ಗೋಲ್ಡನ್‌ ಟೆಂಪಲ್‌: ಗುರು ಪದ್ಮ ಸಂಭವ ಚಿತ್ರಪಟ ಪ್ರದರ್ಶನ

| Published : Mar 10 2025, 12:16 AM IST

ಸಾರಾಂಶ

ಗುರು ಪದ್ಮ ಸಂಭವ ಚಿತ್ರಪಟವನ್ನು ಭಾನುವಾರ ಅನಾವರಣಗೊಳಿಸಲಾಯಿತು. ದೇಶ, ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕರು ಪಾಲ್ಗೊಂಡು ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ಸಮೀಪದ ಬೈಲುಕುಪ್ಪೆ ಟಿಬೇಟಿಯನ್ ನಿರಾಶ್ರಿತ ಶಿಬಿರದ ಗೋಲ್ಡನ್ ಟೆಂಪಲ್ ಆವರಣದಲ್ಲಿ ವಿಶ್ವದ ಅತಿ ದೊಡ್ಡ ಚಿತ್ರಪರದೆ ಎಂದು ಖ್ಯಾತಿ ಹೊಂದಿರುವ ಗುರು ಪದ್ಮ ಸಂಭವ ಚಿತ್ರಪಟವನ್ನು ಭಾನುವಾರ ಬೆಳಗ್ಗೆ ಅನಾವರಣಗೊಳಿಸಲಾಯಿತು.

ಟಿಬೆಟಿಯನ್ ನೂತನ ವರ್ಷ ಲೋಸಾರ್ ಅಂಗವಾಗಿ ವಾರ್ಷಿಕವಾಗಿ ಎರಡು ಚಿತ್ರಪಟಗಳನ್ನು ಅನಾವರಣಗೊಳಿಸುವ ಕಾರ್ಯಕ್ರಮ ನಡೆಯುತ್ತಿದೆ. ಗುರು ಪದ್ಮ ಸಂಭವ ಚಿತ್ರಪಟ ಕೇವಲ ಅರ್ಧ ಗಂಟೆಗಳ ಕಾಲ ಪ್ರದರ್ಶನ ಮಾಡಿ ಸಾಮೂಹಿಕವಾಗಿ ಪೂಜೆ ಸಲ್ಲಿಸಲಾಯಿತು.

ಕೊಪ್ಪ ಸಮೀಪದ ಟಿಬೆಟಿಯನ್ ಶಿಬಿರದ ಗೋಲ್ಡನ್ ಟೆಂಪಲ್ ಆವರಣದಲ್ಲಿ ಏಳು ಅಂತಸ್ತಿನ ಕಟ್ಟಡದ ಮೇಲೆ ಬೃಹತ್ ಕಬ್ಬಿಣದ ಗೋಪುರ ಅಳವಡಿಸಲಾಗಿದ್ದು, ಇದರಲ್ಲಿ 200 ಅಡಿ ಎತ್ತರ 180 ಅಡಿಗಳಷ್ಟು ಅಗಲವಿರುವ ಚಿತ್ರಪಟವನ್ನು ಮುಂಜಾನೆ 7.30ರಿಂದ ಅರ್ಧ ಗಂಟೆ ಪ್ರದರ್ಶಿಸಿ ಟಿಬೆಟಿಯನ್ ಧರ್ಮಗುರುಗಳು ವಿಶೇಷ ಪೂಜೆ ಸಲ್ಲಿಸಿದರು. ಕಳೆದ 25 ವರ್ಷಗಳಿಂದ ಟಿಬೆಟ್ ನೂತನ ವರ್ಷದ ಸಂಭ್ರಮಾಚರಣೆ ಅವಧಿಯ ನಡುವೆ ಈ ರೀತಿ ಚಿತ್ರಪಟಗಳನ್ನು ಅನಾವರಣಗೊಳಿಸಿ ಪೂಜೆ ಸಲ್ಲಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ.

ಈ ಸಂದರ್ಭ ಬೈಲುಕುಪ್ಪೆಯ ಶಿಬಿರ ಸೇರಿದಂತೆ ದೇಶ ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಿತ್ರಪಟವನ್ನು ವೀಕ್ಷಿಸಿ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಸುಮಾರು 180 ಅಡಿ ಉದ್ದವಿರುವ ಈ ಚಿತ್ರಪಟವನ್ನು ನೂರಕ್ಕೂ ಅಧಿಕ ಬೌದ್ಧ ಭಿಕ್ಷುಗಳು ಗೋಲ್ಡನ್ ಟೆಂಪಲ್ ಕಟ್ಟಡದ ಬಳಿಯಿಂದ ಸಾಂಪ್ರದಾಯಿಕ ವಾಲಗದೊಂದಿಗೆ ಹೊತ್ತು ತಂದು ಪ್ರದರ್ಶನ ಮಾಡಿ ಮತ್ತೆ ಮಂದಿರದ ಆವರಣಕ್ಕೆ ತಂದು ಇರಿಸಿದರು.

ಇದಕ್ಕೂ ಮುನ್ನ ಬೋಧ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಬೌದ್ಧ ಭಿಕ್ಷುಗಳು ವಿಶ್ವಶಾಂತಿಗಾಗಿ ಸಾಮೂಹಿಕ ಪೂಜೆ ಸಲ್ಲಿಸಿದರು.

ವಿಶೇಷ ಕಾರ್ಯಕ್ರಮದಲ್ಲಿ ಬೌದ್ಧ ಬಿಕ್ಷುಗಳು, ಟಿಬೆಟಿಯನ್ ನಾಗರಿಕರು ಸೇರಿದಂತೆ ಸುಮಾರು 5000ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

ಕುಶಾಲನಗರ ಸಮೀಪದ ಕೊಪ್ಪ ಬಳಿ ಇರುವ ಗೋಲ್ಡನ್ ಟೆಂಪಲ್ ಕಟ್ಟಡದಲ್ಲಿ ಕಳೆದ 25 ವರ್ಷಗಳಿಂದ ಈ ಚಿತ್ರಪಟವನ್ನು ಸಂರಕ್ಷಣೆ ಮಾಡಲಾಗಿದ್ದು, ಇದೇ ರೀತಿ ಈ ತಿಂಗಳ 14ರಂದು ಮತ್ತೊಂದು ಬೃಹತ್ ಬುದ್ಧ ಅಮಿತಾಯುಶ್ ಚಿತ್ರಪಟವನ್ನು ಅನಾವರಣಗೊಳಿಸಲಿದ್ದಾರೆ.