ಇತಿಹಾಸದಲ್ಲೇ ಮೊದಲ ಬಾರಿಗೆ ಕಾಫಿ ಬೆಳೆಗೆ ಚಿನ್ನದ ಬೆಲೆ : 50 ಕೆಜಿ ಕಾಫಿ ಬೀಜಕ್ಕೆ ₹14 ಸಾವಿರ

| N/A | Published : Feb 25 2025, 12:51 AM IST / Updated: Feb 25 2025, 11:36 AM IST

ಇತಿಹಾಸದಲ್ಲೇ ಮೊದಲ ಬಾರಿಗೆ ಕಾಫಿ ಬೆಳೆಗೆ ಚಿನ್ನದ ಬೆಲೆ : 50 ಕೆಜಿ ಕಾಫಿ ಬೀಜಕ್ಕೆ ₹14 ಸಾವಿರ
Share this Article
  • FB
  • TW
  • Linkdin
  • Email

ಸಾರಾಂಶ

 ಇತಿಹಾಸದಲ್ಲೇ ಮೊದಲ ಬಾರಿಗೆ ಕಾಫಿ ಬೆಳೆಗೆ ಚಿನ್ನದ ಬೆಲೆ ಬಂದಿದ್ದು, ಬೆಳೆಗಾರರ ಮುಖದಲ್ಲಿ ಮಂದಸ್ಮಿತ ಮೂಡಿಸಿದೆ. ಗುಣ ಮಟ್ಟದ 50 ಕೆಜಿ ತೂಕದ ರೋಬಸ್ಟಾ ಕಾಫಿ ಮೂಟೆಗೆ ₹14 ಸಾವಿರ ಬೆಲೆ ದಾಖಲಾಗಿದೆ.  

 ನರಸಿಂಹರಾಜಪುರ : ಇತಿಹಾಸದಲ್ಲೇ ಮೊದಲ ಬಾರಿಗೆ ಕಾಫಿ ಬೆಳೆಗೆ ಚಿನ್ನದ ಬೆಲೆ ಬಂದಿದ್ದು, ಬೆಳೆಗಾರರ ಮುಖದಲ್ಲಿ ಮಂದಸ್ಮಿತ ಮೂಡಿಸಿದೆ. ಗುಣ ಮಟ್ಟದ 50 ಕೆಜಿ ತೂಕದ ರೋಬಸ್ಟಾ ಕಾಫಿ ಮೂಟೆಗೆ ₹14 ಸಾವಿರ ಬೆಲೆ ದಾಖಲಾಗಿದೆ. ಕಾಫಿ ಬೆಳೆ ಇತಿಹಾಸ ನೋಡಿದರೆ ಬೆಲೆಯ ಏರಿಳಿತದಿಂದ ಬೆಳೆಗಾರರು ಸದಾ ಸಂಕಷ್ಟದಲ್ಲಿದ್ದರು. 

ಇತ್ತೀಚಿನ ವರ್ಷಗಳಲ್ಲಿ 50 ಕೆ.ಜಿ. ಮೂಟೆಗೆ ₹ 5 ರಿಂದ 6 ಸಾವಿರ ದಾಟಿರಲಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 2 ಪಟ್ಟು ಜಾಸ್ತಿಯಾಗಿದೆ. ಕೆಲವು ವರ್ಷ ಕಾಫಿ ಹಣ್ಣು ಕೊಯ್ದು ಒಣಗಿಸಿ ಮಾರುಕಟ್ಟೆಗೆ ತರುವಷ್ಟರಲ್ಲಿ ಕಾಫಿ ಬೆಲೆ ಕುಸಿಯುತ್ತಿತ್ತು. ಆಗ ಬೆಳೆಗಾರರು ಬಂದ ಬೆಲೆಗೆ ಕಾಫಿ ಬೀಜ ಮಾರಾಟ ಮಾಡುತ್ತಿದ್ದರು. ಈ ವರ್ಷ ಕಾಫಿ ಬೀಜ ಕೊಯ್ದು ಒಣಗಿಸಿ ಮಾರಾಟ ಮಾಡುವ ಸಂದರ್ಭದಲ್ಲೇ ಕಾಫಿ ಬೀಜದ ಧಾರಣೆ ಏರಿಕೆ ಕಂಡಿರು ವುದು ಬೆಳೆಗಾರರಿಗೆ ವರದಾನವಾಗಿದೆ. ಜನವರಿ, ಫೆಬ್ರವರಿ ತಿಂಗಳ ಒಳಗೆ ಕಾಫಿ ಕೊಯ್ಲು ಮುಗಿದು ಒಣಗಿಸಿ ಮಾರಾಟಕ್ಕೆ ಸಿದ್ಧವಾಗುತ್ತದೆ.

ಕಾಫಿ ಬೆಲೆ ಏರಿಕೆ ಕಾರಣ: ಕಾಫಿ ಬೀಜಕ್ಕೆ ಅಂತಾರಾಷ್ಟೀಯ ಮಾರುಕಟ್ಟೆ ಇದೆ. ಪಶ್ಚಿಮ ಘಟ್ಟದ ಗುಡ್ಡಗಳ ಜಾಗದಲ್ಲಿ ಕಾಫಿ ಬೆಳೆ ಚೆನ್ನಾಗಿ ಬರುವ ಕಾರಣ ರಾಜ್ಯದ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆ ಹೆಚ್ಚಾಗಿ ಬೆಳೆಯಲಾಗುತ್ತದೆ. ಕೊಪ್ಪ ಕಾಫಿ ಮಂಡಳಿ ವ್ಯಾಪ್ತಿಯ ನರಸಿಂಹರಾಜಪುರ, ಬಾಳೆಹೊನ್ನೂರು,ಶೃಂಗೇರಿ, ಕೊಪ್ಪದ 11,640 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತದೆ.

ಈ ವರ್ಷ ಅತಿಯಾದ ಮಳೆ ಹಾಗೂ ಮಂಜು ಸುರಿದು ಬ್ರೆಜಿಲ್, ವಿಯಟ್ನಾಂ ದೇಶಗಳಲ್ಲಿ ಕಾಫಿಗೆ ಕೊಳೆ ರೋಗ ಬಂದು ಬೆಳೆ ಸಂಪೂರ್ಣ ಹಾಳಾಗಿರುವುದು ಬೆಲೆ ಏರಿಕೆಗೆ ಕಾರಣ ಎಂದು ಅಂದಾಜಿಸಲಾಗಿದೆ. ಕರ್ನಾಟಕದಲ್ಲೂ ಅತಿಯಾದ ಮಳೆಯಿಂದ ಈ ವರ್ಷ ಶೇ.10 ರಷ್ಟು ಕಾಫಿ ಬೆಳೆ ಉದುರಿ ಹೋಗಿದೆ. ಆದರೆ ಪ್ರಸ್ತುತ ಭಾರತದ ಕಾಫಿಗೆ ಅಂತಾರಾಷ್ಟೀಯ ಮಾರುಕಟ್ಟೆ ಯಲ್ಲಿ ಬೇಡಿಕೆ ಹೆಚ್ಚಾಗಿದೆ. ಬೇಡಿಕೆಯಷ್ಟು ಕಾಫಿ ಬೀಜ ಇಲ್ಲದಿರುವುದೇ ಕಾಫಿ ಬೆಲೆ ಏರಿಕೆಗೆ ಕಾರಣ ಎಂದು ವಿಶ್ಲೇಸಿಸಲಾಗಿದೆ. 

ಬಂಪರ್ ಧಾರಣೆ: ಕಾಫಿ ಬೆಳೆಗಾರರಿಗೆ ಹರ್ಷ ಚೆನ್ನಾಗಿ ನೀರು ಬಸಿದು ಹೋಗುವ ಗುಡ್ಡ ಗಾಡು ಪ್ರದೇಶದಲ್ಲಿ ಚೆನ್ನಾಗಿ ಬರುವ ಕಾಫಿ ಬೆಳೆ ಮದ್ಯೆ ಸಿಲ್ವರ್ ಗಿಡ ಹಾಗೂ ಇತರ ಮರಗಳಲ್ಲಿ ಕಾಳು ಮೆಣಸು ಬಳ್ಳಿ ಹಬ್ಬಿಸುತ್ತಾರೆ. ಇದರಿಂದ ಕಾಫಿ ಜೊತೆಗೆ ಕಾಳು ಮೆಣಸಿನಿಂದಲೂ ಆದಾಯ ಬರುತ್ತದೆ. ಕಾಫಿ ತೋಟ ಸುಸ್ಥಿತಿಯಲ್ಲಿದ್ದರೆ ಮಾತ್ರ ಉತ್ತಮ ಬೆಳೆ ಸಾಧ್ಯ. ಬೇಸಿಗೆಯಲ್ಲೂ ನೀರು ಹೊಡೆಯಬೇಕು. ಪ್ರತಿ ವರ್ಷ 2 ಬಾರಿ ರಾಸಾಯನಿಕ ಗೊಬ್ಬರ ಹಾಕಿ, ಕಾಲ, ಕಾಲಕ್ಕೆ ಕಾಫಿ ಕಸಿ, ನೆರಳು ಹೆಚ್ಚಾಗದಂತೆ ಕಾಡು ಮರಗಳ ಗೆಲ್ಲು ಕಡಿದು ಕಸಿ ಮಾಡ ಬೇಕು. ಇದರಿಂದ ಗಿಡಕ್ಕೆ ಬಿಸಿಲು ಚೆನ್ನಾಗಿ ಬಿದ್ದು ಫಸಲು ಜಾಸ್ತಿಯಾಗಲಿದೆ. 

ಬಯಲು ಸೀಮೆಯಿಂದ ಬರುವ ಕೂಲಿ ಕಾರ್ಮಿಕರು ಸೀಜನ್ ನಲ್ಲಿ ಕಾಫಿ ಹಣ್ಣು ಕೊಯ್ಯುತ್ತಾರೆ. ವರ್ಷದ 12 ತಿಂಗಳೂ ಕಾಫಿ ತೋಟದ ಕೆಲಸ ಇರುತ್ತದೆ. ಆದರೆ, ಕಾಫಿ ತೋಟದ ಕೆಲಸ ಮಾಡಿಸಲೇ ಬೇಕಾಗಿರುವುದರಿಂದ ಕಾಫಿ ಬೆಳೆಗಾರರು ಸಾಲ ಮಾಡಿಯಾದರೂ ತೋಟದ ಕೆಲಸ ಮಾಡಬೇಕಾಗುತ್ತದೆ. ಕಾಫಿ ಧಾರಣೆ ಕುಸಿದ ಸಂದರ್ಭದಲ್ಲೂ ಕಷ್ಟ ಪಟ್ಟು ಕಾಫಿ ತೋಟ ಚೆನ್ನಾಗಿ ಇಟ್ಟುಕೊಂಡ ಕಾಫಿ ಬೆಳೆಗಾರರಿಗೆ ಈ ವರ್ಷದ ಬಂಪರ್ ಧಾರಣೆಯಿಂದ ಹರ್ಷ ತಂದಿದೆ. ಕೊಪ್ಪ, ಶೃಂಗೇರಿ ತಾಲೂಕಿನಲ್ಲಿ ಹಳದಿ ಎಲೆ ರೋಗದಿಂದ ಬಹುತೇಕ ನಾಶವಾದ ಅಡಕೆ ತೋಟಗಳು ಈಗ ಕಾಫಿ ತೋಟವಾಗಿ ಪರಿವರ್ತನೆಯಾಗಿವೆ.

 ಈಗ ಕಾಫಿ ಬೆಲೆ ಏರಿಕೆಯಿಂದ ಆ ಭಾಗದ ಬೆಳೆಗಾಗರಿಗೂ ಖುಷಿ ತಂದಿದೆ.

 ಈ ವರ್ಷ ಅತಿಯಾದ ಮಳೆಯಿಂದ ಕಾಫಿಗೆ ಕೊಳೆ ಬಂದು ಬೆಳೆ ಕಡಿಮೆಯಾಗಿದೆ. ನಿರೀಕ್ಷೆಯಷ್ಟು ಫಸಲು ಇಲ್ಲವಾದರೂ ಕಾಫಿ ಕಾಯ್ಲು ಮುಗಿದ ಸಮಯದಲ್ಲೇ ಧಾರಣೆ ಏರಿಕೆಯಾಗಿರುವುದು ಖುಷಿ ತಂದಿದೆ. ಶಬರಿಯಂತೆ ಹಲವಾರು ವರ್ಷ ಗಳಿಂದ ಉತ್ತಮ ಕಾಫಿ ಧಾರಣೆಗೆ ಕಾಯುತ್ತಿದ್ದ ಬೆಳೆಗಾರರಿಗೆ ತುಸು ನೆಮ್ಮದಿ ತಂದಿದೆ.

- ದೀಪಕ್,

ಕಾಫಿ ಬೆಳೆಗಾರರು, ಕುದುರೆಗುಂಡಿ

ಇತಿಹಾಸದಲ್ಲೇ ಮೊದಲ ಬಾರಿಗೆ ಕಾಫಿ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಹಲವಾರು ಕಾಫಿ ಬೆಳೆಗಾರರು ಬೆಲೆ ಕುಸಿತದ ಸಂದರ್ಭದಲ್ಲೂ ತೋಟವನ್ನು ಚೆನ್ನಾಗಿ ಇಟ್ಟುಕೊಂಡಿದ್ದರು. ಈ ವರ್ಷದ ಕಾಫಿ ಬೆಲೆ ₹14 ಸಾವಿರದವರೆಗೂ ಏರಿಕೆಯಾಗಿರುವುದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಎರಡು ಪಟ್ಟು ಜಾಸ್ತಿಯಾಗಿದೆ.

ಎಚ್.ಬಿ.ರಘುವೀರ್,

ಕಾಫಿ ಬೆಳೆಗಾರರು, ಮಡಬೂರು ಎಸ್ಟೇಟ್, ನರಸಿಂಹರಾಜಪುರ

ಕೊಪ್ಪ,ಶೃಂಗೇರಿ, ನರಸಿಂಹರಾಜಪುರ ವ್ಯಾಪ್ತಿಯಲ್ಲಿ 11,640 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಬ್ರೆಜಿಲ್, ವಿಯೆಟ್ನಾಂ ದೇಶದಲ್ಲಿ ಅತಿಯಾದ ಮಳೆಯಿಂದ ಕಾಫಿ ಸಂಪೂರ್ಣವಾಗಿ ನಾಶವಾಗಿರುವುದೇ ಬೆಲೆ ಏರಿಕೆಗೆ ಮುಖ್ಯ ಕಾರಣ. ದೇಶದಾದ್ಯಂತ ಕಾಫಿಗೆ ಬೇಡಿಕೆ ಹೆಚ್ಚಾಗಿದೆ.

ಡಾ.ಪ್ರಭುಗೌಡ, ಹಿರಿಯ ಸಂಪರ್ಕಾಧಿಕಾರಿ,

ಕಾಫಿ ಮಂಡಳಿ, ಕೊಪ್ಪ