ರೈಲಿನಲ್ಲಿ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಸುಮಾರು ₹ 50 ಸಾವಿರ ಮೌಲ್ಯದ ಚಿನ್ನದ ಬ್ರಾಸ್ಲೆಟ್ ಅನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಸಿಬ್ಬಂದಿ ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಠೆ ಮೆರೆದಿದ್ದಾರೆ.
ಮಂಗಳೂರು: ರೈಲಿನಲ್ಲಿ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಸುಮಾರು ₹ 50 ಸಾವಿರ ಮೌಲ್ಯದ ಚಿನ್ನದ ಬ್ರಾಸ್ಲೆಟ್ ಅನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಸಿಬ್ಬಂದಿ ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಠೆ ಮೆರೆದಿದ್ದಾರೆ.
ನ. 17ರಂದು ತಿರುವನಂತಪುರಂನಿಂದ ಮಂಗಳೂರು ಸೆಂಟ್ರಲ್ಗೆ ಆಗಮಿಸಿದ 20632ನೇ ಸಂಖ್ಯೆಯ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಸಿ-15 ಬೋಗಿಯಲ್ಲಿ ಚಿನ್ನದ ಬ್ರಾಸ್ಲೆಟ್ ಪತ್ತೆಯಾಗಿತ್ತು. ವಾರಸುದಾರರು ಯಾರೂ ಹಕ್ಕು ಮಂಡಿಸದ ಹಿನ್ನೆಲೆಯಲ್ಲಿ ಆರ್ಪಿಎಫ್ ಸಿಬ್ಬಂದಿ ಅದನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು ಠಾಣೆಯಲ್ಲಿ ಇರಿಸಿದ್ದರು.ಈ ಬಗ್ಗೆ ಯಾವುದೇ ದೂರು ದಾಖಲಾಗಿದೆಯೇ ಎಂದು ಪರಿಶೀಲಿಸಿದ ಆರ್ಪಿಎಫ್ ಇನ್ಸ್ಪೆಕ್ಟರ್, ಸಂಬಂಧಪಟ್ಟ ರೈಲ್ವೆ ವಿಭಾಗಗಳು ಹಾಗೂ ಸರ್ಕಾರಿ ರೈಲ್ವೆ ಪೊಲೀಸರನ್ನು ಸಂಪರ್ಕಿಸಿದ್ದರು. ಬಳಿಕ ರೈಲಿನ ಕಾಯ್ದಿರಿಸುವಿಕೆ ಪಟ್ಟಿಯನ್ನು ಪರಿಶೀಲಿಸಿ, ಐಆರ್ಸಿಟಿಸಿ ಮೂಲಕ ಪ್ರಯಾಣಿಕರ ಸಂಪರ್ಕ ವಿವರಗಳನ್ನು ಪಡೆದು ತನಿಖೆ ನಡೆಸಿದರು.
ಈ ವೇಳೆ ಎರ್ನಾಕುಲಂನಿಂದ ಮಂಗಳೂರು ಸೆಂಟ್ರಲ್ವರೆಗೆ ಪ್ರಯಾಣಿಸಿದ್ದ ರಜನಿ ಮನೋಹರ್ ನಾಯ್ಕ ಅವರನ್ನು ಸಂಪರ್ಕಿಸಿದಾಗ, ಪ್ರಯಾಣದ ವೇಳೆ ತಮ್ಮ ಚಿನ್ನದ ಬಳೆ ಕಳೆದುಕೊಂಡಿರುವುದನ್ನು ಅವರು ದೃಢಪಡಿಸಿದರು. ಆದರೆ, ಎಲ್ಲಿ ಕಳೆದುಕೊಂಡಿದ್ದರು ಎಂಬುದು ತಿಳಿಯದ ಕಾರಣ ದೂರು ದಾಖಲಿಸಿರಲಿಲ್ಲ.ಮಂಗಳವಾರ ಮಂಗಳೂರು ಸೆಂಟ್ರಲ್ ಆರ್ಪಿಎಫ್ ಠಾಣೆಗೆ ಆಗಮಿಸಿದ ರಜನಿ ಅವರಿಗೆ ಸೂಕ್ತ ಪರಿಶೀಲನೆ ನಡೆಸಿದ ಬಳಿಕ ಪತ್ತೆಯಾದ ಚಿನ್ನದ ಬ್ರಾಸ್ಲೆಟ್ ಅನ್ನು ಅಗತ್ಯ ಸ್ವೀಕೃತಿ ದಾಖಲೆಯೊಂದಿಗೆ ಹಸ್ತಾಂತರಿಸಲಾಯಿತು.
ಕಳೆದುಹೋದ ಚಿನ್ನದ ಬ್ರಾಸ್ಲೆಟ್ ಪತ್ತೆಹಚ್ಚಿ ಸುರಕ್ಷಿತವಾಗಿ ಹಿಂದಿರುಗಿಸಿದ ಆರ್ಪಿಎಫ್ ಸಿಬ್ಬಂದಿಯ ಕಾರ್ಯನಿಷ್ಠೆ ಹಾಗೂ ಸಹಕಾರಕ್ಕೆ ಪ್ರಯಾಣಿಕರು ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.