ಗೋಣಿಕೊಪ್ಪ ದಸರಾ: ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ
KannadaprabhaNewsNetwork | Published : Oct 17 2023, 12:45 AM IST
ಗೋಣಿಕೊಪ್ಪ ದಸರಾ: ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ
ಸಾರಾಂಶ
ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಸಮಿತಿಯ 45ನೇ ವರ್ಷದ ಜನೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ ಗೋಣಿಕೊಪ್ಪ ದಸರಾ ಜನೋತ್ಸವಕ್ಕೆ ತನ್ನದೇ ಆದ ಇತಿಹಾಸವಿದ್ದು, ಹಲವು ಮಹಾನೀಯರು ಆರಂಭಿಸಿದ ದಸರಾ ಇತ್ತೀಚಿನ ವರ್ಷಗಳಲ್ಲಿ ಮತ್ತಷ್ಟು ವೈಭವಯುತವಾಗಿ ಮುನ್ನಡೆಯುತ್ತಿದೆ. ದೇವಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ಈ ನಾಡು ಸಮಗ್ರ ಅಭಿವೃದ್ಧಿ ಕಾಣಲಿ. ಜನೋತ್ಸವದಿಂದ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಸಿಗುವಂತಾಗಲಿ ಎಂದು ಕೊಡಗು ಉಸ್ತುವಾರಿ ಸಚಿವರು, ಸಣ್ಣ ನೀರಾವರಿ,ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಸ್.ಎನ್.ಬೋಸರಾಜ್ ಹೇಳಿದರು. ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಸಮಿತಿಯ 45ನೇ ವರ್ಷದ ಜನೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಶಾಂತಿ, ನೆಮ್ಮದಿ ಜೊತೆಯಲ್ಲಿ ಜನರ ಅಭಿಪ್ರಾಯದಂತೆ, ಭಾವನೆಯಂತೆ ನಡೆದುಕೊಳ್ಳುವ ಮೂಲಕ ಎಲ್ಲ ಕಾರ್ಯಕ್ರಮಗಳಿಗೆ ಸಹಾಯ ನೀಡಿ ಮುಂದುವರಿಯುತ್ತಿದೆ. ಕ್ಷೇತ್ರದ ಶಾಸಕರು ಅಭಿವೃದ್ಧಿ ಜೊತೆಯಲ್ಲಿ ಕಾರ್ಯಕ್ರಮಗಳನ್ನು ಕೂಡ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಮುಂದಿನ ಸಾಲಿನಲ್ಲಿ ದಸರಾ ಉತ್ಸವ ಮತ್ತಷ್ಟು ಉತ್ತಮವಾಗಿ ಮೂಡಿ ಬರುವಂತಾಗಲಿ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಗೋಣಿಕೊಪ್ಪ ದಸರಾ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ದಸರಾ ಸಮಿತಿಯ ಕೋರಿಕೆಯಂತೆ ಈ ಬಾರಿ 60 ಲಕ್ಷ ರು. ಅನುದಾನವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಮಡಿಕೇರಿ ದಸರಾ ಉತ್ಸವಕ್ಕೂ ಹೆಚ್ಚಿನ ಅನುದಾನ ನೀಡಿದ್ದಾರೆ. ಮುಂದೆ ನಡೆಯುವ ಕಾವೇರಿ ಸಂಕ್ರಮಣಕ್ಕೂ ಕೂಡ ಸರ್ಕಾರ ಅನುದಾನ ನೀಡುವ ಮೂಲಕ ಕೊಡಗಿನ ಹಬ್ಬಗಳ ಯಶಸ್ವಿಗೆ ಮುಖ್ಯಮಂತ್ರಿಗಳು ಸಹಕಾರ ನೀಡಿದ್ದಾರೆ. ವೇದಿಕೆಗಳಲ್ಲಿ ಸಾಕಷ್ಟು ಪ್ರತಿಭೆಗಳಿಗೆ ಅವಕಾಶ ಸಿಗುವಂತಾಗಲಿ ಎಂದರು. ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆ ವಹಿಸಿದ್ದರು. ದಸರಾ ಸಮಿತಿಯ ಮಾಜಿ ಅಧ್ಯಕ್ಷ ಬಿ.ಎನ್.ಪ್ರಕಾಶ್ ಪ್ರಸ್ತಾವಿಕವಾಗಿ ಮಾತನಾಡಿ, ದಸರಾ ಜನೋತ್ಸವ ನಡೆದು ಬಂದ ಹಾದಿಯ ಬಗ್ಗೆ ಸಮಗ್ರ ವರದಿ ಮಂಡಿಸಿದರು. ಸ್ಥಳೀಯ ಪ್ರಾಥಮಿಕ ಶಾಲಾ ಮೈದಾನದ ಕಾವೇರಿ ಕಲಾ ವೇದಿಕೆಯಲ್ಲಿ ಜರುಗಿದ ಸಭೆಯಲ್ಲಿ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್‌ನೇಗಿ ಮತ್ತಿತರರು ಹಾಜರಿದ್ದರು.