ಸಾರಾಂಶ
ಸಿದ್ದಾಪುರ: ಉತ್ತರ ಕನ್ನಡ ಮತ್ತು ಶಿವಮೊಗ್ಗದ ಕಾಗೋಡುವಿನಲ್ಲಿ ಭೂಮಾಲೀಕರ ವಿರುದ್ಧ ಗೇಣಿದಾರರ ಶಾಂತಿಯುತವಾದ ಹೋರಾಟಗಳು ನಡೆದು ಕೊನೆಗೂ ಭೂಸುಧಾರಣಾ ಕಾಯ್ದೆ ೧೯೭೪ರಲ್ಲಿ ಜಾರಿಗೊಂಡಿತು. ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಈ ಕಾಯ್ದೆ ಜಾರಿಗೊಳಿಸಿ ಗೇಣಿದಾರರಿಗೆ ಭೂಮಿ ಒದಗಿಸಿದರು. ಈಗ ಈ ಕಾಯ್ದೆ ಜಾರಿಗೊಂಡ ಐವತ್ತನೇ ವರ್ಷದ ಸಂಭ್ರಮ ಎಲ್ಲೆಡೆ ನಡೆಯುತ್ತಿದೆ ಎಂದು ಶಿವಮೊಗ್ಗದ ಮಲೆನಾಡ ಹೋರಾಟ ಸಮಿತಿ ಸಂಚಾಲಕ ತಿ.ನ. ಶ್ರೀನಿವಾಸ್ ಹೇಳಿದರು.
ಅವರು ರೈತ ಹೋರಾಟಗಾರ ವೀರಭದ್ರ ಆರ್. ನಾಯ್ಕ ಅವರ ಜನ್ಮದಿನದ ಪ್ರಯುಕ್ತ ವೀರಭದ್ರ ನಾಯ್ಕ ಅಭಿಮಾನಿ ಬಳಗ ಪಟ್ಟಣದ ಶ್ರೀ ಗಂಗಾಂಬಿಕಾ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಿದ ಭೂಸುಧಾರಣಾ ಕಾಯ್ದೆ ಜಾರಿಯಾದ ಸುವರ್ಣ ಸಂಭ್ರಮದ ಪ್ರಯುಕ್ತ ಆಯೋಜಿಸಿದ ಚಿಂತನ ಶಿಬಿರದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಡಾ. ರಾಮಮನೋಹರ ಲೋಹಿಯಾ, ಗೋಪಾಲಗೌಡ, ದಿನಕರ ದೇಸಾಯಿ ಮುಂತಾದ ಅನೇಕರು ಹೋರಾಟ ನಡೆಸಿದರು. ನಿರಂತರ ೨೫ ವರ್ಷಗಳ ಕಾಲ ಕಾಗೋಡು ತಿಮ್ಮಪ್ಪ ಗೇಣಿದಾರರ ಹೋರಾಟ ನಡೆಸಿ ಯಶಸ್ವಿಯಾದರೆ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಗೇಣಿದಾರರು ಕಟ್ಟಬೇಕಿದ್ದ ಪರಿಹಾರದ ಹಣವನ್ನು ಸರ್ಕಾರವೇ ಭರಿಸಬೇಕು ಎನ್ನುವ ಕಾನೂನು ತಂದರು. ಅಂದು ನಡೆದ ಹೋರಾಟ ಇಂದು ಅರಣ್ಯ ಅತಿಕ್ರಮಣ ಹಕ್ಕಿಗೂ ನಡೆಯಬೇಕಿದೆ. ರಾಜಕಾರಣ ಮಾಡದೇ ಜನರ ಪರವಾಗಿ ಕೆಲಸ ಮಾಡಿದ ಅರಸು, ಕಾಗೋಡು ಅವರಿಗಿರುವ ಬದ್ಧತೆ ಇಂದಿನ ರಾಜಕಾರಣಿಗಳಿಗೆ ಇಲ್ಲ. ಜಾತಿ, ಪಕ್ಷ, ವರ್ಗದ ಹೊರತಾದ ಹೋರಾಟ ಮುಖ್ಯ ಎಂದರು.ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ. ನಾಗೇಶ ನಾಯ್ಕ ಕಾಗಾಲ ಮಾತನಾಡಿ, ಭೂ ಸುಧಾರಣೆ ಕಾಯ್ದೆ ಜಾರಿಯಾದಂತೆ ಈಗ ಅರಣ್ಯ ಹಕ್ಕು ಕಾಯ್ದೆ ಜಾರಿಯಾಗಬೇಕು. ಮೇಲ್ವರ್ಗ, ಕೆಳವರ್ಗ ಸಂಘರ್ಷವಿಲ್ಲದೇ ಪ್ರಬಲ ಹೋರಾಟದ ಮೂಲಕ ಸಾಮಾಜಿಕ ನ್ಯಾಯ ಪಡೆಯಬೇಕು. ಸಾಮಾಜಿಕ ಬದ್ಧತೆ ಈಗ ಉಳಿದಿಲ್ಲ. ನಮ್ಮ ರಾಜ್ಯದ ರಾಜಕೀಯ ವ್ಯವಸ್ಥೆ, ಆಡಳಿತಶಾಹಿ ನ್ಯಾಯಬದ್ಧವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಚಿಂತನ ಶಿಬಿರ ಉದ್ಘಾಟಿಸಿದ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ ಮಾತನಾಡಿ, ನಮ್ಮ ರಾಜ್ಯ ಕಂಡ ಮಹತ್ವದ ಸಂದರ್ಭಗಳಲ್ಲಿ ಕರ್ನಾಟಕ ಏಕೀಕರಣ ಮತ್ತು ಭೂಸುಧಾರಣಾ ಕಾಯ್ದೆ ಜಾರಿ ಪ್ರಮುಖವಾದದ್ದು. ಭೂಮಾಲೀಕರ ದೌರ್ಜನ್ಯ, ಶೋಷಣೆ ಕೊನೆಗಾಣಿಸಿ, ರೈತರಲ್ಲಿ ಸ್ವಾಭಿಮಾನ, ಆತ್ಮಗೌರವ ತಂದದ್ದು ಭೂಸುಧಾರಣಾ ಕಾಯ್ದೆ. ತಮ್ಮ ಜನ್ಮದಿನವನ್ನು ಈ ನೆನಪಿನ ಮೂಲಕ ಆಚರಿಸಿಕೊಳ್ಳುತ್ತಿರುವುದು ಮಾದರಿಯಾದದ್ದು ಎಂದರು.ಸಾಮಾಜಿಕ ಹೋರಾಟಗಾರ ಶಿವಾನಂದ ಹೊನ್ನೆಗುಂಡಿ, ಚಂದ್ರಪ್ಪ ಮಾಸ್ತರ ಸೊರಬ, ನಿವೃತ್ತ ಮುಖ್ಯಾಧ್ಯಾಪಕ ಎಲ್.ಜಿ. ನಾಯ್ಕ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ರೈತ ಮುಖಂಡ ವೀರಭದ್ರ ಆರ್. ನಾಯ್ಕ ಅಧ್ಯಕ್ಷತೆವಹಿಸಿ ಮಾತನಾಡಿದರು.
ವಿನಾಯಕ ನಾಯ್ಕ ಸ್ವಾಗತಿಸಿದರು. ಎಸ್. ರವಿ ಸುಂಕತ್ತಿ ವಂದಿಸಿದರು. ಸಂಘಟಕ ರಾಘವೇಂದ್ರ ನಾಯ್ಕ ಕವಂಚೂರು ಕಾರ್ಯಕ್ರಮ ನಿರೂಪಿಸಿದರು.