ಗೋಣಿಕೊಪ್ಪ: ದಸರಾ ವೇದಿಕೆಯಲ್ಲಿ ಮಹಿಳೆಯರ ದರ್ಬಾರ್...!
KannadaprabhaNewsNetwork | Published : Oct 23 2023, 12:16 AM IST
ಗೋಣಿಕೊಪ್ಪ: ದಸರಾ ವೇದಿಕೆಯಲ್ಲಿ ಮಹಿಳೆಯರ ದರ್ಬಾರ್...!
ಸಾರಾಂಶ
ಮುಂಜಾನೆಯಿಂದಲೇ ನಗರದ ಪ್ರಾಥಮಿಕ ಶಾಲಾ ಮೈದಾನಕ್ಕೆ ಆಗಮಿಸಿದ ಮಹಿಳೆಯರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನ ಸೆಳೆದರು. ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಹೆಚ್ಚಿನ ತಂಡಗಳು ಭಾಗವಹಿಸುವ ಮೂಲಕ ಸ್ಪರ್ಧೆಯಲ್ಲಿ ಮಹಿಳೆಯರು ಶಕ್ತಿಪ್ರದರ್ಶನ ತೋರಿದರು.
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ ಸಾಕಷ್ಟು ಮಹಿಳೆಯರು ತಮ್ಮ ದೈನಂದಿನ ಚಟುವಟಿಕೆಗಳಿಗೆ ವಿರಾಮ ಹೇಳುವ ಮೂಲಕ ಭಾನುವಾರ ಇಲ್ಲಿನ ಕಾವೇರಿ ದಸರಾ ಸಮಿತಿಯ ಆಶ್ರಯದಲ್ಲಿ ನಡೆದ ಮಹಿಳಾ ದಸರಾದಲ್ಲಿ ಪಾಲ್ಗೊಂಡು ಸಂಭ್ರಮದಿಂದ ದಿನ ಕಳೆದರು. ಮುಂಜಾನೆಯಿಂದಲೇ ನಗರದ ಪ್ರಾಥಮಿಕ ಶಾಲಾ ಮೈದಾನಕ್ಕೆ ಆಗಮಿಸಿದ ಮಹಿಳೆಯರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನ ಸೆಳೆದರು. ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಹೆಚ್ಚಿನ ತಂಡಗಳು ಭಾಗವಹಿಸುವ ಮೂಲಕ ಸ್ಪರ್ಧೆಯಲ್ಲಿ ಮಹಿಳೆಯರು ಶಕ್ತಿ ಪ್ರದರ್ಶನ ತೋರಿದರು. ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಬಿಜೆಪಿ ರಾಜ್ಯ ಶಿಸ್ತು ಸಮಿತಿಯ ಸದಸ್ಯೆ ಪಟ್ಟಡ ರೀನಾ ಪ್ರಕಾಶ್, ಹಾಕಿ ಕೂರ್ಗ್ ಉಪಾಧ್ಯಕ್ಷ ಮಾಪಂಗಡ ಯಮುನಾ ಚಂಗಪ್ಪ ಹಾಗೂ ಅತಿಥಿಗಳು ಒಂದು ತಂಡವಾಗಿ ಹಗ್ಗ ಜಗ್ಗಾಟದಲ್ಲಿ ಭಾಗವಹಿಸಿ ಗಮನ ಸೆಳೆದರು. ಪ್ರದರ್ಶನ ಪಂದ್ಯದಲ್ಲಿ ಅತಿಥಿಗಳ ತಂಡ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.ಮಹಿಳೆಯರ ಥ್ರೋ ಬಾಲ್ ನಲ್ಲಿ ಗ್ರಾಮೀಣ ಭಾಗದ ವಿವಿಧ ತಂಡಗಳು ಭಾಗವಹಿಸಿ ತೀವ್ರ ಸ್ಪರ್ಧೆ ನೀಡಿದರು. ಮನ್ನಕ್ಕಮನೆ ಸೌಮ್ಯಬಾಲು ಅಧ್ಯಕ್ಷತೆಯಲ್ಲಿ 8 ನೇ ವರ್ಷದ ಮಹಿಳಾ ದಸರಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಪಕ್ಷದ ಶಿಸ್ತು ಸಮಿತಿ ಸದಸ್ಯರಾದ ಪಟ್ಟಡ ರೀನಾ ಪ್ರಕಾಶ್, ಹಾಕಿ ಕೂರ್ಗ್ ಉಪಾಧ್ಯಕ್ಷೆ ಮಾಪಂಗಡ ಯಮುನಾ ಚಂಗಪ್ಪ, ಡಾ.ಗ್ರೀಷ್ಮ ಬೋಜಮ್ಮ ಸೇರಿದಂತೆ ಇನ್ನಿತರ ಗಣ್ಯರು ಸಭೆಯಲ್ಲಿ ಮಾತನಾಡಿದರು. ಅತಿಥಿಗಳಾಗಿ ಮಹಿಳಾ ಸಮಾಜ ಅಧ್ಯಕ್ಷೆ ಕಟ್ಟೆರ ಉತ್ತರೆ ಅಪ್ಪಚ್ಚು, ಗ್ರಾ.ಪಂ. ಉಪಾಧ್ಯಕ್ಷೆ ವೈ.ಎಂ.ಸವಿತ, ಸದಸ್ಯೆ ಚೈತ್ರ ಬಿ.ಚೇತನ್ ಉಪಸ್ಥಿತರಿದ್ದರು. ಚೇಂದಂಡ ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ಕಾರ್ಯದರ್ಶಿ ಕೊಣಿಯಂಡ ಬೋಜಮ್ಮ, ಸ್ವಾಗತಿಸಿ,ವಂದಿಸಿದರು. ಮಹಿಳಾ ದಸರಾ ಅಂಗವಾಗಿ ಹೂವಿನ ಅಲಂಕಾರ ಸ್ಪರ್ಧೆ, ನ್ರತ್ಯ ಸ್ಪರ್ಧೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ನಡೆದವು. ಸಾಧಕ ಮಹಿಳೆಯರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಸಾಹಿತಿ ರಂಜಿತಾ ಕಾರ್ಯಪ್ಪ, ಮಹಿಳಾ ಪತ್ರಿಕಾ ವಿತರಕಿ ಜಮುನಾ ವಸಂತ್, ಗಾಯಕಿ ಪುತ್ತಮನೆ ವಿದ್ಯಾ ಜಗದೀಶ್, ನ್ಯಾಷನಲ್ ಅಕಾಡೆಮಿ ಮುಖ್ಯಸ್ಥೆ ಅಪ್ಪನೆರವಂಡ ಶಾಂತಿ ಅಚ್ಚಪ್ಪ, ಹಿರಿಯ ಪೌರಕಾರ್ಮಿಕ ಗೌರಿ ಗಣೇಶ್, ಕ್ರೀಡಾ ಸಾಧಕಿ ಮಾರಮಡ ಮಾಚಮ್ಮ, ಸೂಪರ್ ಸ್ಟಾರ್ ರೈತ ಮಹಿಳೆ ರಶ್ಮಿ ಬಾನುಪ್ರಕಾಶ್, ಕ್ರೀಡಾ ಸಾಧಕಿ ತೆಕ್ಕಡೆ ತುಳಸಿ, ಪ್ರಥಮ ಉದ್ಯೋಗ ಖಾತ್ರಿ ಗುತ್ತಿಗೆದಾರ ಮಹಿಳೆ ಧನಲಕ್ಷ್ಮಿ, ಅಥ್ಲೆಟಿಕ್ ಶ್ರಾವ್ಯ ನಾಚಪ್ಪ, ಮಹಿಳಾ ಛಾಯಾಗ್ರಾಹಕಿ ಜಯಲಕ್ಷ್ಮೀ, ಯೋಗ ಸಾಧಕಿ ಅಮೃತ ರಾಕೇಶ್ ಇವರನ್ನು ಗೌರವಿಸಲಾಯಿತು.