ಕನ್ನಡಪ್ರಭ ವಾರ್ತೆ ವಿಜಯಪುರ

ಜನವರಿ 26ರಂದು ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಹಾಡಹಗಲೇ ನಡೆದಿದ್ದ ಚಿನ್ನದಂಗಡಿ ದರೋಡೆ ಪ್ರಕರಣವನ್ನು ಕೇವಲ 20 ದಿನಗಳಲ್ಲಿ ಬೇಧಿಸುವಲ್ಲಿ ವಿಜಯಪುರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಪುಣೆಯಲ್ಲಿ ತಲೆ ಮರೆಸಿಕೊಂಡಿದ್ದ ಜತ್ತ ಮೂಲದ ಹಣಮಂತ ವಾಘೋಲಿ ಹಾಗೂ ಶಿವರಾಜ ಗೌಡಪ್ಪ ನಾವಿ ಎಂಬಾತ ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ದರೋಡೆ ಮಾಡಿದ್ದ ₹22 ಲಕ್ಷ ಮೌಲ್ಯದ 205 ಗ್ರಾಂ ಬಂಗಾರ ಹಾಗೂ 1 ಕೆಜಿ ಬೆಳ್ಳಿ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ 1 ಕಂಟ್ರಿ ಪಿಸ್ತೂಲ್ ಸೇರಿದಂತೆ ಒಟ್ಟು 03 ಕಂಟ್ರಿ ಪಿಸ್ತೂಲ್‌, 26 ಜೀವಂತ ಗುಂಡುಗಳು, ಒಂದು ಏರಗನ್, ಹೊಂಡಾ ಕಂಪನಿಯ ಯುನಿಕಾರ್ನ್‌ ಮೋಟಾರ್ ಸೈಕಲ್, ಮಾಸ್ಕ್‌, ಜಾಕೇಟ್, ಹೆಲ್ಮೆಟ್, ಹ್ಯಾಂಡಗ್ಲೌಸ್‌, ಹಾಗೂ ಧರಿಸಿದ ಬಟ್ಟೆಗಳನ್ನು ಜಪ್ತಿ ಮಾಡಲಾಗಿದೆ.

ಘಟನೆ ವಿವರ:

ಜ.26 ರಂದು ಮಧ್ಯಾಹ್ನ 3.30ರ ವೇಳೆಗೆ ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಲಸಂಗಿ ಗ್ರಾಮದ ಮಹಾರುದ್ರ ಕಂಚಗಾರ ಎಂಬುವವರ ಭೂಮಿಕಾ ಜ್ಯುವೆಲರಿ ಅಂಗಡಿಗೆ ಮುಖಕ್ಕೆ ಕಪ್ಪು ಬಟ್ಟೆ ಹಾಗೂ ಹೆಲ್ಮೆಟ್ ಹಾಕಿಕೊಂಡು ಕಪ್ಪು ಬಣ್ಣದ ಯುನಿಕಾರ್ನ್‌ ಮೋಟಾರ್ ಸೈಕಲ್ ಮೇಲೆ ಬಂದಿದ್ದ ಇಬ್ಬರು ದರೋಡೆಕೋರರು, ಪಿಸ್ತೂಲ್ ತೋರಿಸಿ ಅಂಗಡಿಯಲ್ಲಿದ್ದ 205 ಗ್ರಾಂ ಬಂಗಾರ ಹಾಗೂ 1 ಕೆಜಿ ಬೆಳ್ಳಿ ಆಭರಣಗಳು ಸೇರಿ ಒಟ್ಟು ₹22 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಸುಲಿಗೆ ಮಾಡಿದ್ದರು. ಇಷ್ಟೆ ಅಲ್ಲದೆ ವಾಪಸ್ ಹೋಗುವ ಸಮಯದಲ್ಲಿ ಬಂಗಾರದ ಅಂಗಡಿ ಪಕ್ಕದಲ್ಲಿ ನಿಂತಿದ್ದ ಸಾರ್ವಜನಿಕರ ಕಡೆಗೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ, ಓರ್ವನಿಗೆ ಗಾಯಗೊಳಿಸಿ ಪರಾರಿಯಾಗಿದ್ದರು. ಈ ಕುರಿತು ಅಂಗಡಿ ಮಾಲೀಕ ಮಹಾರುದ್ರ ಕಂಚಗಾರ ಝಳಕಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.


ಖಾಕಿ ಕಾರ್ಯಾಚರಣೆ:

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರು ಹೆಚ್ಚುವರಿ ಎಸ್‌ಪಿ ರಾಮನಗೌಡ ಹಟ್ಟಿ ನೇತೃತ್ವದಲ್ಲಿ ಎರಡು ತನಿಖಾ ತಂಡಗಳನ್ನು ರಚಿಸಿದ್ದರು. ತಂಡದಲ್ಲಿದ್ದ ಇಬ್ಬರು ಡಿವೈಎಸ್‌ಪಿಗಳಾದ ಸದಾಶಿವ ಕಟ್ಟಿಮನಿ, ಸುನೀಲ ಕಾಂಬಳೆ, ಚಡಚಣ ಸಿಪಿಐ ಪರಶುರಾಮ ಮನಗೂಳಿ, ಪಿಎಸ್‌ಐ ಗಳಾದ ಮಂಜುನಾಥ ತಿರಕ್ಕನ್ನವರ, ಸೋಮೇಶ ಗೆಜ್ಜಿ, ರಾಕೇಶ ಬಗಲಿ, ಹಾಗೂ ಕ್ರೈಂ, ತಾಂತ್ರಿಕ ಸಿಬ್ಬಂದಿ ಆರೋಪಿಗಳ ಕುರಿತು ತನಿಖೆ ನಡೆಸಿ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಮಹಾರಾಷ್ಟ್ರದ ಗಡಿಗೆ ಹತ್ತಿರವಿರುವುದರಿಂದ ಹಲಸಂಗಿಯಲ್ಲಿ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರು ದೋಚಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳನ್ನು ಸೀಜ್ ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಶ್ಲಾಘಿಸಿ, ಪ್ರತ್ಯೇಕ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ.

ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್‌ಪಿ.ವಿವಿಧೆಡೆ ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳು

ಪ್ರಕರಣದ ಮೊದಲ ಆರೋಪಿ ಹಣಮಂತ ವಾಘೋಲಿ ತಾನು ಪೊಲೀಸ್ ಆಗಬೇಕೆಂದು ಕಸರತ್ತು ಮಾಡಿ ಸಾಕಷ್ಟು ಬಾರಿ ಪ್ರಯತ್ನಿಸಿದರೂ ಪೊಲೀಸ್ ಆಗಿರಲಿಲ್ಲ. ಆದರೆ ಶೋಕಿ ಮಾಡಲು ಆತನಿಗೆ ಹಣ ಬೇಕಾಗಿದ್ದರಿಂದ ತನ್ನ ಪರಿಚಯದ ಶಿವರಾಜ ನಾವಿ ಜೊತೆಗೆ ಸೇರಿ ದರೋಡೆಗೆ ಪ್ಲಾನ್ ಹಾಕಿದ್ದ. ಮೊದಲಿಗೆ ಜತ್‌ ನಿಂದ ಸೋಲಾಪುರಕ್ಕೆ ಹೋಗಿ ಅಲ್ಲಿ ಚಿನ್ನದಂಗಡಿಗಳನ್ನು ದೋಚಲು ಸಂಚು ರೂಪಿಸಿದ್ದರು. ಆದರೆ ಅಲ್ಲಿನ ಅಂಗಡಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನಜಂಗುಳಿ ಇದ್ದ ಕಾರಣ ಅವರ ಪ್ಲಾನ್ ಫೇಲ್ ಆಗಿತ್ತು. ಬಳಿಕ ವಾಪಸ್ ಬರುವಾಗ ಧೂಳಖೇಡದಲ್ಲೂ ಹೊಂಚು ಹಾಕಿದ್ದ ಅವರು ಅಲ್ಲಿನ ಚಿನ್ನದಂಗಡಿಗಳಲ್ಲೂ ಅವರಿಗೆ ಸಮಯ ಸಾಧಿಸಿರಲಿಲ್ಲ. ಇನ್ನು ಕೊನೆದಾಗಿ ಹೇಗಾದರೂ ಮಾಡಲೇಬೇಕು ಎಂದು ಹಲಸಂಗಿಗೆ ಬಂದು ಅಲ್ಲಿನ ಮೂರ್ನಾಲ್ಕು ಅಂಗಡಿಗಳಿಗೆ ಹೊಂಚುಹಾಕಿ ಕೊನೆಗೆ ಭೂಮಿಕಾ ಜ್ಯುವೆಲರಿ ಶಾಪ್‌ನಲ್ಲಿ ಜನ ಕಡಿಮೆ ಇದ್ದುದರಿಂದ ಇಲ್ಲಿ ದರೋಡೆ ಮಾಡಿಕೊಂಡು ಎಸ್ಕೇಪ್ ಆಗಿದ್ದರು.