ಸಾರಾಂಶ
ಮಂಗಳೂರು ನಗರದ ನ್ಯಾಯಾಲಯದ ಆವರಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಿತು. ಮುಖ್ಯ ಅತಿಥಿಯಾಗಿ ಖ್ಯಾತ ಲೇಖಕಿ ಭುವನೇಶ್ವರಿ ಹೆಗಡೆ ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಕರಾವಳಿ ಪ್ರದೇಶದ ಮಹಿಳೆಯರ ಆತ್ಮಸ್ಥೈರ್ಯವನ್ನು ಸದಾ ಪ್ರೇರೇಪಿಸುವ ಶಕ್ತಿ, ಇಲ್ಲಿಯ ನಂಬಿಕೆಯ ದೈವವಾದ ‘ಸಿರಿ’ಯೇ ಆಗಿದ್ದಾಳೆ. ಸತ್ಯ, ಧರ್ಮ, ನ್ಯಾಯಗಳ ಪ್ರಖರ ಪ್ರತಿಪಾದಕಿಯಾಗಿ ಸ್ತ್ರೀಯರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿದ ದೇವತೆ ಸಿರಿ ಎಂದು ಖ್ಯಾತ ಲೇಖಕಿ ಭುವನೇಶ್ವರಿ ಹೆಗಡೆ ಹೇಳಿದ್ದಾರೆ.ಮಂಗಳೂರು ನಗರದ ನ್ಯಾಯಾಲಯದ ಆವರಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುಖ್ಯ ಅತಿಥಿಯಾಗಿ ಅವರು ಮಾತಾಡಿದರು.
ಮಂಗಳೂರು ಬಾರ್ ಎಸೋಸಿಯೇಷನ್ ಹಾಗೂ ನ್ಯಾಯಾಲಯದ ಉದ್ಯೋಗಿಗಳ ಸಂಘಗಳು ಜಂಟಿಯಾಗಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯನ್ನು ದ.ಕ. ಜಿಲ್ಲಾ ಮತ್ತು ಸೆಷನ್ ಹೆಚ್ಚುವರಿ ನ್ಯಾಯಾಧೀಶೆ ಪ್ರೀತಿ ಕೆ. ಪಿ. ಅವರು ಉದ್ಘಾಟಿಸಿ ಮಾತನಾಡಿದರು.ಮಹಿಳಾ ಹೋರಾಟದ ಹಿನ್ನೆಲೆಯನ್ನು ವಿವರಿಸಿ ಅದಕ್ಕಾಗಿ ಹೋರಾಡಿದ ಮಹಿಳೆಯರನ್ನು ಸ್ಮರಿಸಿದರು.ದಕ್ಷಿಣ ಕನ್ನಡ ಸಾರಿಗೆ ವಿಭಾಗದ ಎಸಿಪಿ ನಜ್ಮಾ ಫಾರೂಕಿ ಮಾತನಾಡಿ, ಇಂದಿನ ಸುಶಿಕ್ಷಿತ ಮಹಿಳೆಯರ ಎದುರು ಅನೇಕ ಸವಾಲುಗಳಿವೆ. ತಮ್ಮ ಆತ್ಮವಿಶ್ವಾಸದಿಂದ ಅವುಗಳನ್ನು ಎದುರಿಸುವ ಛಲ ಹೊಂದಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಯೋತಿ ವಹಿಸಿದ್ದರು.
ರಶ್ಮಿ ವಂದಿಸಿದರು. ಕೊನೆಯಲ್ಲಿ ಮನರಂಜನಾ ಕಾರ್ಯಕ್ರಮ ನಡೆಯಿತು.