ಗೋಕಾವಿ ಮಹಾಲಕ್ಷ್ಮೀ ದೇವಿ ಮಹಾರಥೋತ್ಸವ ಸಂಪನ್ನ

| Published : May 10 2025, 01:05 AM IST

ಸಾರಾಂಶ

ಗೋಕಾವಿ ನಾಡಿನ ಶಕ್ತಿ ದೇವತೆ ಶ್ರೀ ಮಹಾಲಕ್ಷ್ಮೀ ದೇವಿ ಮಹಾರಥೋತ್ಸವವು ಸಹಸ್ರಾರು ಭಕ್ತರ ಮಧ್ಯ ಸಂಭ್ರಮದಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಗೋಕಾಕ

ಗೋಕಾವಿ ನಾಡಿನ ಶಕ್ತಿ ದೇವತೆ ಶ್ರೀ ಮಹಾಲಕ್ಷ್ಮೀ ದೇವಿ ಮಹಾರಥೋತ್ಸವವು ಸಹಸ್ರಾರು ಭಕ್ತರ ಮಧ್ಯ ಸಂಭ್ರಮದಿಂದ ಬುಧವಾರ ರಾತ್ರಿ ನಡೆಯಿತು. ಮಹಾರಥೋತ್ಸವ ನಿಮಿತ್ತ ಜಿಲ್ಲೆಯ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು.

ಸ್ಥಳೀಯ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ರಥೋತ್ಸವಕ್ಕೆ ಚಾಲನೆ ನೀಡಿದರು. ಉಡುಪಿ ಶೈಲಿಯ ಕಲೆ, ಸಂಸ್ಕೃತಿ ಬಿಂಬಿಸುವ ರಥೋತ್ಸವವು ವಿವಿಧ ವಾದ್ಯಮೇಳ, ಕುಣಿತಗಳಿಂದ ಭಕ್ತರನ್ನು ಮಂತ್ರ ಮುಗ್ಧರನ್ನಾಗಿಸಿತು. ಮೂರು ಬಾರಿ ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕುವ ಮೂಲಕ ರಥೋತ್ಸವಕ್ಕೆ ತೆರೆ ಎಳೆಯಲಾಯಿತು.

ಉಡುಪಿ ಹೆಸರಾಂತ ಪಂಡಿತ ಉಚ್ಚಿಲ ಆಚಾರ್ಯರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದವು. ಸಕಲ ಭಕ್ತ ಸಮೂಹಕ್ಕೆ ದೇವಸ್ಥಾನದ ಮುಂಭಾಗದಲ್ಲಿ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ರಥೋತ್ಸವದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಭಕ್ತರು ಭಾಗಿಯಾಗಿ ಮಹಾಲಕ್ಷ್ಮೀ ದೇವಿ ಕೃಪೆಗೆ ಪಾತ್ರರಾದರು.

ರಥೋತ್ಸವಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಗೋಕಾವಿ ನೆಲದ ಶಕ್ತಿ ಪೀಠವಾಗಿರುವ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಮಾಡುವ ಮೂಲಕ ಸುಂದರ ಯಾತ್ರಾ ಸ್ಥಳವಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ದೇವಿ ಕೆಲಸ ಮಾಡಿದ್ದರ ಬಗ್ಗೆ ಹೆಮ್ಮೆ, ತೃಪ್ತಿ ನನಗಿದೆ. ಗೋಕಾವಿ ನಾಡಿನಲ್ಲಿ ಹುಟ್ಟಿರುವುದಕ್ಕೆ ನನಗೆ ತುಂಬಾ ಖುಷಿಯಿದೆ ಎಂದು ಸಂತಸ ಹಂಚಿಕೊಂಡ ಅವರು, ದೇವಸ್ಥಾನದ ಜೀರ್ಣೋದ್ಧಾರ ಕೆಲಸಕ್ಕೆ ತಮ್ಮೊಂದಿಗೆ ಕೈ ಜೋಡಿಸಿದ ಸಕಲ ಮಹಾಜನತೆಗೆ ಕೃತಜ್ಞತೆ ಸಲ್ಲಿಸಿದರು.

ಜೀರ್ಣೋದ್ಧಾರ ಕೆಲಸಕ್ಕೆ ಎಲ್ಲರೂ ತನು-ಮನ ಧನದಿಂದ ಸೇವೆ ಸಲ್ಲಿಸಿದ್ದಾರೆ. ಈ ಕೆಲಸ ನಾನೊಬ್ಬನೇ ಮಾಡಬಹುದಿತ್ತು. ಆದರೆ ಈ ದೇವಸ್ಥಾನದ ನಿರ್ಮಾಣದಲ್ಲಿ ಸಾರ್ವಜನಿಕ ಸಹಭಾಗಿತ್ವ ಅಗತ್ಯವಿದ್ದು, ಅದಕ್ಕಾಗಿ ಸಾರ್ವಜನಿಕರಿಂದ ವಂತಿಗೆ ಪಡೆಯಲಾಯಿತು. ಪ್ರತಿಯೊಬ್ಬರೂ ದೇಣಿಗೆ ನೀಡಿದರು. ದೇವಿಗೆ ಅರ್ಪಿಸಿದರು. ಇದರಿಂದ ನನಗೆ ತುಂಬಾ ಖುಷಿಯಾಯ್ತು. ಅಂದಾಜು ₹13 ಕೋಟಿ ವೆಚ್ಚದಲ್ಲಿ ಭವ್ಯ ದೇವಸ್ಥಾನ ನಿರ್ಮಿಸಲಾಗಿದೆ. ಗೋಕಾಕ ನಗರದ ಕೆಂಚಪ್ಪ ಮತ್ತು ವಿಠ್ಠಲ ಗೌಡರಗೆ ಇದನ್ನು ನಿರ್ಮಾಣ ಮಾಡಲು ಗುತ್ತಿಗೆ ನೀಡಲಾಯಿತು. ಇಡೀ ಗೋಕಾಕ ನಾಗರಿಕರು ಮೆಚ್ಚುವ ರೀತಿಯಲ್ಲಿ ಆಕರ್ಷಕವಾಗಿ ದೇವಸ್ಥಾನ ನಿರ್ಮಿಸಿ ಕೊಟ್ಟಿದ್ದಾರೆ. ಗೌಡರ ಕಾರ್ಯಕ್ಕೆ ಪ್ರತಿಯೊಬ್ಬರೂ ಭೇಷ್‌ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಮಹಾಲಕ್ಷ್ಮೀ ದೇವಸ್ಥಾನವನ್ನು ಐತಿಹಾಸಿಕ ದೇವಾಲಯವಾಗಿ ಮಾರ್ಪಾಡು ಮಾಡುವ ಸೂಚನೆಯನ್ನು ಶಾಸಕರು ನೀಡಿದರು.

ಮಹಾಲಕ್ಷ್ಮೀ ದೇವಸ್ಥಾನಕ್ಕೆ ಬಂದರೆ ಗಣಪತಿ, ಈಶ್ವರ, ಆಂಜನೇಯ, ನಾಗದೇವ, ನವಗ್ರಹ ದೇವರುಗಳ ದರ್ಶನ ಆಗುತ್ತದೆ. ಜೊತೆಗೆ 5 ಪೂಜ್ಯನೀಯ ಗಿಡಗಳು ನವಗ್ರಹ ಪಕ್ಕದಲ್ಲಿ ಇದ್ದು ಇದು ಕೂಡ ವಿಶೇಷವಾಗಿದೆ. ಅಶ್ವತ್ಥ್ ಮರ, ಬಿಲ್ವಪತ್ರೆ, ಬನ್ನಿ ಗಿಡ, ಹತ್ತಿ ಮರ, ಬೇವಿನ ಮರಗಳು ತಾವೇ ಎದ್ದು ನಿಂತಿವೆ. ಇಲ್ಲಿ ದರ್ಶನ ಪಡೆದರೆ ನಿಮ್ಮ ಜೀವನವು ಪಾವನವಾಗುತ್ತದೆ. ಕಷ್ಟಗಳು ದೂರವಾಗುತ್ತವೆ. ಸುಖ, ಶಾಂತಿ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.

ಕೆ.ವಿ.ರಾಘವೇಂದ್ರ ಉಪಾಧ್ಯಾಯ ಜ್ಯೋತಿಷ್ಯರ ನೇತೃತ್ವದಲ್ಲಿ ಸುಮಾರು 46 ಹೋಮ-ಹವನ, ಯಜ್ಞಯಾಗಾದಿಗಳು ನಡೆದಿವೆ. ಇಂಥ ಪೂಜೆ, ಪುನಸ್ಕಾರಗಳು ಇಲ್ಲಿಯವರೆಗೆ ಯಾರೂ ನೋಡಿಯೇ ಇಲ್ಲ. ಅಂಥ ಪೂಜೆಗಳು ನಮ್ಮಲ್ಲಿ ನಡೆದಿವೆ. ದೇವಿಯ ಆಶೀರ್ವಾದವೇ ಇದಕ್ಕೆಲ್ಲ ಕಾರಣವಾಗಿದೆ ಎಂದರು. ದೇವಸ್ಥಾನವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲಾಗುವುದು. ಇಬ್ಬರು ಬ್ರಾಹ್ಮಣ ಅರ್ಚಕರನ್ನು ನೇಮಿಸಿಕೊಂಡು ದೇವಿಯರ ಪೂಜೆ ಮಾಡುತ್ತಾರೆ. ಪೂಜೆ ಸಲುವಾಗಿ ಎದ್ದಿರುವ ವಿವಾದಗಳನ್ನು ಈಗಾಗಲೇ ಸರಿಪಡಿಸಲಾಗಿದೆ. ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೊಸ ಅರ್ಚಕನ್ನು ನಿಯೋಜಿಸಲು ಕ್ರಮ ಕೈಗೊಂಡಿರುವುದಾಗಿ ಹೇಳಿದ ಶಾಸಕರು ಅರ್ಚಕರ ವಿವಾದಕ್ಕೆ ತೆರೆ ಎಳೆದರು.

ಸುಮಾರು 50 ವರ್ಷಗಳ ಬಳಿಕ ಜೀರ್ಣೋದ್ಧಾರ ಮಾಡುವುದನ್ನು ಜಾತ್ರಾ ಕಮಿಟಿಯವರು ನಿಶ್ಚಯಿಸಿದರು. ಬರುವ ಜೂನ್ ತಿಂಗಳಲ್ಲಿ ಗ್ರಾಮ ದೇವತೆಯರ ಜಾತ್ರೆಯು ನಡೆಯುತ್ತಿರುವುದರಿಂದ ಅದಕ್ಕೂ ಮುನ್ನ ಮಹಾಲಕ್ಷ್ಮೀ ದೇವರುಗಳು ಮತ್ತು ಪರಿವಾರದ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ನಿರ್ಧರಿಸಿ ಯೋಜನೆ ಹಾಕಲಾಯಿತು.

ಸ್ಥಳೀಯ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮೀಜಿ, ರಾಚೋಟೇಶ್ವರ ಶ್ರೀ, ಬಟಕುರ್ಕಿ ಶ್ರೀ, ಕಪರಟ್ಟಿ ಬಸವರಾಜ ಹಿರೇಮಠ ಶ್ರೀ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ಅಮರನಾಥ ಜಾರಕಿಹೊಳಿ, ಸನತ್ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಅಭಿಷೇಕ ನಾಯಿಕ, ಮುಖಂಡ ಅಶೋಕ ಪೂಜಾರಿ, ಜೆ.ಎನ್.ಶೆಟ್ಟಿ, ಸೈದಪ್ಪ ಗದಾಡಿ, ವಿಕ್ರಮ ಅಂಗಡಿ, ಬಸವರಾಜ ಕಲ್ಯಾಣಶೆಟ್ಟಿ, ಜಾತ್ರಾ ಕಮಿಟಿ ಪ್ರಭಾಕರ್ ಚವ್ಹಾಣ್, ಅಡಿವೆಪ್ಪ ಕಿತ್ತೂರ, ಅಶೋಕ ಹೆಗ್ಗನ್ನವರ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಕಾರ್ಯಕ್ಕೆ ಮೆಚ್ಚುಗೆ

ಶಾಸಕ ಬಾಲಚಂದ್ರ ಜಾರಕಿಹೊಳಿ ಮುಂದಾಳತ್ವದಲ್ಲಿ ಕಳೆದ 8 ದಿನಗಳಿಂದ ಅತಿ ವಿಜೃಂಭಣೆಯಿಂದ ದೇವರುಗಳ ಮೂರ್ತಿ ಪ್ರತಿಷ್ಠಾಪನೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ಯಶಸ್ವಿಯಾದವು. ಸುಮಾರು ₹13 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಗಣಪತಿ, ಈಶ್ವರ, ಆಂಜನೇಯ, ನಾಗದೇವ, ನವಗ್ರಹ ದೇವರುಗಳ ಹೊಸ ದೇವಸ್ಥಾನಗಳು ತಲೆ ಎತ್ತಿದ್ದು, ಸಕಲ ಭಕ್ತ ಸಮೂಹಕ್ಕೆ ಶಾಸಕ ಬಾಲಚಂದ್ರರ ಸಮಾಜಮುಖಿ ಕೆಲಸ ಮೆಚ್ಚುಗೆಗೆ ಪಾತ್ರವಾಗಿದೆ.

ಬುಧವಾರ ಬೆಳಗ್ಗೆಯಿಂದ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ವಿಪ ಸದಸ್ಯ ಲಖನ್ ಜಾರಕಿಹೊಳಿ ದಂಪತಿ ಭಾಗಿಯಾಗಿ ಸೇವೆ ಸಲ್ಲಿಸಿದರು. ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮತ್ತವರ ಸಹೋದರ ತಂಡವೆಲ್ಲ ಪೂಜೆಯಲ್ಲಿ ಪಾಲ್ಗೊಂಡಿತ್ತು.

ಪ್ರತಿ ದಿನವೂ ಹೋಮ-ಹವನ, ಯಜ್ಞಗಳನ್ನು ಮಾಡುವ ವೇಳೆ ಉಡುಪಿ ರಾಘವೇಂದ್ರ ಉಪಾಧ್ಯಾಯ ಜ್ಯೋತಿಷ್ಯರು ಗೋಕಾಕ ಜಿಲ್ಲೆಯೆಂದೇ ಹೇಳುತ್ತಿದ್ದರು. ಅವರ ಬಾಯಿಂದ ನಮ್ಮ ಗೋಕಾಕ ಜಿಲ್ಲೆಯೆಂದು ಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಗೋಕಾಕ ಜಿಲ್ಲೆಯಾಗಿ ಘೋಷಣೆಯಾಗಲಿದೆ. ಜಿಲ್ಲಾ ಕೇಂದ್ರವಾದರೆ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಮೆಡಿಕಲ್ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಉನ್ನತ ದರ್ಜೆಯ ಶಿಕ್ಷಣವು ವಿದ್ಯಾರ್ಥಿಗಳಿಗೆ ಲಭಿಸಲಿದೆ. ಜ್ಯೋತಿಷ್ಯರು ನುಡಿದ ವಾಣಿಯು ಸತ್ಯವಾದರೆ ನಮ್ಮ ಗೋಕಾಕ ಜಿಲ್ಲೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಬಾಲಚಂದ್ರ ಜಾರಕಿಹೊಳಿ, ಶಾಸಕ ಅರಭಾವಿ