1ನೇ ರ್ಯಾಂಕ್ ಬರುತ್ತದೆ. ಚಿನ್ನದ ಪದಗಳು ಸಿಗುತ್ತದೆಂದು ನಾನು ಅಂದುಕೊಂಡಿರಲಿಲ್ಲ. 2 ಅಥವಾ 3ನೇ ರ್ಯಾಂಕ್ ನಿರೀಕ್ಷೆ ಮಾಡಿದ್ದೆ. ಆದರೆ, ಈಗ ಪ್ರಥಮ ರ್ಯಾಂಕ್ ಜೊತೆಗೆ 8 ಚಿನ್ನದ ಪದಕ ಬಂದಿರುವುದು ನನ್ನ ಖುಷಿಗೆ ಪಾರವೇ ಇಲ್ಲದಂತಾಗಿದೆ ಎಂದು ದಾವಣಗೆರೆ ವಿವಿ ಕ್ಯಾಂಪಸ್‌ನ ಎಂ.ಕಾಂ. ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿ 7 ಚಿನ್ನದ ಪದಕಗಳ ಪಡೆದ ಹುಡುಗಿ ಎಂಬ ಸಾಧನೆ ಮಾಡಿದ, ಹರಿಹರ ತಾ. ಜಿಗಳಿ ಗ್ರಾಮದ ರೈತರಾದ ಎನ್‌.ಭರಮನಗೌಡ ಮೀನಾಕ್ಷಿ ದಂಪತಿ ಪುತ್ರಿಯಾಗಿರುವ ಎನ್‌.ಬಿ.ನಯನಾ ಮಾತುಗಳಿವು.

ಕನ್ನಡಪ್ರಭ ವಾರ್ತೆ ದಾವಣಗೆರೆ

1ನೇ ರ್ಯಾಂಕ್ ಬರುತ್ತದೆ. ಚಿನ್ನದ ಪದಗಳು ಸಿಗುತ್ತದೆಂದು ನಾನು ಅಂದುಕೊಂಡಿರಲಿಲ್ಲ. 2 ಅಥವಾ 3ನೇ ರ್ಯಾಂಕ್ ನಿರೀಕ್ಷೆ ಮಾಡಿದ್ದೆ. ಆದರೆ, ಈಗ ಪ್ರಥಮ ರ್ಯಾಂಕ್ ಜೊತೆಗೆ 8 ಚಿನ್ನದ ಪದಕ ಬಂದಿರುವುದು ನನ್ನ ಖುಷಿಗೆ ಪಾರವೇ ಇಲ್ಲದಂತಾಗಿದೆ ಎಂದು ದಾವಣಗೆರೆ ವಿವಿ ಕ್ಯಾಂಪಸ್‌ನ ಎಂ.ಕಾಂ. ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿ 7 ಚಿನ್ನದ ಪದಕಗಳ ಪಡೆದ ಹುಡುಗಿ ಎಂಬ ಸಾಧನೆ ಮಾಡಿದ, ಹರಿಹರ ತಾ. ಜಿಗಳಿ ಗ್ರಾಮದ ರೈತರಾದ ಎನ್‌.ಭರಮನಗೌಡ ಮೀನಾಕ್ಷಿ ದಂಪತಿ ಪುತ್ರಿಯಾಗಿರುವ ಎನ್‌.ಬಿ.ನಯನಾ ಮಾತುಗಳಿವು.ಸರ್ಕಾರಿ ಸೇವೆಗೆ ಸೇರುವ ಗುರಿ ಹೊಂದಿರುವ ನಯನಾ ಅದಕ್ಕಾಗಿ ಕೆಎಎಸ್‌ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶಿಕ್ಷಕರು ತರಗತಿಯಲ್ಲಿ ಮಾಡಿದ್ದ ಪಾಠವನ್ನು ಸಮಯಕ್ಕೆ ಸರಿಯಾಗಿ ಓದಿಕೊಂಡು, ನನ್ನ ನೋಟ್ಸ್ ನಾನೇ ಸಿದ್ಧಪಡಿಸುತ್ತಿದ್ದೆ. ಸಮಯ ಸಿಕ್ಕಾಗಲೆಲ್ಲಾ ಗ್ರಂಥಾಲಯಕ್ಕೆ ಹೋಗಿ ಓದಿಕೊಳ್ಳುತ್ತಿದ್ದೆ. ನಿತ್ಯವೂ 3-4 ಗಂಟೆ ಓದಿಗೆ ಮೀಸಲಿಟ್ಟಿದ್ದರ ಫಲಶೃತಿಯೇ ಎಂ.ಕಾಂ. ಪರೀಕ್ಷೆಯಲ್ಲಿ ಮೊದಲ ರ್ಯಾಂಕ್, 7 ಚಿನ್ನದ ಪದಕಗಳು ಎಂದು ನುಡಿಯುತ್ತಾರೆ.

ಜಿಗಳಿ ಗ್ರಾಮದ ಭರಮನಗೌಡ, ಮೀನಾಕ್ಷಿ ದಂಪತಿ ಮಗಳ ಓದು, ಭವಿಷ್ಯಕ್ಕಾಗಿ ದಾವಣಗೆರೆಯಲ್ಲಿ ಅಜ್ಜಿ ಮನೆಯಲ್ಲೇ ಮಗಳನ್ನು ಓದಿಸುತ್ತಿದ್ದರು. ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ 10ನೇ ತರಗತಿವರೆಗೆ ಓದಿದ ನಯನಾ ಅವರಿಗೆ ಶಾಲೆಯಲ್ಲಿ ಶಿಸ್ತಿನ ಜೊತೆಗೆ ಓದಿನ ಆಸಕ್ತಿ ಮೂಡಿತ್ತು.ಪಿಯುಸಿ ಮತ್ತು ಬಿ.ಕಾಂ. ಪದವಿಯನ್ನು ಎವಿಕೆ ಮಹಿಳಾ ಕಾಲೇಜಿನಲ್ಲಿ ಮುಗಿಸಿದ್ದ ಎನ್.ಬಿ. ನಯನಾ 2024ರಲ್ಲಿ ಕೆಸೆಟ್ ಪರೀಕ್ಷೆಯಲ್ಲೂ ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಸೇವೆಗೆ ಸೇರಿಕೊಂಡು, ಜನ ಸೇವೆ ಮಾಡುವ ಕನಸಿನ ನಯನ ಈ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯತ್ತ ತಮ್ಮ ನಯನಗಳನ್ನು ಹರಿಸಿದ್ದಾರೆ. -30ಕೆಡಿವಿಜಿ11, 12: ಚಿನ್ನದ ಪದಕಗಳೊಂದಿಗೆ ಎನ್.ಬಿ.ನಯನಾ.

- - -

* ಹಮಾಲಿ ತಂದೆಗೆ ಚಿನ್ನದ ಪದಕವಿತ್ತ ಪುಟ್ಟರಾಜ

ಹಮಾಲಿ ಕೆಲಸ ಮಾಡುವ ತಂದೆಯ ಕಷ್ಟವನ್ನರಿತು, ಜೀವನದಲ್ಲಿ ಉನ್ನತ ಗುರಿ ಸಾಧಿಸುವ ಛಲದೊಂದಿಗೆ ಓದಿದ ಬಡ ಹುಡುಕನೊಬ್ಬ ಎಂ.ಎಸ್ಸಿ. ಭೌತಶಾಸ್ತ್ರದಲ್ಲಿ ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.ದಾವಣಗೆರೆ ನಗರದ ಚೌಕಿಪೇಟೆಯಲ್ಲಿ ಹಮಾಲಿ ಕೆಲಸ ಮಾಡುವ ರುದ್ರೇಶ ಹಾಗೂ ಶ್ರೀಮತಿ ರುದ್ರೇಶ ತಮ್ಮ ಬಡತನವನ್ನು ಎಂದಿಗೂ ಮಕ್ಕಳಿಗೆ ತೋರಿಸದೇ, ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದರು. ಇದರ ಪರಿಣಾಮ ಹಿರಿಯ ಮಗ ಧಾರವಾಡ ವಿಶ್ವವಿದ್ಯಾನಿಲಯದಲ್ಲಿ ಎಂಎಸ್‌ಸಿ ಕೆಮಿಸ್ಟ್ರಿ ಅಭ್ಯಾಸ ಮಾಡುತ್ತಿದ್ದರೆ, ಪುಟ್ಟ ಮಗ ಪುಟ್ಟರಾಜು ದಾವಣಗೆರೆ ವಿವಿಯಲ್ಲಿ 2024-25ನೇ ಸಾಲಿನ ಎಂ.ಎಸ್ಸಿ. ಭೌತಶಾಸ್ತ್ರ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಗಳಿಸಿ, ಚಿನ್ನದ ಪದಕ ಪಡೆದಿದ್ದಾರೆ.

ಬೆಂಗಳೂರಿನ ಪ್ರತಿಷ್ಟಿತ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯಲ್ಲಿ ಇಂಟರ್ನ್‌ಶಿಪ್ ಮಾಡಿರುವ ಪುಟ್ಟರಾಜು ಅಲ್ಲಿಯೇ ಪಿಎಚ್‌.ಡಿ ಮಾಡುವ ಮೂಲಕ ಸಂಶೋಧನಾ ಕ್ಷೇತ್ರದಲ್ಲಿ ಮುಂದುವರಿಸುವ ಗುರಿ ಹೊಂದಿದ್ದಾರೆ. ಪ್ರಾಧ್ಯಾಪಕರು ನಾವೀನ್ಯತೆ ಮತ್ತು ಸಂಶೋಧನೆಯಲ್ಲಿ ತೊಡಗುವಂತೆ ಪ್ರೇರಣೆ ನೀಡಿದ ಪರಿಣಾಮ ಇಂದು ಪುಟ್ಟರಾಜು ಸಂಶೋಧನಾ ಕ್ಷೇತ್ರದ ಕಡೆ ಒಲವು ತೋರಿದ್ದಾರೆ.ಯಾವುದೇ ಖಾಸಗಿ ಟ್ಯೂಷನ್‌ ಸಹಾಯವಿಲ್ಲದೇ ಇಲ್ಲಿವರೆಗೆ ಓದಿದ ಪುಟ್ಟರಾಜು ಇಂತಹ ಸಾಧನೆ ಮಾಡಿದ್ದಾರೆ. ದಾವಣಗೆರೆಯ ಹಮಾಲಿ ಕೆಲಸ ಮಾಡುವ ಕುಟುಂಬದ ಹಿನ್ನೆಲೆಯಿಂದ ಬಂದರೂ ತನ್ನ ಶೈಕ್ಷಣಿಕ ಸಾಧನೆ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ​ಒಬ್ಬ ಕೂಲಿ ಕಾರ್ಮಿಕನ ಮಗ ಉನ್ನತ ಸಾಧನೆ ಮಾಡಿದ ಯಶಸ್ಸು, ಸಾಧನೆ ಸಾಕಷ್ಟು ಯುವಜನತೆಗೆ ದೊಡ್ಡ ಪ್ರೇರಣೆಯಾಗಿದೆ.

- - -