ಗೋಕರ್ಣದಲ್ಲಿ ಮೂಲ ಸೌಕರ್ಯಗಳಿಲ್ಲದೇ ಪ್ರವಾಸಿಗರು ಹೈರಾಣ

| Published : Sep 28 2024, 01:21 AM IST

ಗೋಕರ್ಣದಲ್ಲಿ ಮೂಲ ಸೌಕರ್ಯಗಳಿಲ್ಲದೇ ಪ್ರವಾಸಿಗರು ಹೈರಾಣ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾನ್ಯ ಪ್ರವಾಸಿಗ ಬಸ್ ನಿಲ್ದಾಣದ, ರಸ್ತೆಯ ಪಕ್ಕದ ಜಾಗದಲ್ಲಿ ರಾತ್ರಿ ಕಳೆಯಬೇಕಿದೆ. ಪ್ರಮುಖ ದೇವಾಲಯ ಮತ್ತಿತರ ಪ್ರಮುಖ ಸ್ಥಳಗಳಿಗೆ ತೆರಳಲು ಮಾರ್ಗಸೂಚಿಸುವ ಫಲಕ ಬಿದ್ದು ವರ್ಷಗಳೇ ಕಳೆದಿದೆ. ಆದರೂ ಸರಿಪಡಿಸುವ ಗೋಜಿಗೆ ಹೋಗಿಲ್ಲ.

ಗೋಕರ್ಣ: ಕಿತ್ತು ಹೋದ ರಸ್ತೆ, ಬಿದ್ದು ಹೋದ ಮಾರ್ಗಸೂಚಿ ಫಲಕ, ಕುಸಿದು ಬಿದ್ದ ಕುಡಿಯುವ ನೀರಿನ ಘಟಕ...

- ಇದು ಪ್ರವಾಸಿ ತಾಣದಲ್ಲಿ ಕಂಡುಬರುವ ಚಿತ್ರಣ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಪುಣ್ಯಕ್ಷೇತ್ರದಲ್ಲಿನ ಮೂಲ ಸೌಕರ್ಯಗಳಿಗೆ ಪ್ರವಾಸಿಗರು ಹಲವಾರು ತೊಂದರೆಗಳನ್ನು ಅನುಭವಿಸುವಂತಾಗಿದೆ.ರಾಷ್ಟ್ರೀಯ ಹೆದ್ದಾರಿಯ ಮಾದನಗೇರಿ ಕ್ರಾಸ್‌ನಿಂದ ಗೋಕರ್ಣಕ್ಕೆ ಬರುವ ರಾಜ್ಯ ಹೆದ್ದಾರಿ ಸಂಪೂರ್ಣ ಹೊಂಡಮಯವಾಗಿದೆ. ಇಲ್ಲಿನ ಹಲವು ಅವ್ಯವಸ್ಥೆಯ ಜನರನ್ನು ಸ್ವಾಗತಿಸುತ್ತಿದೆ. ಮುಖ್ಯವಾಗಿ ಸಾಮಾನ್ಯ ಯಾತ್ರಿಕನಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ ಹಾಗೂ ವಸತಿ ವ್ಯವಸ್ಥೆ ಇಲ್ಲದೆ ಪರಿತಪಿಸಬೇಕಾಗಿದೆ. ಹಣವಿದ್ದವರು ವಸತಿಗೃಹ, ಐಷಾರಾಮಿ ಹೋಟೆಲ್‌ಗಳಲ್ಲಿ ವಾಸ್ತವ್ಯ ಮಾಡುತ್ತಾರೆ.

ಆದರೆ ಸಾಮಾನ್ಯ ಪ್ರವಾಸಿಗ ಬಸ್ ನಿಲ್ದಾಣದ, ರಸ್ತೆಯ ಪಕ್ಕದ ಜಾಗದಲ್ಲಿ ರಾತ್ರಿ ಕಳೆಯಬೇಕಿದೆ. ಪ್ರಮುಖ ದೇವಾಲಯ ಮತ್ತಿತರ ಪ್ರಮುಖ ಸ್ಥಳಗಳಿಗೆ ತೆರಳಲು ಮಾರ್ಗಸೂಚಿಸುವ ಫಲಕ ಬಿದ್ದು ವರ್ಷಗಳೇ ಕಳೆದಿದೆ. ಆದರೂ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಕಡಲ ತೀರಗಳ ಕಥೆ ಅಯೋಮಯ: ಇಲ್ಲಿ ಓಂ, ಕುಡ್ಲೆ ಕಡಲ ತೀರಗಳಿಗೆ ಸಾಗುವ ಮಾರ್ಗ ಸಹ ಹೊಂಡ ಬಿದ್ದಿದೆ. ಓಂ ಕಡಲತೀರಕ್ಕೆ ತೆರಳಲು ನಿರ್ಮಿಸಿದ ಮೆಟ್ಟಿಲು ಕಿತ್ತುಬಿದ್ದಿದೆ. ಕಡಲ ತಟದಲ್ಲಿ ಕುಳಿತುಕೊಳ್ಳಲು ಬೆಂಚ್ ಮತ್ತಿತರ ಯಾವುದೇ ಅನುಕೂಲತೆಗಳಿಲ್ಲ.

ಪೇಟೆಗಳಲ್ಲಿ ಪೇಚಾಟ: ವಾರಾಂತ್ಯದ ರಜೆ, ಸರಣಿ ರಜೆಗಳು ಬಂದಾಗ ಜನಸಾಗರವೇ ಹರಿದು ಬರುತ್ತದೆ. ಆ ವೇಳೆ ಶೌಚ ಮತ್ತು ಸ್ನಾನಕ್ಕೆ ಜನರು ಪರದಾಡುವ ಸ್ಥಿತಿ ಹೇಳತೀರದಾಗಿದ್ದು, ಬೆರಳೆಣಿಕೆಯಲ್ಲಿ ಇರುವ ಸ್ನಾನ, ಶೌಚಾಲಯದ ಮುಂದೆ ಸರದಿ ಸಾಲು ನೆರೆದಿರುತ್ತದೆ. ಹಲವರು ಹೊರಗಡೆ ಮಲ, ಮೂತ್ರ ವಿಸರ್ಜನೆ ಮಾಡಿ ತೆರಳುತ್ತಿದ್ದು, ಹೊಲಸು ತುಂಬಿ ತುಳುಕುತ್ತಿದೆ. ಬಹುತೇಕ ಎಲ್ಲ ಪ್ರಮುಖ ಮಾರ್ಗಗಳಲ್ಲಿಯೂ ವಾಹನ ದಟ್ಟಣೆ ಉಂಟಾಗಿ ಸಂಚಾರಕ್ಕೆ ತೀವ್ರ ತೊಡಕಾಗುತ್ತದೆ. ಎಲ್ಲೆಂದರಲ್ಲಿ ವಾಹನ ನಿಲುಗಡೆಗೊಳಿಸುವುದು, ಏಕಮುಖ ಸಂಚಾರ ನಿಯಮ ಮುರಿದು ಸಾಗುವುದು... ಹೀಗೇ ಸಾಲು, ಸಾಲು ಆವಾಂತರಗಳೇ ನಡೆಯುತ್ತದೆ. ಸ್ವಚ್ಛತೆ ಬಹುದೂರ: ಯಾವ ದಿಕ್ಕಿನಲ್ಲಿ ನೋಡಿದರೂ ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿ, ಚರಂಡಿ ತ್ಯಾಜ್ಯ ನೀರು ಸದಾ ತುಂಬಿರುತ್ತದೆ. ಒಳಚರಂಡಿ ಮಾಡಿಕೊಡಿ ಎಂದು ಜನರು ದಶಕಗಳಿಂದ ಆಗ್ರಹಿಸುತ್ತಿದ್ದರೂ ಯಾರೂ ಗಮನಹರಿಸುತ್ತಿಲ್ಲ.

ಬೇಕಿದೆ ಸೌಲಭ್ಯ: ದಶಕಗಳ ಹಿಂದೆ ಸಾಮಾನ್ಯ ಯಾತ್ರಿಕರಿಗೆ ವಸತಿಗಾಗಿ ಯಾತ್ರಿ ನಿವಾಸ ನಿರ್ಮಿಸಲು ಅಂದಿನ ಜಿಲ್ಲಾ ಉಸ್ತುವಾರಿ ಮಂತ್ರಿ ಆರ್.ವಿ. ದೇಶಪಾಂಡೆ ಅಡಿಗಲ್ಲು ಹಾಕಿ ಚಾಲನೆ ನೀಡಿದ್ದರು. ಆದರೆ ನಂತರ ದಿನದಲ್ಲಿ ಈ ಯೋಜನೆ ಸ್ಥಗಿತಗೊಂಡಿದ್ದು, ಅಡಿಗಲ್ಲು ಆ ಜಾಗದಿಂದ ನಾಪತ್ತೆಯಾಗಿದೆ. ಪ್ರವಾಸಿಗರು ಮತ್ತು ಸ್ಥಳೀಯರಿಗೆ ಆರೋಗ್ಯದಲ್ಲಿ ಏರುಪೇರಾದರೆ ಸುಸಜ್ಜಿತ ಆಸ್ಪತ್ರೆಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಆಸ್ಪತ್ರೆ ನಿರ್ಮಾಣಕ್ಕೆ ಬೇಡಿಕೆ ಇಟ್ಟು ಹತ್ತು ವರ್ಷ ಜನರು ಹೋರಾಟ ಮಾಡಿದ ಫಲವಾಗಿ ನೂತನ ಕಟ್ಟಡ ನಿರ್ಮಾಣವಾಗುತ್ತಿದೆ. ಆದರೂ ಕೆಲಸ ಆಮೆಗತಿಯಲ್ಲಿ ಸಾಗಿದೆ. ಬಸ್ ನಿಲ್ದಾಣ ಅಭಿವೃದ್ದಿಗೊಳಿಸಿ ಇನ್ನೂ ಸಾರಿಗೆ ಸೇವೆ ದೊರೆಯದ ಹಳ್ಳಿಗಳಿಗೆ ಬಸ್ ಸಂಚಾರ ಆರಂಭಿಸಬೇಕಿದ್ದು, ಇದರಂತೆ ಹೊರ ಜಿಲ್ಲೆಯ ಪ್ರಮುಖ ಸ್ಥಳ, ಜಿಲ್ಲಾ ಕೇಂದ್ರಗಳಿಗೆ ಬಸ್ ಸಂಚಾರ ಆರಂಭಿಸಬೇಕಿದೆ.

ತಾಲೂಕು ಕೇಂದ್ರ ಬೇಡಿಕೆ ನನೆಗುದಿಗೆ

ಗೋಕರ್ಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ಜನರು ಸರ್ಕಾರಕ್ಕೆ ಮನವಿ ಮಾಡುತ್ತಾ ಬಂದಿದ್ದರು. ಆದರೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಲಾಗಿದೆ. ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೇಗೇರಿಸಿ ಪಟ್ಟಣ ಪಂಚಾಯಿತಿ ಮಾಡಿದರೆ ಹೆಚ್ಚಿನ ಅನುದಾನ ದೊರೆತು ಊರು ಅಭಿವೃದ್ಧಿಯಾಗುತ್ತದೆ ಎಂಬ ಕನಸು ಸಾರ್ವಜನಿಕರದಾಗಿದೆ.