ಸಾರಾಂಶ
ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಕೂಡಾ ಒಂದಾಗಿದೆ. ಈ ಯೋಜನೆಯಲ್ಲಿ ಈ ದಿನ ರಾಜ್ಯದ 44 ಲಕ್ಷ ರೈತ ಕುಟುಂಬಗಳು 884 ಕೋಟಿ ರುಗಳ ಆರ್ಥಿಕ ನೆರವನ್ನು ಪಡೆಯಲಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತೀರ್ಥಹಳ್ಳಿ: ಆಹಾರ ಉತ್ಪಾದಕ ರೈತರ ಕಣ್ಣೀರು ಒರೆಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಕೂಡಾ ಒಂದಾಗಿದೆ. ಈ ಯೋಜನೆಯಲ್ಲಿ ಈ ದಿನ ರಾಜ್ಯದ 44 ಲಕ್ಷ ರೈತ ಕುಟುಂಬಗಳು 884 ಕೋಟಿ ರುಗಳ ಆರ್ಥಿಕ ನೆರವನ್ನು ಪಡೆಯಲಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದ ಕೃಷಿ ಇಲಾಖೆಯ ಕಚೇರಿಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಬಿಹಾರ ರಾಜ್ಯದ ಭಾಗಲ್ಪುರ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿಯವರು ಡಿಬಿಟಿ ಮೂಲಕ ನೇರ ನಗದು ವರ್ಗಾವಣೆ ಮಾಡಲಿರುವ 19ನೇ ಕಂತಿನ ಹಣದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹವಾಮಾನ ವೈಪರೀತ್ಯ ಮತ್ತು ಮಾರುಕಟ್ಟೆಯ ಏರಿಳಿತದಿಂದ ಬಳಲುತ್ತಿರುವ ಆಹಾರ ಉತ್ಪಾದಕರ ರೈತರ ನೆರವಿನ ಸಲುವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆ ಆಹಾರ ಉತ್ಪಾದಕ ರೈತರ ಕಣ್ಣೀರು ಒರೆಸುವ ಕಾರ್ಯಕ್ರಮವಾಗಿದೆ. ಈ ಮೊದಲು 18 ಕಂತುಗಳಲ್ಲಿ ದೇಶದ 11 ಕೋಟಿ ರೈತ ಕುಟುಂಬಗಳು ಒಟ್ಟು 3.46 ಲಕ್ಷ ಕೋಟಿ ರು ಹಣದ ಲಾಭವನ್ನು ಪಡೆದಿದ್ದಾರೆ.
19ನೇ ಕಂತಿನಲ್ಲಿ ದೇಶದ 9.7 ಕೋಟಿ ರೈತ ಕುಟುಂಬಗಳು 22 ಸಾವಿರ ಕೋಟಿ ಹಣವನ್ನು ಪಡೆಯಲಿದ್ದಾರೆ. ಈ ಯೋಜನೆಯಲ್ಲಿ ಜಿಲ್ಲೆಯ 1.42 ಲಕ್ಷ ರೈತ ಕುಟುಂಬಗಳು 26 ಕೋಟಿ ರು. ಹಾಗೂ 53.08 ಕೋಟಿ ಹಣ ತಾಲೂಕಿನ 3992 ಮಹಿಳೆಯರು ಸೇರಿದಂತೆ 18221 ಕುಟುಂಬಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗಲಿದೆ ಎಂದು ತಿಳಿಸಿದರು. ಸಹಾಯಕ ಕೃಷಿ ನಿರ್ದೆಶಕ ಪ್ರವೀಣ್ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಿದರಲ್ಲದೇ, ರೈತರು ಸರ್ಕಾರದ ಈ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು.
ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೆಶಕ ಡಾ.ನಟರಾಜ್ ಮಾತನಾಡಿ, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಇಲಾಖೆಯ ವತಿಯಿಂದ ಉಚಿತವಾಗಿ ನೀಡಲಾಗುವ ಮೇವಿನ ಬೀಜವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ತೋಟಗಾರಿಕಾ ಇಲಾಖೆಯ ಸೋಮಶೇಕರ್, ಕೃಷಿ ಇಲಾಖೆಯ ಅಧಿಕಾರಿ ಕೌಶಿಕ್ ಇದ್ದರು.