ಹಲಗೂರು:

ಸಮೀಪದ ಗೊಲ್ಲರಹಳ್ಳಿಯಲ್ಲಿ ಕಾಳಮ್ಮ ದೇವಿಯ ಜಾತ್ರಾ ಮಹೋತ್ಸವ 4 ದಿನಗಳ ಕಾಲ ವಿವಿಧ ಪೂಜಾ ಪುನಸ್ಕಾರಗಳೊಡನೆ ಕೊಂಡೋತ್ಸವದೊಂದಿಗೆ ಸಂಪನ್ನಗೊಂಡಿತು.

ಏ.5ರಂದು ಸಂಜೆ ತಟ್ಟೆ ಪೂಜೆಯಿಂದ ಪ್ರಾರಂಭಗೊಂಡ ಜಾತ್ರಾ ಮಹೋತ್ಸವ ದೇವಸ್ಥಾನದ ಆವರಣದಲ್ಲಿ ಹೋಮ, ಮಜ್ಜನ ಪೂಜಾ ಕಾರ್ಯಕ್ರಮಗಳು ನಡೆದು ನಂತರ ಭಕ್ತರು ಎಳ ವಾರವನ್ನು ಕಟ್ಟಿಕೊಂಡು ಕಾಳಮ್ಮ ದೇವಿಯ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆ ಹೊರಟು ಪ್ರಮುಖ ರಸ್ತೆಯ ಮುಖಾಂತರ ಬಂದು ಕೊಂಡದ ಬಾಯಿಗೆ ಸೌದೆಯನ್ನು ಹಾಕಲಾಯಿತು.

ನಂತರ ರಾತ್ರಿ ಸಿದ್ದಪ್ಪಾಜಿ ದೇವಸ್ಥಾನದಿಂದ ಕಂಡಾಯ ತಂದು ಕಾಳಮ್ಮದೇವಿ ಮತ್ತು ಸಿದ್ದಪ್ಪಾಜಿ ದೇವರನ್ನು ಭೀಮ ನದಿಯ ತೀರದಿಂದ ಹೂ ಹೊಂಬಾಳೆ ಸಮೇತವಾಗಿ ತಂಬಿಟ್ಟಿನ ಆರತಿಯೊಂದಿಗೆ ದೇವಸ್ಥಾನಕ್ಕೆ ಕರೆ ತಂದು ಅಪಾರ ಭಕ್ತಾದಿಗಳ ನಡುವೆ ಬುಧವಾರ ಬೆಳಗಿನ ಜಾವ ಕೊಂಡೋತ್ಸವ ನಡೆದು ಜಾತ್ರಾ ಮಹೋತ್ಸವ ದಲ್ಲಿ ಅಪಾರ ಭಕ್ತಾದಿಗಳು ಪಾಲ್ಗೊಂಡು ದೇವಿಗೆ ತಂಬಿಟ್ಟಿನ ಆರತಿ ಬೆಳಗಿ, ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ದೇವಿಯಲ್ಲಿ ಪ್ರಾರ್ಥಿಸಿದರು. ಮುತ್ತೈದೆಯರು ತಂಬಿಟ್ಟಿನ ಆರತಿಯ ಜೊತೆ ಅರಿಶಿಣದ ನೀರು,ಬೇವಿನ ಸೊಪ್ಪು ತಂದು ದೇವಸ್ಥಾನದ ಆವರಣದ ಕಲ್ಲಿನ ಮೇಲೆ ಹಾಕುವ ಮುಖಾಂತರ ಯಾವುದೇ ರೋಗ ರುಜಿನೆಗಳು ಬರದಂತೆ ಆರೋಗ್ಯ ನೀಡುವಂತೆ ಪ್ರಾರ್ಥಿಸಿದರು.

ಬುಧವಾರ ಸಾಯಂಕಾಲ ನೂತನವಾಗಿ ಮಾಡಿಸಿರುವ ರಥದಲ್ಲಿ ಕಾಳಮ್ಮ ದೇವಿಯ ಮೂರ್ತಿಯನ್ನು ಇಟ್ಟು ವಿವಿಧ ಪುಷ್ಪಗಳಿಂದ ರಥವನ್ನು ಅಲಂಕರಿಸಿ ಮೆರವಣಿಗೆ ನಡೆಸಲಾಯಿತು. ಸುತ್ತಮುತ್ತ ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


ಗ್ರಾಮದ ಜಿ.ಎಂ.ಮಹಾದೇವ ಮಾತನಾಡಿ, ಮೊದಲ ಬಾರಿಗೆ ನೂತನವಾಗಿ ತಯಾರಿಸಿರುವ ರಥದಲ್ಲಿ ನಮ್ಮ ಕಾಳಮ್ಮ ದೇವಿ ಮೂರ್ತಿ ಇಟ್ಟು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ನಂತರ ರಾತ್ರಿ ಪಲ್ಲಕ್ಕಿ ಉತ್ಸವವನ್ನು ಸಹ ನಡೆಸಲಾಯಿತು ಎಂದರು.

ಬಸವಣ್ಣ ಮಾತನಾಡಿ ಗ್ರಾಮದ ಎಲ್ಲ ಜನತೆ ಒಗ್ಗಟ್ಟಿನಿಂದ ದೇವರ ಕಾರ್ಯಗಳಲ್ಲಿ ಪಾಲ್ಗೊಂಡು ಗ್ರಾಮದ ಯಶಸ್ಸು ಹಾಗೂ ನಾಡಿನ ಯಶಸ್ವಿಗಾಗಿ ಪ್ರಾರ್ಥಿಸಿದರು ಎಂದರು.

ಈ ವೇಳೆ ಅರ್ಚಕರು, ನಾಡಗೌಡರು, ಯಜಮಾನರು, ಊರಿನ ಮುಖಂಡರು ಹಾಗೂ ಚುನಾಯಿತ ಪ್ರತಿನಿಧಿಗಳು ಪಾಲ್ಗೊಂಡಿದ್ದರು.