ಸ್ವಾಮಿ ದಯಾನಂದ ಸರಸ್ವತಿಗಳು ಸ್ಥಾಪಿಸಿದ ಎಮ್ ಫಾರ್ ಸೇವಾ ಸಂಸ್ಥೆಯ ಅಮೆರಿಕ ಘಟಕ ಇತ್ತೀಚೆಗೆ ಅಮೆರಿಕದ ೧೩ ಪ್ರಮುಖ ನಗರಗಳಲ್ಲಿ ಭವ್ಯ ಸಂಗೀತ ಮಹೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಿತು.
ಮಂಗಳೂರು: ಚಿಂತಕ, ತತ್ವಜ್ಞಾನಿ, ಆಧ್ಯಾತ್ಮಿಕ ಮಾರ್ಗದರ್ಶಕ ಹಾಗೂ ವೇದಾಂತ ಪರಂಪರೆಯ ಶ್ರೇಷ್ಠ ಗುರುಗಳಲ್ಲಿ ಒಬ್ಬರಾಗಿದ್ದ ಸ್ವಾಮಿ ದಯಾನಂದ ಸರಸ್ವತಿಗಳು ಸ್ಥಾಪಿಸಿದ ಎಮ್ ಫಾರ್ ಸೇವಾ ಸಂಸ್ಥೆಯ ಅಮೆರಿಕ ಘಟಕ ಇತ್ತೀಚೆಗೆ ಅಮೆರಿಕದ ೧೩ ಪ್ರಮುಖ ನಗರಗಳಲ್ಲಿ ಭವ್ಯ ಸಂಗೀತ ಮಹೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಿತು.
ಅಮೆರಿಕದಲ್ಲಿ ೨೫ ಶಾಖೆಗಳ ಮೂಲಕ ಸೇವಾ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿರುವ ಏಮ್ ಫಾರ್ ಸೇವಾ, ೨೦೨೪ರಲ್ಲಿ ೧೨ ಮತ್ತು ೨೦೨೫ರಲ್ಲಿ ೧೩ ನಗರಗಳಲ್ಲಿ ಹೀಗೆ ಒಟ್ಟು ೨೫ ಪ್ರಮುಖ ನಗರಗಳಲ್ಲಿ ಸಂಗೀತ ಕಾರ್ಯಕ್ರಮವನ್ನು ದೇಶದ ಹೆಮ್ಮಯ ಹಿಂದೂಸ್ಥಾನಿ ಶ್ರೇಷ ಗಾಯಕ ಪಂಡಿತ್ ಜಯತೀರ್ಥ ಮೇವುಂಡಿ ಹಾಗೂ ಕೊಳಲಿನ ವಿಸ್ಮಯಕಲಾವಿದ ಪಂ. ಪ್ರವೀಣ್ ಗೋಡ್ಕಿಂಡಿ ಅವರ ಜುಗಲ್‌ಬಂದಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿತು.ತಂಡದಲ್ಲಿ ಹಾರ್ಮೊನಿಯಂನಲ್ಲಿ ಮಂಗಳೂರಿನ ಪ್ರೋ. ನರೇಂದ್ರ ಎಲ್.ನಾಯಕ್, ತಬ್ಲಾದಲ್ಲಿ ಬೆಂಗಳೂರಿನ ಪಂ.ರಾಜೇಂದ್ರ ನಾಕೋಡ್, ಪಖಾವಜ್ ಪುಣೆಯ ಸುಖದ್ ಮುಂಡೆ, ವಿಶೇಷ ರಿದಂನಲ್ಲಿ ಮುಂಬಯಿಯ ಸೂರ್ಯಕಾಂತ್ ಸುರ್ವೆ ಸಹಕರಿಸಿದ್ದರು.ಈ ವರ್ಷದ ಸಂಗೀತಯಾತ್ರೆಯನ್ನು ‘ಹೇ ಗೊವಿಂದ’ ಎಂಬ ಭಕ್ತಿ ಪರಿವಾರದ ತತ್ತ್ವದಿಂದ ಸಿಂಚಿತಗೊಳಿಸಲಾಗಿದ್ದು, ಸಂಗೀತ ಯಾತ್ರೆಯ ಜೊತೆಗೆ ‘ಓಂ ನಮೋ ನಾರಾಯಣಾಯ’ ಎಂಬ ಆಧ್ಯಾತ್ಮಿಕ ನೃತ್ಯಸಮರ್ಪಣೆಯನ್ನೂ ನೃತ್ಯ ತಂಡ ಪ್ರಸ್ತುತಪಡಿಸಿತ್ತು.ತಮಿಳುನಾಡಿನ ತಿರುವರೂರು ಜಿಲ್ಲೆಯ ಕಾವೇರಿ ನದಿಯ ಕರೆಯಲ್ಲಿ ನೆಲೆಸಿರುವ ಮಂಜಕ್ಕುಡಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಸ್ವಾಮಿ ದಯಾನಂದ ಸ್ವಾಮೀಜಿ ಅವರು, ಗ್ರಾಮೀಣ ಭಾರತದ ಮಹಿಳೆಯರ ಸಬಲೀಕರಣ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣದ ಸಂಕಲ್ಪದೊಂದಿಗೆ ಆಲ್ ಇಂಡಿಯಾ ಮೂವ್‌ಮೆಂಟ್ ಫಾರ್ ಸರ್ವಿಸ್ (ಏಮ್ ಫಾರ್ ಸೇವಾ) ಸಂಸ್ಥೆಯನ್ನು ಸ್ಥಾಪಿಸಿದ್ದರು. ಇಂದು ಈ ಸಂಸ್ಥೆಯು ದೇಶದ ೧೭ ರಾಜ್ಯಗಳಲ್ಲಿ ೧೦೪ ಛಾತ್ರಾಲಯ ಸ್ಥಾಪಿಸಿ, ೧೫,೦೦೦ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಸತಿ ಹಾಗೂ ಸಂಸ್ಕಾರಮಯ ಜೀವನವನ್ನು ಕಲಿಸುತ್ತಿದೆ.
ಚೆನ್ನೈನಲ್ಲಿ ಮುಖ್ಯ ಕಚೇರಿಯಿಂದ ನಿರ್ವಹಣೆಗೊಂಡು ದೇಶಾದ್ಯಂತ ಸೇವಾಮಿಷನ್‌ನ್ನು ವಿಸ್ತರಿಸುತ್ತಿರುವ ಈ ಸಂಸ್ಥೆ, ಬಡ ವಿದ್ಯಾರ್ಥಿಗಳ ಶಿಕ್ಷಣ, ವಸತಿ, ಆಹಾರ ಮತ್ತು ಸಂಸ್ಕಾರಾಭಿವೃದ್ಧಿಗಾಗಿ ದೇಣಿಗೆ ಸಂಗ್ರಹಿಸುವ ಉದ್ದೇಶದಿಂದ ಇಂತಹ ಸಂಗೀತ ಕಾರ್ಯಕ್ರಮಗಳನ್ನು ನಿರಂತರವಾಗಿ ದೇಶ ವಿದೇಶಗಳಲ್ಲಿ ಆಯೋಜಿಸಿಕೊಂಡು ಬರುತ್ತಿದೆ.