ಉತ್ಸವದ ವೇಳೆ ಕಳ್ಳರ ಗುಂಪಿನಿಂದ ಚಿನ್ನಾಭರಣ ಅಪಹರಣ..!

| Published : May 11 2025, 01:19 AM IST

ಸಾರಾಂಶ

ಉತ್ಸವ ನಡೆಯುತ್ತಿದ್ದ ವೇಳೆ ದಿಢೀರನೇ ಆಗಮಿಸಿದ ಕಳ್ಳರ ತಂಡವೊಂದು ದೇವರ ಚಿನ್ನಾಭರಣಗಳನ್ನು ಕದ್ದು ಪರಾರಿಯಾದ ಪ್ರಸಂಗ ನಗರದ ಶ್ರೀಲಕ್ಷ್ಮಿಜನಾರ್ದನಸ್ವಾಮಿ ದೇವಾಲಯದ ಬಳಿ ನಿನ್ನೆ ಮಧ್ಯರಾತ್ರಿ ನಡೆದಿದೆ. ಇದು ನೈಜ ಘಟನೆಯನ್ನು ಮೀರಿಸುವಂತಿದ್ದರೂ, ಇದೊಂದು ದೇವರ ಉತ್ಸವದಲ್ಲಿ ನಡೆಯುವ ಪದ್ಧತಿಯ ಕಳ್ಳೋತ್ಸವ ಎಂದು ಕರೆಯಲಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಉತ್ಸವ ನಡೆಯುತ್ತಿದ್ದ ವೇಳೆ ದಿಢೀರನೇ ಆಗಮಿಸಿದ ಕಳ್ಳರ ತಂಡವೊಂದು ದೇವರ ಚಿನ್ನಾಭರಣಗಳನ್ನು ಕದ್ದು ಪರಾರಿಯಾದ ಪ್ರಸಂಗ ನಗರದ ಶ್ರೀಲಕ್ಷ್ಮಿಜನಾರ್ದನಸ್ವಾಮಿ ದೇವಾಲಯದ ಬಳಿ ನಿನ್ನೆ ಮಧ್ಯರಾತ್ರಿ ನಡೆದಿದೆ.

ಸುಮಾರು ಎಂಟತ್ತು ಮಂದಿಯ ಕಳ್ಳರ ತಂಡವೊಂದು ದೇವರ ಉತ್ಸವದ ಮಧ್ಯೆ ಆಗಮಿಸಿ ಚಿನ್ನಾಭರಣ ಎಗರಿಸಿಕೊಂಡು ಪರಾರಿಯಾದರು. ಇದು ನೈಜ ಘಟನೆಯನ್ನು ಮೀರಿಸುವಂತಿದ್ದರೂ, ಇದೊಂದು ದೇವರ ಉತ್ಸವದಲ್ಲಿ ನಡೆಯುವ ಪದ್ಧತಿಯ ಕಳ್ಳೋತ್ಸವ ಎಂದು ಕರೆಯಲಾಗುತ್ತದೆ.

ಹೀಗೊಂದು ಪದ್ಧತಿ:

ಕಳೆದ ಏ.೩೦ರಿಂದ ಮೇ ೧೦ರವರೆಗೆ ನಡೆಯುವ ಶ್ರೀಲಕ್ಷ್ಮಿಜನಾರ್ದನಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ವಿವಿಧ ಪೂಜಾ ಕಾರ್ಯಗಳನ್ನು ಏರ್ಪಡಿಸಲಾಗಿತ್ತು. ನಿನ್ನೆ ರಾತ್ರಿ ೧೧ ಗಂಟೆ ಸಮಯದಲ್ಲಿ ರಾತ್ರಿ ಕುದುರೆ ಉತ್ಸವದ ಮೆರವಣಿಗೆ ನಡೆಯುತ್ತಿತ್ತು. ವಾಪಸ್‌ ದೇವಾಲಯಕ್ಕೆ ಹೋಗುವ ವೇಳೆ ದಾರಿ ಮಧ್ಯದಲ್ಲಿ ಕಳ್ಳರ ಗುಂಪೊಂದು ಇನ್ನೊಂದು ಉತ್ಸವ ಮೂರ್ತಿಯನ್ನು ಹೊತ್ತು, ಕೈಯಲ್ಲಿ ಖಡ್ಗಗಳನ್ನು ಝಳಪಿಸುತ್ತಾ, ಮುಸುಕುಧಾರಿಗಳಾಗಿ ಬರುತ್ತಾರೆ.

ದೇವರ ಉತ್ಸವಕ್ಕೆ ತಡೆಯೊಡ್ಡಿ ನಿಲ್ಲಿಸಿದ ಕಳ್ಳರ ಗುಂಪು ಪೂಜಾರಿಗಳೊಂದಿಗೆ ಜಗಳವಾಡುತ್ತಾರೆ. ನಿಮ್ಮ ದೇವರಿಗೆ ಮಾತ್ರ ಪೂಜೆ ಮಾಡುತ್ತೀರಿ. ನಾವು ತಂದಿರುವ ದೇವರಿಗೂ ಪೂಜೆ ಮಾಡುವಂತೆ ಹಠ ಹಿಡಿಯುತ್ತಾರೆ. ಅಸಮಾಧಾನಗೊಂಡ ಅರ್ಚಕರು ಕಳ್ಳರು ಹೊತ್ತು ತಂದ ದೇವರಿಗೂ ಪೂಜೆ ಸಲ್ಲಿಸುತ್ತಾರೆ. ನಂತರ ನಿಮ್ಮ ದೇವರಿಗೆ ತೊಡಿಸಿರುವ ಆಭರಣಗಳನ್ನು ಬಿಚ್ಚಿ ನಮ್ಮ ದೇವರಿಗೂ ಹಾಕುವಂತೆ ಬೆದರಿಸುತ್ತಾರೆ. ಬೆದರಿದ ಅರ್ಚಕರು ಚಿನ್ನಾಭರಣಗಳನ್ನು ಕಳ್ಳರು ಹೊತ್ತುತಂದ ದೇವರಿಗೂ ತೊಡಿಸುತ್ತಾರೆ.

ದೇವರಿಗೆ ಚಿನ್ನಾಭರಣಗಳನ್ನು ತೊಡಿಸುತ್ತಿದ್ದಂತೆ ಸಂತೋಷಗೊಂಡ ಕಳ್ಳರ ಗುಂಪು ತಾವು ಹೊತ್ತು ತಂದಿದ್ದ ದೇವರೊಂದಿಗೆ ಚಿನ್ನಾಭರಣವನ್ನು ಕಳವು ಮಾಡಿ ಪರಾರಿಯಾಗುತ್ತಾರೆ. ಇದು ಕಳೆದ ನೂರಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಆಚರಣೆಯಾಗಿದೆ.

ಕಳ್ಳರ ಕನಸಿನಲ್ಲಿ ಸಾಕ್ಷಾತ್ ದೇವರು ಬಂದು ನಿಮಗೆ ಯಾವುದೇ ರೀತಿಯಲ್ಲೂ ತೊಂದರೆ ಮಾಡುವುದಿಲ್ಲ. ನಿಮ್ಮನ್ನು ಕಾಪಾಡುತ್ತೇನೆ. ನಿಮ್ಮ ಕೋರಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡುತ್ತಾನೆ. ಇದರಿಂದ ಆತಂಕಗೊಂಡ ಕಳ್ಳರು ಬೆಳಗೆ ದೇವಾಲಯಕ್ಕೆ ಬಂದು ತಾವು ಕದ್ದೊಯ್ದಿದ್ದ ಚಿನ್ನಾಭರಣಗಳನ್ನು ತಂದಿಟ್ಟು ತಪ್ಪನ್ನು ಒಪ್ಪಿಕೊಳ್ಳುತ್ತಾರೆ. ಬಳಿಕ ನಗರದಲ್ಲಿ ಭಿಕ್ಷೆ ಬೇಡಿ ಬಂದ ಹಣದಲ್ಲಿ ದೇವರಿಗೆ ಪೂಜೆ ಸಲ್ಲಿಸಿ, ಪ್ರಸಾದವನ್ನು ಮಾಡಿ ಭಕ್ತರಿಗೆ ವಿತರಿಸುತ್ತಾರೆ. ಇಲ್ಲಿಗೆ ಕಳ್ಳೋತ್ಸವ ಸಂಪನ್ನಗೊಳ್ಳುತ್ತದೆ. ಇದು ನಿರಂತರವಾಗಿ ನಡೆದುಕೊಂಡು ಬರುತ್ತಿದೆ.