ಕನ್ನಡಪ್ರಭ ವಾರ್ತೆ ನಾಪೋಕ್ಲು
ಕೊಡಗು ಜಿಲ್ಲಾ ಗೊಲ್ಲ ಸಮಾಜದ ವತಿಯಿಂದ ಜನಾಂಗ ಬಾಂಧವರಿಗಾಗಿ ಆಯೋಜಿಸಲಾಗಿದ್ದ ಕ್ರಿಕೆಟ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ಅಯ್ಯಂಗೇರಿಯ ಬಿದ್ದಿಯಂಡ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.ಮಡಿಕೇರಿ ನಾಡ್ ಅರೆಯಂಡ ತಂಡ ರನ್ನರ್ ಅಪ್ ಪ್ರಶಸ್ತಿಗಳಿಸಿತು.ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ವಿತರಿಸಲಾಯಿತು.
ಪುರುಷರ ವಿಭಾಗದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪೇರೂರಿನ ಕೋಡಿಯಂಡ ತಂಡ ಚಾಂಪಿಯನ್ ಆಯಿತು. ಅಯ್ಯಂಗೇರಿಯ ಆಚಿರ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮಹಿಳಾ ವಿಭಾಗದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಕಕ್ಕಬ್ಬೆಯ ಕೈಬುಲಿರ ತಂಡ ಚಾಂಪಿಯನ್ ಆದರೆ ಅಯ್ಯಂಗೇರಿಯ ಬಿದ್ದಿಯಂಡ ರನ್ನರ್ ಅಪ್ ಪ್ರಶಸ್ತಿ ಗಳಿಸಿತು. ಇಲ್ಲಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಪುರುಷರಿಗೆ ಕ್ರಿಕೆಟ್ ಟೂರ್ನಿ, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಹಗ್ಗ ಜಗ್ಗಾಟ ಹಾಗೂ ಶಾಲಾ ಮಕ್ಕಳಿಗೆ ಆಟೋಟ ಸ್ಪರ್ಧೆಗಳು ನಡೆದವು. ಕೊಡಗು ಜಿಲ್ಲಾ ಗೊಲ್ಲ ಸಮಾಜದ ಅಧ್ಯಕ್ಷ ಅರೆಯಂಡ ರಘು ಭೀಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮೇಚಿರ ಸುಭಾಷ್ ನಾಣಯ್ಯ ಮಾತನಾಡಿ, ಸಮುದಾಯದ ಚಟುವಟಿಕೆಗಳಲ್ಲಿ ಎಲ್ಲರೂ ಪಾಲ್ಗೊಂಡಾಗ ಸಂಘಟನೆ ಬಲವಾಗುತ್ತದೆ. ಸಮಾಜದಲ್ಲಿ ಸಾಮರಸ್ಯ ಮೂಡುತ್ತದೆ ಎಂದರು. ಕೊಡಗು ಜಿಲ್ಲಾ ಗೊಲ್ಲ ಸಮಾಜದ ಉಪಾಧ್ಯಕ್ಷ ಧನರಾಜ ಗಣಪತಿ, ಕಾರ್ಯದರ್ಶಿ ಚೋಕಿರ ವಾಸುದೇವ, ಖಜಾಂಚಿ ಚೋಕಿರ ಬಾಬಿ ಭೀಮಯ್ಯ, ಸಹ ಕಾರ್ಯದರ್ಶಿ ಕೈಬುಲಿರ ಮೀನಾ, ಕ್ರೀಡಾ ಸಮಿತಿ ಅಧ್ಯಕ್ಷ ತುತ್ತಿಯಂಡ ಅಜಂತ ನಾಣಯ್ಯ, ಸದಸ್ಯರು ಉಪಸ್ಥಿತರಿದ್ದರು.