೆ.