ಹಾನಗಲ್ಲ: ತಾಲೂಕಿನ ಚಿಕ್ಕಾಂಸಿ ಹೊಸೂರು ಬಸ್ ನಿಲ್ದಾಣದ ಎದುರಿನ ಬಂಗಾರದ ಅಂಗಡಿಯ ಕಬ್ಬಿಣದ ಬಾಗಿಲುಗಳನ್ನು ಕಟರ್ ಯಂತ್ರ ಬಳಸಿ ಕತ್ತರಿಸಿ ₹45 ಲಕ್ಷಗಳಿಗೂ ಅಧಿಕ ಮೌಲ್ಯದ ಬಂಗಾರದ ಆಭರಣ, ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಚಿಕ್ಕಾಂಶಿ ಹೊಸೂರು ಗ್ರಾಮದ ಅಣ್ಣಪ್ಪ ಭಜಂತ್ರಿ ಎಂಬವರಿಗೆ ಸೇರಿದ ಶಾರದಾ ಜ್ಯುವೆಲರಿ ಅಂಗಡಿಯಲ್ಲಿಯೇ, ಶನಿವಾರ ಬೆಳಗಿನ ಜಾವ ಸುಮಾರು 1.20ರ ಹೊತ್ತಿಗೆ ದರೋಡೆ ನಡೆದಿದ್ದು, ಆಭರಣಗಳಿದ್ದ ಲಾಕರ್‌ನ್ನೇ ಹೊತ್ತೊಯ್ಯಲಾಗಿದೆ. ಬಂಗಾರದ ಅಂಗಡಿ ಪಕ್ಕದ ಕಿರಾಣಿ ಅಂಗಡಿಯ ಮುಂಭಾಗದ ವಿದ್ಯುತ್ ಮೀಟರ್‌ಗೆ ಕನೆಕ್ಷನ್ ಪಡೆದುಕೊಂಡು ಕಟರ್ ಯಂತ್ರದ ಮೂಲಕ ಬಾಗಿಲುಗಳ ಕೀ ಕಟ್ ಮಾಡಿ ಅಂಗಡಿ ಪ್ರವೇಶಿಸಲಾಗಿದೆ ಎನ್ನಲಾಗಿದೆ.ಪಕ್ಕದಲ್ಲಿ ಹೊಟೇಲ್ ಹಾಗೂ ಬೇಕರಿ ಇದ್ದು, ಪ್ರತಿದಿನ ಇಬ್ಬರು ಈ ಅಂಗಡಿಯಲ್ಲಿ ರಾತ್ರಿ ಮಲಗಿರುತ್ತಾರೆ. ಅವರು ಹೊರಬರಬಾರದೆಂದು ಅಂಗಡಿ ಬಾಗಿಲುಗಳಿಗೆ ಕಬ್ಬಿಣದ ರಾಡ್ ಬಳಸಿ ಲಾಕ್ ಮಾಡಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ಬಂಗಾರದ ಅಂಗಡಿ ಸೇರಿದಂತೆ ಸುತ್ತಮುತ್ತಲಿನ ಅಂಗಡಿಗಳಲ್ಲಿನ ಸಿಸಿ ಕ್ಯಾಮೆರಾಗಳನ್ನು ಕಳ್ಳರು ಹಾಳು ಮಾಡಿದ್ದಾರೆ, ಆದರೆ ಅವರ ಗಮನಕ್ಕೆ ಬಾರದ ಒಂದು ಕ್ಯಾಮೆರಾದಲ್ಲಿ ಮಾತ್ರ ಕಳ್ಳತನದ ಪ್ರಕ್ರಿಯೆಗಳು ದಾಖಲಾಗಿವೆ. ಮುಖಕ್ಕೆ ಮಾಸ್ಕ್ ಧರಿಸಿ ಬಂದ ಕಳ್ಳರ ತಂಡ, ಪಿಕ್‌ಅಪ್ ವಾಹನದಲ್ಲಿ ಬಂಗಾರವಿದ್ದ ಲಾಕರನ್ನು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ. ಎಂದಿನಂತೆ ಬೆಳಗಿನ ಜಾವ ಅಂಗಡಿ ಸ್ವಚ್ಛಗೊಳಿಸಲು ಮಾಲೀಕ ಬಂದಾಗ ಘಟನೆ ಬೆಳಕಿಗೆ ಬಂದಿದೆ.ಘಟನೆ ತಿಳಿದು ಸ್ಥಳಕ್ಕೆ ಹಾನಗಲ್ಲ ಪಿಎಸ್‌ಐ ಸಂಪತ್‌ಕುಮಾರ, ವೃತ್ತ ನಿರೀಕ್ಷಕ ಬಸವರಾಜ ಹಳಬಣ್ಣನವರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನಂತರ ಬೆರಳಚ್ಚು ತಜ್ಞರು, ಶ್ವಾನದಳ ತಂಡ ಪರಿಶೀಲನೆ ನಡೆಸಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಹಾವೇರಿ ಹೆಚ್ಚುವರಿ ಪೊಲೀಸ್ ಉಪಾಧೀಕ್ಷಕ ಎಲ್.ವೈ. ಶಿರಕೋಳ, ಶಿಗ್ಗಾಂವಿ ಡಿವೈಎಸ್ಪಿ ಕೆ.ವಿ. ಗುರುಶಾಂತಪ್ಪ ಸ್ಥಳಕ್ಕಾಗಮಿಸಿ ಪ್ರಾಥಮಿಕ ಮಾಹಿತಿ ಪಡೆದರು.
ಕಳೆದ ಕೆಲವು ತಿಂಗಳುಗಳ ಹಿಂದೆ ಇದೇ ಶಾರದಾ ಜ್ಯುವೆಲರ್ಸ್ ಅಂಗಡಿಯಲ್ಲಿ ಎರಡು ಬಾರಿ ಕಳ್ಳತನಕ್ಕೆ ಯತ್ನ ನಡೆದಿದ್ದು, ಯಶಸ್ವಿಯಾಗಿರಲಿಲ್ಲ ಎನ್ನಲಾಗಿದೆ.