ಸಾರಾಂಶ
ತೀರ್ಥಹಳ್ಳಿ: ನಟಮಿತ್ರರು ಹವ್ಯಾಸಿ ಕಲಾ ಸಂಘದ ವತಿಯಿಂದ ಫೆ.14 ರಿಂದ 16 ರವರೆಗೆ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ರಂಗ ತಜ್ಞ ದಿ.ಎಚ್.ಎಸ್.ಯಜ್ಞನಾರಾಯಣ ಭಟ್ಟ ನೆನಪಿನಲ್ಲಿ ಗೊಂಬೆ ರಂಗೋತ್ಸವ ಮತ್ತು ಕಿರು ಚಿತ್ರೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಸಂದೇಶ್ ಜವಳಿ ಹೇಳಿದರು.
ತೀರ್ಥಹಳ್ಳಿ: ನಟಮಿತ್ರರು ಹವ್ಯಾಸಿ ಕಲಾ ಸಂಘದ ವತಿಯಿಂದ ಫೆ.14 ರಿಂದ 16 ರವರೆಗೆ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ರಂಗ ತಜ್ಞ ದಿ.ಎಚ್.ಎಸ್.ಯಜ್ಞನಾರಾಯಣ ಭಟ್ಟ ನೆನಪಿನಲ್ಲಿ ಗೊಂಬೆ ರಂಗೋತ್ಸವ ಮತ್ತು ಕಿರು ಚಿತ್ರೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಸಂದೇಶ್ ಜವಳಿ ಹೇಳಿದರು.ಪ್ರತಿದಿನ ಸಂಜೆ 7ಕ್ಕೆ ಆರಂಭಗೊಳ್ಳುವ ಮೂರು ದಿನಗಳ ಕಾಲದ ಈ ರಂಗೋತ್ಸವ ಉಚಿತ ಪ್ರವೇಶವಾಗಿದ್ದು ಮೂರು ನಾಟಕಗಳು, ಗೊಂಬೆಯಾಟ, ತೊಗಲು ಗೊಂಬೆ ಪ್ರದರ್ಶನ ಮತ್ತು ವಿಭಿನ್ನ ಮಹತ್ವದ ಕಥಾ ಹಿನ್ನೆಲೆಯುಳ್ಳ ಕಿರು ಚಿತ್ರೋತ್ಸವವನ್ನು ಒಳಗೊಂಡಿದೆ. ವಿಶೇಷವೆಂದರೆ ನಾಟಕಗಳಲ್ಲಿ ಸನ್ನಿವೇಶಕ್ಕೆ ಪೂರಕವಾಗಿ ಗೊಂಬೆಗಳನ್ನು ಬಳಸಿಕೊಳ್ಳಲಾಗುವುದು ಎಂದು ಮಂಗಳವಾರ ಪಟ್ಟಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ.14 ರಂದು ಮೈಸೂರು ರಂಗಾಯಣ ಅಭಿನಯದ ಮೈ ಫ್ಯಾಮಿಲಿ ನಾಟಕ, 15 ರಂದು ನಟಮಿತ್ರರು ತಂಡದ ಸುಪ್ರಭಾ ವಿಲಾಸ ಎಂಬ ತೊಗಲು ಬೊಂಬೆ ಪ್ರದರ್ಶನ ಮತ್ತು ಕಿರು ಚಿತ್ರೋತ್ಸವ, 16ರಂದು ಮಂಗಳೂರಿನ ಕಲಾಬಿ ತಂಡದವರಿಂದ ಎರಡನೇ ಮಹಾಯುದ್ಧದ ಹಿನ್ನೆಲೆಯ ಎ ಫ್ರೆಂಡ್ ಬಿಯಾಂಡ್ ದ ಫೆನ್ಸ್ ನಾಟಕ ಪ್ರದರ್ಶನಗೊಳ್ಳಲಿದೆ. ಈ ಬಾರಿಯ ಯು.ಸೀತಾರಾಮಾಚಾರ್ ಪ್ರಶಸ್ತಿಗೆ ಕುಂದಾಪುರ ತಾಲೂಕಿನ ಗುಡ್ಡೇಅಂಗಡಿಯ ರೇವತಿರಾವ್ ಕುಂದನಾಡು ಆಯ್ಕೆಯಾಗಿದ್ದು, ಫೆ.16 ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.ಸಂಘದ ಸದಸ್ಯರಾದ ಸತೀಶ್ ಹೊರಣಿ, ಸುಬ್ರಮಣ್ಯ, ನಿರಂಜನ್, ಚೇತನ್, ಶ್ರೀಪಾದ, ಶಿವಾಜಿ, ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.