ಸಾರಾಂಶ
ರಾಮನಿಗೆ ಪ್ರಾಣಪ್ರತಿಷ್ಠೆಯ ಸಂಭ್ರಮದ ಹಿನ್ನೆಲೆಯಲ್ಲಿ ಉಡುಪಿ ಕೃಷ್ಣನಿಗೆ ಪುತ್ತಿಗೆ ಶ್ರೀಗಳು ಸುವರ್ಣಕವಚ ತೋಡಿಸಿ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ ಕೃಷ್ಣಮಠದಲ್ಲಿರುವ ಅಯೋಧ್ಯೆಯಿಂದ ತರಲಾದ ಆಂಜನೇಯ ವಿಗ್ರಹಕ್ಕೆ ಎದೆಯಲ್ಲಿ ರಾಮಸೇತೆಯ ದರ್ಶನ ಮಾಡುವ ಅಲಂಕಾರ ಮಾಡಲಾಗಿತ್ತು.
ಕನ್ನಡಪ್ರಭ ವಾರ್ತೆ ಉಡುಪಿ
ಅಯೋಧ್ಯೆಯಲ್ಲಿ ರಾಮನ ಪ್ರಾಣಪ್ರತಿಷ್ಠೆಯನ್ನು ಉಡುಪಿ ಜಿಲ್ಲೆಯ ಎಲ್ಲ ದೇವಾಲಯಗಳಲ್ಲಿ ಆಚರಿಸಲಾಯಿತು. ಅಯೋಧ್ಯೆಯ ಕಾರ್ಯಕ್ರಮಗಳ ನೇರ ಪ್ರಸಾರ ವೀಕ್ಷಣೆ, ಭಜನೆ, ಪೂಜೆ, ಹೋಮ, ಮಧ್ಯಾಹ್ನ ಮತ್ತು ರಾತ್ರಿ ಊಟ ಇತ್ಯಾದಿಗಳು ನಡೆದವು.ಮುಖ್ಯವಾಗಿ ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಅಖಂಡ ಭಜನೆ ಮತ್ತು ಅಯೋಧ್ಯೆಯ ಕರಸೇವೆಯಲ್ಲಿ ಭಾಗವಹಿಸಿದ್ದವರಿಗೆ ಗೌರವಾರ್ಪಣೆಗಳು ನಡೆದವು.
ಮಧ್ಯಾಹ್ನ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿಗೆ ಲಡ್ಡು ಪ್ರಸಾದ ವಿತರಣೆ, ಅನ್ನಪ್ರಸಾದದೊಂದಿಗೆ ಹಾಲು ಪಾಯಸ ವಿತರಣೆನಡೆಸಲಾಯಿತು. ಕೃಷ್ಣಮಠದಲ್ಲಿ ಸಾಮಗಾನವನ್ನು ಆಯೋಜಿಸಲಾಗಿತ್ತು.ಅಖಂಡ ಭಜನೆಗೆ ಚಾಲನೆ ನೀಡಿದ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು, ಭಕ್ತರೊಂದಿಗೆ ಕುಳಿತು ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠೆಯ ಕಾರ್ಯಕ್ರಮಗಳ ನೇರಪ್ರಸಾರವನ್ನು ವೀಕ್ಷಿಸಿದರು.ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾರ್ಕಳ ಶಾಸಕ ಸುನಿಲ್ ಕುಮಾರ್, ಮಾಜಿ ಶಾಸಕ ರಘುಪತಿ ಭಟ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಿಯೋಜಿತ ಅಧ್ಯಕ್ಷ ಕಿಶೋರ್ ಕುಮಾರ್ ಮುಂತಾದವರಿದ್ದರು.
* ಸುವರ್ಣ ಕವಚ ಅಲಂಕಾರರಾಮನಿಗೆ ಪ್ರಾಣಪ್ರತಿಷ್ಠೆಯ ಸಂಭ್ರಮದ ಹಿನ್ನೆಲೆಯಲ್ಲಿ ಉಡುಪಿ ಕೃಷ್ಣನಿಗೆ ಪುತ್ತಿಗೆ ಶ್ರೀಗಳು ಸುವರ್ಣಕವಚ ತೋಡಿಸಿ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿದರು.
ಅಲ್ಲದೆ ಕೃಷ್ಣಮಠದಲ್ಲಿರುವ ಅಯೋಧ್ಯೆಯಿಂದ ತರಲಾದ ಆಂಜನೇಯ ವಿಗ್ರಹಕ್ಕೆ ಎದೆಯಲ್ಲಿ ರಾಮಸೇತೆಯ ದರ್ಶನ ಮಾಡುವ ಅಲಂಕಾರ ಮಾಡಲಾಗಿತ್ತು. ಮುಖ್ಯಪ್ರಾಣ ದೇವರಿಗೆ ಸೀತಾರಾಮವನ್ನು ತಲೆ ಮೇಲೆ ಹೊತ್ತುಕೊಂಡಿರುವ ಅಲಂಕಾರ ಮಾಡಿದ್ದು ವಿಶೇಷವಾಗಿತ್ತು. ಸಾವಿರಾರು ಮಂದಿ ಭಕ್ತರೂ ಈ ಎಲ್ಲ ಅಲಂಕಾರಗಳನ್ನು ನೋಡಿ ಸಂತಸ ವ್ಯಕ್ತಪಡಿಸಿದರು.